ADVERTISEMENT

ಮೇಕೆದಾಟು: ಪ್ರತಿಕ್ರಿಯೆಗೆ ಸೂಚನೆ

ಸಿಡಬ್ಲ್ಯೂಸಿಗೆ ಪರಿಷ್ಕೃತ ಡಿಪಿಆರ್ ಸಲ್ಲಿಕೆ

​ಪ್ರಜಾವಾಣಿ ವಾರ್ತೆ
Published 20 ಫೆಬ್ರುವರಿ 2019, 20:26 IST
Last Updated 20 ಫೆಬ್ರುವರಿ 2019, 20:26 IST
   

ನವದೆಹಲಿ: ಮೇಕೆದಾಟು ಯೋಜನೆ ಕುರಿತು ವಿಸ್ತೃತ ವರದಿ (ಡಿಪಿಆರ್‌) ಸಿದ್ಧಪಡಿಸಲು ಕರ್ನಾಟಕಕ್ಕೆ ಷರತ್ತುಬದ್ಧ ಸಮ್ಮತಿ ಸೂಚಿಸಿರುವ ಕೇಂದ್ರ ಸರ್ಕಾರದ ನಿಲುವಿನ ಕುರಿತು ಪ್ರತಿಕ್ರಿಯೆ ನೀಡಲು ಕಾವೇರಿ ಕಣಿವೆಯ ರಾಜ್ಯಗಳಿಗೆ ಸುಪ್ರೀಂ ಕೋರ್ಟ್ ಬುಧವಾರ 3 ವಾರಗಳ ಕಾಲಾವಕಾಶ ನೀಡಿದೆ.

ಮೇಕೆದಾಟು ಯೋಜನೆ ವಿರೋಧಿಸಿ ತಮಿಳುನಾಡು ಸಲ್ಲಿಸಿರುವ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎ.ಎಂ. ಖನ್ವಿಲ್ಕರ್ ನೇತೃತ್ವದ ಪೀಠವು, ಕಣಿವೆ ವ್ಯಾಪ್ತಿಯ ತಮಿಳುನಾಡು, ಕೇರಳ, ಪುದುಚೇರಿ ಸರ್ಕಾರಗಳಿಗೆ ಮತ್ತು ಯೋಜನೆ ಕೈಗೆತ್ತಿಕೊಳ್ಳುತ್ತಿರುವ ಕರ್ನಾಟಕಕ್ಕೆ ಪ್ರತಿಕ್ರಿಯೆಗೆ ಸೂಚಿಸಿತು.

ಕಣಿವೆ ವ್ಯಾಪ್ತಿಯ ರಾಜ್ಯಗಳು ಸೌಹಾರ್ದಯುತವಾಗಿ ಒಪ್ಪಿಗೆ ಸೂಚಿಸದರೆ ಮಾತ್ರ ಕೇಂದ್ರ ಜಲ ಆಯೋಗ (ಸಿಡಬ್ಲ್ಯೂಸಿ)ವು ಯೋಜನೆಗೆ ಸಮ್ಮತಿ ಸೂಚಿಸಲಿದೆ ಎಂದು ಕೇಂದ್ರ ಸರ್ಕಾರವು ಹಿಂದೆಯೇ ನ್ಯಾಯಪೀಠಕ್ಕೆ ವಿವರಿಸಿದೆ.

ADVERTISEMENT

ಕಾವೇರಿ ನದಿಯ ಒಟ್ಟು 67.16 ಟಿಎಂಸಿ ಅಡಿ ಹೆಚ್ಚುವರಿ ನೀರನ್ನು ಸಂಗ್ರಹಿಸಿ ಬೆಂಗಳೂರು ಮತ್ತು ರಾಮನಗರದ ಜನತೆಗೆ ಕುಡಿಯುವ ನೀರು ಪೂರೈಕೆ ಹಾಗೂ ಜಲವಿದ್ಯುತ್‌ ಉತ್ಪಾದನೆಯ ಉದ್ದೇಶದೊಂದಿಗೆ ಮೇಕೆದಾಟು ಬಳಿ ₹ 5,912 ಕೋಟಿ ವೆಚ್ಚದಲ್ಲಿ ಸಮಾನಾಂತರ ಜಲಾಶಯ ನಿರ್ಮಾಣದ ಪರಿಷ್ಕೃತ ವಿಸ್ತೃತ ಯೋಜನಾ ವರದಿಯನ್ನು ಕರ್ನಾಟಕ ಸರ್ಕಾರ ಸಿಡಬ್ಲ್ಯೂಸಿಗೆ ಸಲ್ಲಿಸಿದೆ.

ಕಾವೇರಿ ನದಿ ನೀರು ಹಂಚಿಕೆ ಮಾಡಿ ಸುಪ್ರೀಂ ಕೋರ್ಟ್‌ 2018ರ ಫೆಬ್ರುವರಿ 16ರಂದು ನೀಡಿರುವ ತೀರ್ಪನ್ನು ಒಪ್ಪದ ತಮಿಳುನಾಡು, ಪ್ರಕರಣದ ಮರು ವಿಚಾರಣೆಗೆ ಒಳಪಡಿಸಬೇಕೆಂಬ ದುರುದ್ದೇಶದೊಂದಿಗೆ ಮೇಕೆದಾಟು ಯೋಜನೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ ಎಂದು ಕರ್ನಾಟಕವು ನ್ಯಾಯಪೀಠಕ್ಕೆ ಸಲ್ಲಿಸಿರುವ ಹೇಳಿಕೆಯಲ್ಲಿ ಆರೋಪಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.