ADVERTISEMENT

ನಗರಗಳಿಗೆ ಮರಳುತ್ತಿರುವ ವಲಸೆ ಕಾರ್ಮಿಕರು

ಬೆಂಗಳೂರು ಸೇರಿ ವಿವಿಧ ನಗರಗಳಲ್ಲಿ ಗರಿಗೆದರಿದ ಆರ್ಥಿಕ ಚಟುವಟಿಕೆ

​ಪ್ರಜಾವಾಣಿ ವಾರ್ತೆ
Published 28 ಜೂನ್ 2020, 18:27 IST
Last Updated 28 ಜೂನ್ 2020, 18:27 IST
ಲಾಕ್‌ಡೌನ್‌ನಿಂದಾಗಿ ಊರಿಗೆ ಹೋಗಿದ್ದ ಕಾರ್ಮಿಕರು ನಗರಗಳಿಗೆ ಮರಳುತ್ತಿದ್ದಾರೆ
ಲಾಕ್‌ಡೌನ್‌ನಿಂದಾಗಿ ಊರಿಗೆ ಹೋಗಿದ್ದ ಕಾರ್ಮಿಕರು ನಗರಗಳಿಗೆ ಮರಳುತ್ತಿದ್ದಾರೆ   

ನವದೆಹಲಿ: ಬಿಹಾರ, ಉತ್ತರ ಪ್ರದೇಶ ಮತ್ತು ಪಶ್ಚಿಮ ಬಂಗಾಳದಿಂದ ದೇಶದ ಬೇರೆ ಬೇರೆ ನಗರಗಳಿಗೆ ಹೋಗುತ್ತಿರುವ ರೈಲುಗಳು ಭರ್ತಿಯಾಗಿ ಸಾಗುತ್ತಿವೆ. ರಾಷ್ಟ್ರವ್ಯಾಪಿ ಲಾಕ್‌ಡೌನ್‌ನಿಂದಾಗಿ ನಿಧಾನಗೊಂಡಿದ್ದ ಆರ್ಥಿಕ ಚಟುವಟಿಕೆಗಳು ಹಳಿಗೆ ಮರಳುತ್ತಿವೆ ಎಂಬುದರ ಸೂಚನೆ ಇದು ಎನ್ನಲಾಗಿದೆ.

ಉತ್ತರ ಭಾರತದಿಂದ ಬೆಂಗಳೂರು, ಹೈದರಾಬಾದ್‌, ಮುಂಬೈ ಸೇರಿ ಬೇರೆ ಬೇರೆ ನಗರಗಳಿಗೆ ಸಂಚರಿಸುತ್ತಿರುವ ರೈಲುಗಳ ಎಲ್ಲ ಆಸನಗಳನ್ನು ಕಾಯ್ದಿರಿಸಲಾಗಿದೆ. ಮುಂದಿನ 15 ದಿನಗಳಲ್ಲಿ ಸಂಚರಿಸಲಿರುವ ಯಾವುದೇ ರೈಲಿನಲ್ಲಿ ಆಸನಗಳು ಖಾಲಿ ಇಲ್ಲ ಎಂದು ರೈಲ್ವೆಯ ಮೂಲಗಳು ತಿಳಿಸಿವೆ.

ಲಾಕ್‌ಡೌನ್‌ ಕಾರಣಕ್ಕೆ ವಲಸೆ ಕಾರ್ಮಿಕರು ತಮ್ಮ ಊರಿಗೆ ಮರಳಿದ್ದರು. ಈಗ ಹೆಚ್ಚಿನ ನಗರಗಳಲ್ಲಿ ಲಾಕ್‌ಡೌನ್‌ ನಿರ್ಬಂಧಗಳನ್ನು ತೆರವು ಮಾಡಲಾಗಿದೆ. ಹಾಗಾಗಿ, ವಲಸೆ ಕಾರ್ಮಿಕರು ನಗರಗಳಿಗೆ ಮರಳುತ್ತಿದ್ದಾರೆ ಎಂದು ರೈಲ್ವೆ ಅಧಿಕಾರಿಯೊಬ್ಬರು ಹೇಳಿದ್ದಾರೆ.

ADVERTISEMENT

ಕೋವಿಡ್‌ ಸ್ಥಿತಿಯನ್ನು ನೋಡಿಕೊಂಡು ಮುಂದಿನ ದಿನಗಳಲ್ಲಿ ಇನ್ನಷ್ಟು ರೈಲುಗಳನ್ನು ಆರಂಭಿಸುವ ಬಗ್ಗೆ ನಿರ್ಧರಿಸಲಾಗುವುದು ಎಂದು ಇಲಾಖೆಯು ಹೇಳಿದೆ.

ನೂರು ಜತೆ ವಿಶೇಷ ರೈಲುಗಳನ್ನು ಜೂನ್‌ 1ರಿಂದ ಆರಂಭಿಸಲಾಗಿದೆ. 15 ಜತೆ ರಾಜಧಾನಿ ವಿಶೇಷ ರೈಲುಗಳನ್ನು ಮೇ 12ರಿಂದ ಆರಂಭಿಸಲಾಗಿದೆ. ಆದರೆ, ನಿಯಮಿತ ರೈಲುಗಳ ಸೇವೆಯನ್ನು ಆಗಸ್ಟ್‌ 12ರವರೆಗೆ ಸ್ಥಗಿತಗೊಳಿಸಲಾಗಿದೆ.

ರೈಲುಗಳು ಭರ್ತಿ

* ದಾನಾಪುರ (ಬಿಹಾರ)– ಬೆಂಗಳೂರು ರೈಲು: ಜುಲೈ 14ರವರೆಗೆ ಎಲ್ಲ ಆಸನಗಳನ್ನು ಕಾಯ್ದಿರಿಸಲಾಗಿದೆ

* ನಿಜಾಮುದ್ದೀನ್‌–ಯಶವಂತಪುರ ಸಂಪರ್ಕ ಕ್ರಾಂತಿ ರೈಲು, ಹೌರಾ–ಯಶವಂತಪುರ ರೈಲು: ಜುಲೈ 10ರವರೆಗೆ ಎಲ್ಲ ಆಸನಗಳನ್ನು ಕಾಯ್ದಿರಿಸಲಾಗಿದೆ

* ಗೋರಖಪುರ–ಬಾಂದ್ರಾ ನಡುವಣ ಅವಧ್‌ ಎಕ್ಸ್‌ಪ್ರೆಸ್‌, ಗೋರಖಪುರ–ಅಹಮದಾಬಾದ್‌, ಮುಝಫ್ಫರ್‌ಪುರ–ಬಾಂದ್ರಾ, ಹೌರಾ–ಸಿಕಂದರಾಬಾದ್‌–ದೆಹಲಿ: ಈ ರೈಲುಗಳಲ್ಲಿ ಮುಂದಿನ 10 ದಿನಗಳಿಗೆ ಯಾವುದೇ ಆಸನ ಖಾಲಿ ಇಲ್ಲ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.