ADVERTISEMENT

ದೇಶದ್ರೋಹ ಪ್ರಕರಣದಲ್ಲಿ ಎಂಡಿಎಂಕೆ ನಾಯಕ ವೈಕೊಗೆ ಒಂದು ವರ್ಷ ಜೈಲು ಶಿಕ್ಷೆ

ಏಜೆನ್ಸೀಸ್
Published 5 ಜುಲೈ 2019, 6:20 IST
Last Updated 5 ಜುಲೈ 2019, 6:20 IST
   

ಚೆನ್ನೈ: ತಮಿಳುನಾಡಿನ ಮರುಮಲರ್ಚಿ ದ್ರಾವಿಡ ಮುನ್ನೇಟ್ರ ಕಳಂಗಂ (ಎಂಡಿಎಂಕೆ) ಮುಖ್ಯಸ್ಥ ವಿ. ಗೋಪಾಲಸ್ವಾಮಿ (ವೈಕೊ) ಅವರಿಗೆ ದೇಶದ್ರೋಹ ಪ್ರಕರಣದಲ್ಲಿ ಚೆನ್ನೈ ಹೈಕೋರ್ಟ್‌ ಶುಕ್ರವಾರ ಒಂದು ವರ್ಷ ಜೈಲು ಶಿಕ್ಷೆ ವಿಧಿಸಿದೆ.ಜೈಲು ಶಿಕ್ಷೆಯ ಜತೆಗೇ ವೈಕೊ ಅವರಿಗೆ ₹10,000ಯ ದಂಡವನ್ನೂ ವಿಧಿಸಲಾಗಿದೆ.

2009ರಲ್ಲಿ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದ ವೈಕೊ ‘ಶ್ರೀಲಂಕಾದಲ್ಲಿ ಎಲ್‌ಟಿಟಿಇ ಸಂಘಟನೆ ವಿರುದ್ಧದ ದಾಳಿಗಳು ನಿಲ್ಲದೇ ಹೋದರೆ ಭಾರತ ಒಂದು ದೇಶವಾಗಿ ಉಳಿಯಲಾರದು,’ ಎಂದು ಹೇಳಿದ್ದರು. ಇದೇ ಕಾರಣಕ್ಕೆ ಅವರ ವಿರುದ್ಧ ದೇಶದ್ರೋಹದ ಪ್ರಕರಣ ದಾಖಲಾಗಿತ್ತು. ಶುಕ್ರವಾರ ಪ್ರಕರಣದ ತೀರ್ಪು ನೀಡಿರುವ ಹೈಕೋರ್ಟ್‌ ವೈಕೊ ಅವರಿಗೆ ಒಂದು ವರ್ಷ ಜೈಲು ಶಿಕ್ಷೆ ವಿಧಿಸಿದೆ.

ಶ್ರೀಲಂಕಾದ ಎಲ್‌ಟಿಟಿಇ ಪರವಾದ ನಿಲುವ ವೈಕೊ ಅವರನ್ನು ಎರಡು ಬಾರಿ ಜೈಲಿಗೆ ತಳ್ಳಿದೆ. 2002ರಲ್ಲಿ ಅಂದಿನ ಜಯಲಲಿತಾ ಸರ್ಕಾರ ವೈಕೊ ವಿರುದ್ಧ ಭಯೋತ್ಪಾದನಾ ನಿಗ್ರಹ (ಪೊಟಾ) ಕಾಯಿದೆ ಅಡಿಯಲ್ಲಿ ಬಂಧಿಸಿತ್ತು. ಈ ಪ್ರಕರಣದಲ್ಲಿ ಅವರು ಹೆಚ್ಚು ಕಡಿಮೆ ಒಂದು ವರ್ಷ ಜೈಲು ಶಿಕ್ಷೆ ಅನುಭವಿಸಿದ್ದರು. 2009ರಲ್ಲೂ ಅವರು ಒಂದು ವರ್ಷ ಜೈಲು ಶಿಕ್ಷೆಗೆ ಗುರಿಯಾಗಿದ್ದರು.

ADVERTISEMENT

ಸೋಜಿಗವೆಂದರೆ, ವೈಕೊ ಅವರ ವಿರುದ್ಧ ದೇಶದ್ರೋಹದ ಪ್ರಕರಣ ದಾಖಲು ಮಾಡಿದ್ದು ಡಿಎಂಕೆ. ಸದ್ಯ ತಮಿಳುನಾಡಿನಲ್ಲಿ ರಾಜ್ಯಸಭೆ ಚುನಾವಣೆಗಳು ನಡೆಯುತ್ತಿದ್ದು, ಮೈತ್ರಿ ಅಭ್ಯರ್ಥಿಯಾಗಿರುವ ವೈಕೊ ಅವರಿಗೆ ಡಿಎಂಕೆ ಬೆಂಬಲ ಸೂಚಿಸಿದೆ. ವೈಕೊ ನಾಳೆ ನಾಮಪತ್ರ ಸಲ್ಲಿಸಬೇಕಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.