ADVERTISEMENT

ಜಮ್ಮು–ಕಾಶ್ಮೀರ: ಮಹೆಬೂಬಾ ಮುಫ್ತಿಗೆ ಮತ್ತೆ ಗೃಹಬಂಧನ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 8 ಡಿಸೆಂಬರ್ 2020, 8:36 IST
Last Updated 8 ಡಿಸೆಂಬರ್ 2020, 8:36 IST
ಮೆಹಬೂಬಾ ಮುಫ್ತಿ –ಎಎಫ್‌ಪಿ ಚಿತ್ರ
ಮೆಹಬೂಬಾ ಮುಫ್ತಿ –ಎಎಫ್‌ಪಿ ಚಿತ್ರ   

ಶ್ರೀನಗರ: ಪಿಡಿಪಿ ಅಧ್ಯಕ್ಷೆ ಮೆಹಬೂಬಾ ಮುಫ್ತಿ ಅವರಿಗೆ ಕೇಂದ್ರ ಬುದ್ಗಾಂ ಜಿಲ್ಲೆಗೆ ತೆರಳಲು ಜಮ್ಮು–ಕಾಶ್ಮೀರ ಪೊಲೀಸರು ಅನುಮತಿ ನಿರಾಕರಿಸಿದ್ದಾರೆ. ಅರಣ್ಯ ಪ್ರದೇಶಗಳಿಂದ ಗುಜ್ಜರ್ ಸಮುದಾಯದ ಕೆಲವು ಕುಟುಂಬದವರನ್ನು ಅಧಿಕಾರಿಗಳು ಒಕ್ಕಲೆಬ್ಬಿಸಿದ ಬಗ್ಗೆ ಆ ಕುಟುಂಬದವರಲ್ಲಿ ಮಾತುಕತೆ ನಡೆಸಲು ಮುಫ್ತಿ ಉದ್ದೇಶಿಸಿದ್ದರು.

ಗುಜ್ಜರ್ ಕುಟುಂಬದವರನ್ನು ಭೇಟಿಯಾಗಲು ತೆರಳಲು ಶುಕ್ರವಾರ ಮುಫ್ತಿ ಮುಂದಾಗಿದ್ದರು. ಆದರೆ ಪೊಲಿಸ್ ತುಕಡಿ ಮತ್ತು ಅರೆಸೇನಾ ಪಡೆಗಳು ನಮ್ಮ ನಿವಾಸದ ಬಳಿ ಬಂದು ಮುಖ್ಯ ಪ್ರವೇಶ ದ್ವಾರವನ್ನು ಬಂದ್ ಮಾಡಿದರು ಎಂದು ಮುಫ್ತಿ ಅವರ ಪುತ್ರಿ ತಿಳಿಸಿರುವುದಾಗಿ ‘ಡೆಕ್ಕನ್ ಹೆರಾಲ್ಡ್’ ವರದಿ ಮಾಡಿದೆ.

ತಮ್ಮ ನಿವಾಸದ ಮುಖ್ಯ ಪ್ರವೇಶ ದ್ವಾರವನ್ನು ಪೊಲೀಸರು ಬಂದ್ ಮಾಡಿರುವ ವಿಡಿಯೊವನ್ನು ಮುಫ್ತಿ ಅವರು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ.

ADVERTISEMENT

‘ಭಾರತ ಸರ್ಕಾರದ ಪರವಾಗಿ ಅಕ್ರಮವಾಗಿ ವಶದಲ್ಲಿರಿಸುವುದು ಯಾವುದೇ ರೀತಿಯ ಪ್ರತಿರೋಧವನ್ನು ತಡೆಯುವ ಒಂದು ವಿಧಾನವಾಗಿ ಮಾರ್ಪಟ್ಟಿದೆ. ತಮ್ಮ ಮನೆಗಳಿಂದ ತೆರವುಗೊಂಡಿರುವ ಕುಟುಂಬದವರನ್ನು ಭೇಟಿ ಮಾಡುವ ಸಲುವಾಗಿ ಬುದ್ಗಾಂಗೆ ತೆರಳಲು ನಾನು ಉದ್ದೇಶಿಸಿದ್ದೆ’ ಎಂದು ಅವರು ಟ್ವೀಟ್‌ನಲ್ಲಿ ಉಲ್ಲೇಖಿಸಿದ್ದಾರೆ.

ಜಮ್ಮು ಮತ್ತು ಕಾಶ್ಮೀರದಲ್ಲಿ ಪ್ರತಿರೋಧದ ದನಿಯನ್ನು ಹತ್ತಿಕ್ಕಲು ಭಾರತ ಸರ್ಕಾರ ಬಯಸುತ್ತಿದೆ ಎಂದೂ ಅವರು ಮತ್ತೊಂದು ಟ್ವೀಟ್‌ನಲ್ಲಿ ಉಲ್ಲೇಖಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.