ADVERTISEMENT

ಬುಡಕಟ್ಟು ಸಮುದಾಯಗಳ ಖಾತೆಯನ್ನು ಬ್ರಾಹ್ಮಣರಿಗೆ ನೀಡಿ:ಸುರೇಶ್ ಗೋಪಿ ಹೇಳಿಕೆ ವಿವಾದ

ಪಿಟಿಐ
Published 2 ಫೆಬ್ರುವರಿ 2025, 11:20 IST
Last Updated 2 ಫೆಬ್ರುವರಿ 2025, 11:20 IST
<div class="paragraphs"><p>ಸುರೇಶ್ ಗೋಪಿ</p></div>

ಸುರೇಶ್ ಗೋಪಿ

   

(ಪಿಟಿಐ ಚಿತ್ರ)

ನವದೆಹಲಿ/ತಿರುವನಂತಪುರ: 'ಬುಡಕಟ್ಟು ವ್ಯವಹಾರಗಳ ಖಾತೆಯನ್ನು ಮೇಲ್ಜಾತಿಯವರು ವಹಿಸಬೇಕು' ಎಂದು ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ರಾಜ್ಯ ಖಾತೆ ಸಚಿವ, ನಟ ಸುರೇಶ್ ಗೋಪಿ ಹೇಳಿಕೆ ನೀಡಿರುವುದು ವಿವಾದಕ್ಕೆ ಕಾರಣವಾಗಿದೆ.

ADVERTISEMENT

ನವದೆಹಲಿಯಲ್ಲಿ ಬಿಜೆಪಿ ಚುನಾವಣಾ ಪ್ರಚಾರದಲ್ಲಿ ಮಾತನಾಡಿದ ಅವರು, 'ಬುಡಕಟ್ಟು ವ್ಯವಹಾರಗಳ ಖಾತೆಯನ್ನು ಮೇಲ್ಜಾತಿಯವರು ವಹಿಸಿದರೆ ಮಾತ್ರ ಬುಡಕಟ್ಟಿನ ಕಲ್ಯಾಣದಲ್ಲಿ ನಿಜವಾದ ಪ್ರಗತಿ ಸಾಧ್ಯ' ಎಂದು ಹೇಳಿದ್ದಾರೆ.

'ಬುಡಕಟ್ಟು ವ್ಯವಹಾರಗಳ ಸಚಿವರನ್ನಾಗಿ ಬುಡಕಟ್ಟು ಸಮುದಾಯದ ವ್ಯಕ್ತಿಯನ್ನು ಮಾತ್ರ ಆಯ್ಕೆ ಮಾಡುವುದು ನಮ್ಮ ದೇಶದ ಶಾಪವಾಗಿದೆ' ಎಂದು ಅವರು ಹೇಳಿದ್ದಾರೆ.

'ಬುಡಕಟ್ಟು ಸಮುದಾಯದ ಕಲ್ಯಾಣಕ್ಕಾಗಿ ಹೊರಗಿನವರನ್ನು ನೇಮಿಸಬೇಕು ಎಂಬುದು ನನ್ನ ಆಕಾಂಕ್ಷೆಯಾಗಿದೆ. ಬ್ರಾಹ್ಮಣ ಅಥವಾ ನಾಯ್ದು ನಿಭಾಯಿಸಲಿ. ಆಗ ಮಾತ್ರ ಗಮನಾರ್ಹ ಬದಲಾವಣೆ ಸಾಧ್ಯ. ಅಂತೆಯೇ ಮುಂದುವರಿದ ಸಮುದಾಯಗಳ ಖಾತೆಗಳನ್ನು ಬುಡಕಟ್ಟು ಜನಾಂಗದವರಿಗೆ ನೀಡಬೇಕು. ನಮ್ಮ ಪ್ರಜಾಪ್ರಭುತ್ವದಲ್ಲಿ ಅಂತಹ ಬದಲಾವಣೆ ಆಗಬೇಕು' ಎಂದು ಅವರು ಹೇಳಿದ್ದಾರೆ.

'ಬುಡಕಟ್ಟು ವ್ಯವಹಾರಗಳ ಖಾತೆಯನ್ನು ತಮಗೆ ನೀಡಬೇಕು ಎಂದು ಪ್ರಧಾನಿ ಅವರಿಗೆ ಮನವಿ ಮಾಡಿದ್ದೇನೆ. ಆದರೆ ಖಾತೆ ಹಂಚಿಕೆಗಳಿಗೆ ಕೆಲವೊಂದು ರೂಢಿಗಳಿವೆ' ಎಂದು ತ್ರಿಶೂರ್‌ನ ಸಂಸದ ಸುರೇಶ್ ಗೋಪಿ ಹೇಳಿದ್ದಾರೆ.

ಸುರೇಶ್ ಗೋಪಿ ಹೇಳಿಕೆ ವಿರುದ್ಧ ಕೇರಳದ ಎಡಪಕ್ಷಗಳ ನಾಯಕರಿಂದ ವ್ಯಾಪಕ ಟೀಕೆಗಳು ವ್ಯಕ್ತವಾಗಿವೆ. 'ಜಾತಿ ವ್ಯವಸ್ಥೆ'ಯ ನಾಯಕನನ್ನು ಕೂಡಲೇ ಸಂಪುಟದಿಂದ ಕೆಳಗಿಳಿಸಬೇಕು ಎಂದು ಬೇಡಿಕೆಯಿಟ್ಟಿದ್ದಾರೆ. ಸುರೇಶ್ ಗೋಪಿ ರಾಜೀನಾಮೆಯನ್ನು ಬಯಸಿದ್ದು, ಈ ಕುರಿತು ಬಿಜೆಪಿ ತನ್ನ ನಿಲುವನ್ನು ಸ್ಪಷ್ಟಪಡಿಸುವಂತೆ ಬೇಡಿಕೆ ಇಟ್ಟಿದ್ದಾರೆ.

ಸುರೇಶ್‌ ಗೋಪಿ ಅವರು ಜಾತಿ ಪದ್ಧತಿಯ ತುತ್ತೂರಿಯಾಗಿದ್ದಾರೆ. ಕುರಿಯನ್‌ ಅವರು ಕೇರಳವನ್ನು ಅವಮಾನಿಸಿದ್ದಾರೆ. ಈ ಇಬ್ಬರೂ ಸಚಿವರನ್ನು ಕೂಡಲೇ ಸಚಿವ ಸ್ಥಾನದಿಂದ ಕೆಳಗಿಳಿಸಬೇಕು
ಬಿನೋಯ್‌ ವಿಶ್ವಂ ಸಿಪಿಐ ರಾಜ್ಯ ಕಾರ್ಯದರ್ಶಿ ಕೇರಳ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.