ADVERTISEMENT

ಮೀರಠ್‌: 52 ಹಾವುಗಳ ಹತ್ಯೆ, 8 ಉರಗಗಳ ರಕ್ಷಣೆ

ರೈತನ ಮನೆಯಿಂದ ಹೊರ ಬಂದಿದ್ದ ನೂರಾರು ಹಾವುಗಳು

ಪಿಟಿಐ
Published 4 ಜೂನ್ 2025, 13:46 IST
Last Updated 4 ಜೂನ್ 2025, 13:46 IST
<div class="paragraphs"><p>ರೈತನ ಮನೆಯಲ್ಲಿ ಕಾಣಿಸಿಕೊಂಡ ಹಾವು</p></div>

ರೈತನ ಮನೆಯಲ್ಲಿ ಕಾಣಿಸಿಕೊಂಡ ಹಾವು

   

ಚಿತ್ರಕೃಪೆ:X/@journorahull

ಮೀರಠ್: ಉತ್ತರ ಪ್ರದೇಶದ ಮೀರಠ್‌ ಜಿಲ್ಲೆಯ ಸಮೌಲಿ ಗ್ರಾಮದ ರೈತರೊಬ್ಬರ ಮನೆಯಿಂದ ಹೊರಬಂದಿದ್ದ ನೂರಾರು ಹಾವುಗಳ ಪೈಕಿ 52 ಹಾವುಗಳನ್ನು ಗ್ರಾಮಸ್ಥರು ಕೊಂದಿದ್ದಾರೆ. ಎರಡು ದಿನಗಳ ಬಳಿಕ ಅರಣ್ಯ ಇಲಾಖೆ ಅಧಿಕಾರಿಗಳು, ಅದೇ ಮನೆಯಿಂದ ಎಂಟು ಹಾವುಗಳನ್ನು ರಕ್ಷಿಸಿದ್ದಾರೆ.

ADVERTISEMENT

ದೌರಾಲಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿನ ಸಮೌಲಿ ಗ್ರಾಮದ ರೈತ ಮಹ್ಫೂಜ್‌ ಸೈಫಿ ಅವರ ಮನೆಯಿಂದ ಮಂಗಳವಾರ ರಾತ್ರಿ ಎಂಟು ಉರಗಗಳನ್ನು ರಕ್ಷಿಸಲಾಗಿದೆ ಎಂದು ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ.

‘ರಕ್ಷಿಸಲಾದ ಹಾವುಗಳು ವಿಷಪೂರಿತವಲ್ಲದ ಉರಗ ಜಾತಿಗೆ ಸೇರಿದವಾಗಿವೆ’ ಎಂದು ವಿಭಾಗೀಯ ಅರಣ್ಯ ಅಧಿಕಾರಿ (ಡಿಎಫ್‌ಒ) ರಾಜೇಶ್‌ ಕುಮಾರ್‌ ಮಾಹಿತಿ ನೀಡಿದ್ದಾರೆ.

‘ಹಾವುಗಳು ಈ ಮನೆಯಲ್ಲಿ ಮೊಟ್ಟೆಗಳನ್ನು ಇಟ್ಟಿರಬಹುದು. ಅವು ಹಂತ ಹಂತವಾಗಿ ಮರಿಗಳಾಗಿ ಹೊರಬರುತ್ತಿರಹುದು’ ಎಂದು ಅವರು ಪ್ರತಿಕ್ರಿಯಿಸಿದ್ದಾರೆ.

‘ಇವು ಚೆಕ್ಕರ್ಡ್‌ ಕೀಲ್‌ಬ್ಯಾಕ್‌ ಜಾತಿಗೆ ಸೇರಿದ ಉರಗಗಳಾಗಿದ್ದು, ನೀರಾವುಗಳಾಗಿವೆ’ ಎಂದು  ಸರೀಸೃಪ ತಜ್ಞ ಆದಿತ್ಯ ತಿವಾರಿ ಹೇಳಿದ್ದಾರೆ.

‘ಇವು ವಿಷಪೂರಿತವಲ್ಲದ ಹಾವುಗಳಾಗಿದ್ದು, ಒಮ್ಮೆಗೆ 40ರಿಂದ 50 ಮೊಟ್ಟೆಗಳನ್ನಿಡುತ್ತವೆ’ ಎಂದು ವಿವರಿಸಿದ್ದಾರೆ.

‘ಹಾವುಗಳನ್ನು ಕೊಲ್ಲುವುದು ಶಿಕ್ಷಾರ್ಹ ಅಪರಾಧವಾಗಿದೆ. ಆದ್ದರಿಂದ ಗ್ರಾಮಸ್ಥರು ಹಾವುಗಳನ್ನು ಕಂಡ ಕೂಡಲೇ ವರದಿ ಮಾಡಿ’ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಗ್ರಾಮದ ಜನರಿಗೆ ತಿಳಿಸಿದ್ದಾರೆ. ‘ಹಾವುಗಳು ವನ್ಯಜೀವಿ ಸಂರಕ್ಷಣಾ ಕಾಯ್ದೆ–1972ರ ಅಡಿಯಲ್ಲಿ ರಕ್ಷಿಸಲ್ಪಟ್ಟ ಜೀವಿಗಳಾಗಿವೆ’ ಎಂದು ಅವರು ಹೇಳಿದ್ದಾರೆ.

ಶಾಶ್ವತ ಪರಿಹಾರಕ್ಕೆ ಆಗ್ರಹ: ಪುನರಾವರ್ತಿತವಾಗುತ್ತಿರುವ ಈ ರೀತಿಯ ಘಟನೆಗಳಿಂದ ಆತಂಕಕ್ಕೆ ಒಳಗಾಗಿರುವ ಗ್ರಾಮಸ್ಥರು, ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸುವಂತೆ ಆಗ್ರಹಿಸಿದ್ದಾರೆ.

ಸೈಫಿ ಅವರ ಮನೆಯಿಂದ ಭಾನುವಾರ ನೂರಾರು ಹಾವುಗಳು ಹೊರಬರುವುದನ್ನು ಕಂಡ ಗ್ರಾಮಸ್ಥರು, ಸೈಫಿ ಮತ್ತು ಅವರ ಕುಟುಂಬದವರ ಜತೆ ಸೇರಿಕೊಂಡು 52 ಹಾವುಗಳನ್ನು ಭಾನುವಾರ ಕೊಂದಿದ್ದರು. ಈ ಕುರಿತ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹರಿದಾಡಿದ ಬೆನ್ನಲ್ಲೇ ಡಿಎಫ್‌ಒ ಅವರು ಸೋಮವಾರ ತಂಡ ರಚಿಸಿ ತನಿಖೆಗೆ ಸೂಚಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.