
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ನೆಲದ ಕಾನೂನಾದ ನರೇಗಾವನ್ನು ಅಪವಿತ್ರಗೊಳಿಸಿದೆ ಎಂದು ಕಾಂಗ್ರೆಸ್ ಭಾನುವಾರ ಆರೋಪಿಸಿತು.
ಚರ್ಚೆಯನ್ನೇ ನಡೆಸದೆ ಎರಡು ದಶಕಗಳ ಪ್ರಗತಿಯನ್ನು ಬುಡಮೇಲು ಮಾಡಿದೆ. ಸಂಸತ್ತಿನ ಸಂಪ್ರದಾಯಗಳು ಮತ್ತು ಪ್ರಕ್ರಿಯೆಗಳನ್ನು ಗಾಳಿಗೆ ತೂರಿದೆ ಎಂದು ವಾಗ್ದಾಳಿ ನಡೆಸಿತು.
ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಅವರು, ಯುಪಿಎ ಸರ್ಕಾರವು 2012ರಲ್ಲಿ ಜಾರಿ ಮಾಡಿದ್ದ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಕುರಿತ ವಿಮರ್ಶಾತ್ಮಕ ದಾಖಲೆಯನ್ನು ‘ಎಕ್ಸ್’ನಲ್ಲಿ ಹಂಚಿಕೊಂಡಿದ್ದಾರೆ.
ಆಗಿನ ಪ್ರಧಾನಿ ಮನಮೋಹನ್ ಸಿಂಗ್ ಅವರು ನರೇಗಾ ಸಮೀಕ್ಷೆಯನ್ನು ಬಿಡುಗಡೆ ಮಾಡಿದ್ದರು. ಅದು 2008 ಮತ್ತು 2012ರ ಮಧ್ಯೆ ಕೈಗೊಂಡ 145 ಕ್ಷೇತ್ರ ಅಧ್ಯಯನಗಳ ಸಂಕಲನವಾಗಿತ್ತು. ಇದು ಈಗಲೂ ಅಧ್ಯಯನಕ್ಕೆ ಲಭ್ಯವಿದೆ ಎಂದು ಅವರು ಹೇಳಿದ್ದಾರೆ.
ಇದಕ್ಕೂ ಮುನ್ನ ಶನಿವಾರ ಕಾಂಗ್ರೆಸ್ ಸಂಸದೀಯ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಕೇಂದ್ರ ಸರ್ಕಾರವು ನರೇಗಾ ಯೋಜನೆಯನ್ನು ನೆಲಸಮ ಮಾಡಿದೆ. ನೂತನ ಕಪ್ಪು ಕಾನೂನಿನ ವಿರುದ್ಧ ಹೋರಾಡಿ ಎಂದು ಕಾರ್ಯಕರ್ತರಿಗೆ ಕರೆ ನೀಡಿದ್ದರು.
ಸಂಸತ್ತಲ್ಲಿ ‘ಶಾಂತಿ’ ಮಸೂದೆ ನಿರ್ನಾಮ
ಭಾರತದ ಪ್ರಗತಿಗಾಗಿ ಅಣು ಶಕ್ತಿಯ ಸುಸ್ಥಿರ ಉತ್ಪಾದನೆ (ಎಸ್‌ಎಚ್‌ಎಎನ್‌ಟಿಐ– ಶಾಂತಿ ಮಸೂದೆ) ಮಸೂದೆಯನ್ನು ಸಂಸತ್ತಿನಲ್ಲಿ ನಿರ್ನಾಮ ಮಾಡಲಾಗಿದೆ ಎಂದು ಜೈರಾಮ್ ರಮೇಶ್ ಅವರು ಹೇಳಿದರು.
ಪ್ರಧಾನಿ ನರೇಂದ್ರ ಮೋದಿ ಮತ್ತವರ ಸ್ನೇಹಿತನ ನಡುವಣ ‘ಶಾಂತಿ’ ಪುನಃಸ್ಥಾಪನೆಗಾಗಿ ಈ ಮಸೂದೆಯನ್ನು ನೆಲಸಮ ಮಾಡಲಾಗಿದೆ ಎಂದು ಆರೋಪಿಸಿದರು.
ಅದಾನಿ ಸಮೂಹವು ಪರಮಾಣು ಇಂಧನ ಕ್ಷೇತ್ರಕ್ಕೆ ಪ್ರವೇಶಿಸುವ ಚಿಂತನೆಯಲ್ಲಿದೆ ಎಂಬ ಮಾಧ್ಯಮ ವರದಿ ಉಲ್ಲೇಖಿಸಿ ಅವರು ಈ ಹೇಳಿಕೆ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.