ADVERTISEMENT

ಉಗ್ರರಿಗೆ ಹಣಕ್ಕಾಗಿ ಪಾಕ್‌ನ ಎಂಬಿಬಿಎಸ್ ಸೀಟು ಕಾಶ್ಮೀರಿಗರಿಗೆ ಮಾರಾಟ: ಪೊಲೀಸ್

ಡೆಕ್ಕನ್ ಹೆರಾಲ್ಡ್
Published 18 ಆಗಸ್ಟ್ 2021, 15:33 IST
Last Updated 18 ಆಗಸ್ಟ್ 2021, 15:33 IST
ಸಾಂದರ್ಭಿಕ ಚಿತ್ರ (ಪಿಟಿಐ)
ಸಾಂದರ್ಭಿಕ ಚಿತ್ರ (ಪಿಟಿಐ)   

ಶ್ರೀನಗರ: ಉಗ್ರ ಚಟುವಟಿಕೆಗಳಿಗೆ ಹಣಕಾಸು ಒದಗಿಸಲು ಪಾಕಿಸ್ತಾನದ ಎಂಬಿಬಿಎಸ್‌ ಸೀಟುಗಳನ್ನು ಕಾಶ್ಮೀರದ ವಿದ್ಯಾರ್ಥಿಗಳಿಗೆ ಮಾರಾಟ ಮಾಡಲಾಗುತ್ತಿದೆ ಎಂದು ಜಮ್ಮು–ಕಾಶ್ಮೀರ ಪೊಲೀಸರು ತಿಳಿಸಿದ್ದಾರೆ.

ಪಾಕಿಸ್ತಾನದ ಎಂಬಿಬಿಎಸ್ ಸೀಟುಗಳನ್ನು ಕಾಶ್ಮೀರದ ವಿದ್ಯಾರ್ಥಿಗಳಿಗೆ ಮಾರಾಟ ಮಾಡುತ್ತಿದ್ದ ಆರೋಪದಲ್ಲಿ ನಾಲ್ವರು ಪ್ರತ್ಯೇಕತಾವಾದಿಗಳನ್ನು ಜಮ್ಮು–ಕಾಶ್ಮೀರ ಪೊಲೀಸರು ಬಂಧಿಸಿದ್ದಾರೆ. ಈ ಪೈಕಿ, ಹುರಿಯತ್ ಕಾನ್ಫರೆನ್ಸ್‌ನ ಹಿರಿಯ ನಾಯಕರೊಬ್ಬರೂ ಇದ್ದಾರೆ.

ಮೊಹಮ್ಮದ್ ಅಕ್ಬರ್ ಭಟ್ ಅಲಿಯಾಸ್ ಜಾಫರ್ ಅಕ್ಬರ್ ಭಟ್, ಫಾತಿಮಾ ಶಾ, ಮೊಹಮ್ಮದ್ ಅಬ್ದುಲ್ಲಾ ಶಾ ಮತ್ತು ಸಬ್ಜಾರ್ ಅಹ್ಮದ್ ಶೇಖ್ ಬಂಧಿತರು. ಇವರನ್ನು ಜಮ್ಮು–ಕಾಶ್ಮೀರ ಪೊಲೀಸ್ ಸಿಐಡಿ ವಿಭಾಗದ ‘ಕೌಂಟರ್ ಇಂಟೆಲಿಜೆನ್ಸ್ (ಕಾಶ್ಮೀರ)’ ವಿಭಾಗವು ಬಂಧಿಸಿದೆ.

ಕೆಲವು ಮಂದಿ ಹುರಿಯತ್ ನಾಯಕರೂ ಸೇರಿದಂತೆ ಕೆಲವು ಅಪರಿಚಿತರು ಪಾಕಿಸ್ತಾನದ ಕಾಲೇಜುಗಳು, ವಿಶ್ವವಿದ್ಯಾಲಯಗಳ ಎಂಬಿಬಿಎಸ್ ಮತ್ತು ಇತರ ವೃತ್ತಿಪರ ಕೋರ್ಸ್‌ಗಳ ಸೀಟನ್ನು ಮಾರಾಟ ಮಾಡುತ್ತಿರುವ ಬಗ್ಗೆ ದೊರೆತ ಮಾಹಿತಿಯ ಆಧಾರದಲ್ಲಿ ಕಳೆದ ವರ್ಷ ಜುಲೈನಲ್ಲೇ ಪ್ರಕರಣ ದಾಖಲಿಸಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ಇನ್ನಿಬ್ಬರು ಆರೋಪಿಗಳು ತಲೆಮರೆಸಿಕೊಂಡಿದ್ದಾರೆ. ಅವರ ವಿರುದ್ಧ ಪ್ರಬಲ ಸಾಕ್ಷ್ಯಾಧಾರಗಳಿದ್ದು, ಶೀಘ್ರವೇ ಬಂಧಿಸಲಾಗುವುದು ಎಂದೂ ಜಮ್ಮು–ಕಾಶ್ಮೀರ ಪೊಲೀಸ್ ಪ್ರಕಟಣೆ ತಿಳಿಸಿದೆ.

‘ವಿದ್ಯಾರ್ಥಿಗಳ ಪೋಷಕರಿಂದ ಸಂಗ್ರಹಿಸಿದ ಹಣವನ್ನು ಭಾಗಶಃ, ಭಯೋತ್ಪಾದನೆ, ಪ್ರತ್ಯೇಕತಾವಾದವನ್ನು ಬೆಂಬಲಿಸಲು ಮತ್ತು ಆ ಚಟುವಟಿಕೆಗಳ ನಿಧಿಗಾಗಿ ವಿವಿಧ ರೀತಿಯಲ್ಲಿ ಬಳಸಲಾಗಿದೆ ಎಂಬುದು ತನಿಖೆಯಿಂದ ತಿಳಿದುಬಂದಿದೆ’ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಎಂಬಿಬಿಎಸ್ ಮತ್ತು ಇತರ ವೃತ್ತಿಪರ ಕೋರ್ಸ್‌ಗಳ ಸೀಟನ್ನು ಮಾರಾಟ ಮಾಡುವ ಸಂದರ್ಭದಲ್ಲಿ, ಕಾಶ್ಮೀರದಲ್ಲಿ ಹತ್ಯೆಗೀಡಾಗಿರುವ ಉಗ್ರರ ಕುಟುಂಬದವರು ಮತ್ತು ಅವರ ಆಪ್ತರಿಗೆ ಆದ್ಯತೆ ನೀಡಲಾಗಿತ್ತು ಎಂದೂ ಪೊಲೀಸರು ಮಾಹಿತಿ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.