
ಶಿಲ್ಲಾಂಗ್: ಮೇಘಾಲಯದ ಪೂರ್ವ ಜೈಂಟಿಯಾ ಹಿಲ್ಸ್ ಜಿಲ್ಲೆಯಲ್ಲಿ ಅಕ್ರಮವಾಗಿ ನಡೆಸುತ್ತಿದ್ದ ಕಲ್ಲಿದ್ದಲು ಗಣಿಯಲ್ಲಿ ಗುರುವಾರ ಸಂಭವಿಸಿದ ಸ್ಫೋಟದಲ್ಲಿ 16 ಕಾರ್ಮಿಕರು ಮೃತಪಟ್ಟಿದ್ದು, ಹಲವರು ಸಿಲುಕಿಕೊಂಡಿರುವ ಶಂಕೆ ವ್ಯಕ್ತವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಜೈಂಟಿಯಾ ಹಿಲ್ಸ್ ಜಿಲ್ಲೆಯ ಥಾಂಗ್ಸ್ಕು ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಘಟನಾ ಸ್ಥಳಕ್ಕೆ ರಕ್ಷಣಾ ತಂಡಗಳು ಧಾವಿಸಿದ್ದು, ಕಾರ್ಯಾಚರಣೆಯಲ್ಲಿ ತೊಡಗಿವೆ ಎಂದು ಪೊಲೀಸ್ ಮಹಾನಿರ್ದೇಶಕಿ ಐ ನೊಂಗ್ರಾಂಗ್ ಹೇಳಿದ್ದಾರೆ.
‘ಇದುವರೆಗೆ 16 ಶವಗಳನ್ನು ಹೊರತೆಗೆಯಲಾಗಿದೆ. ಸ್ಫೋಟದ ಸಮಯದಲ್ಲಿ ಗಣಿಯಲ್ಲಿದ್ದ ಕಾರ್ಮಿಕರ ನಿಖರ ಸಂಖ್ಯೆ ಇನ್ನೂ ತಿಳಿದುಬಂದಿಲ್ಲ. ಇನ್ನೂ ಹೆಚ್ಚಿನ ಜನರು ಸಿಲುಕಿಕೊಂಡಿರುವ ಶಂಕೆ ಇದೆ’ ಎಂದು ಅವರು ತಿಳಿಸಿದ್ದಾರೆ.
ಸ್ಪೋಟದಲ್ಲಿ ಗಾಯಗೊಂಡ ಒಬ್ಬ ವ್ಯಕ್ತಿಯನ್ನು ಚಿಕಿತ್ಸೆಗಾಗಿ ಶಿಲ್ಲಾಂಗ್ ಆಸ್ಪತ್ರೆಗೆ ಕರೆದೊಯ್ಯಲಾಯಿತು ಎಂದು ಎಸ್.ಪಿ ವಿಕಾಶ್ ಕುಮಾರ್ ತಿಳಿಸಿದ್ದಾರೆ. ಸ್ಫೋಟಕ್ಕೆ ಕಾರಣವೇನು ಎಂದು ಇನ್ನೂ ತಿಳಿದು ಬಂದಿಲ್ಲ ಎಂದು ಅವರು ತಿಳಿಸಿದ್ದಾರೆ.
ಪರಿಸರ ಹಾನಿ ಮತ್ತು ಸುರಕ್ಷತಾ ಅಪಾಯಗಳನ್ನು ಉಲ್ಲೇಖಿಸಿ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (ಎನ್‌ಜಿಟಿ) 2014ರಲ್ಲಿ ಮೇಘಾಲಯದಲ್ಲಿ ಇಲಿ ರಂಧ್ರ ಕಲ್ಲಿದ್ದಲು ಗಣಿಗಾರಿಕೆ ಮತ್ತು ಇತರ ಅವೈಜ್ಞಾನಿಕ ಗಣಿಗಾರಿಕೆಗೆ ನಿಷೇಧ ಹೇರಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.