ನಗದು ಹಣ
ಭುವನೇಶ್ವರ: ಲಂಚ ಪ್ರಕರಣದಲ್ಲಿ ಬಂಧಿಸಲಾಗಿದ್ದ ಒಡಿಶಾ ಗಣಿ ಇಲಾಖೆ ಅಧಿಕಾರಿಯ ಮನೆಗಳಲ್ಲಿ ₹ 4.27 ಕೋಟಿ ನಗದು ವಶಪಡಿಸಿಕೊಳ್ಳಲಾಗಿದೆ. ನೋಟಿನ ಕಂತೆಗಳನ್ನು ಟ್ರಾಲಿ ಬ್ಯಾಗ್‌ಗಳಲ್ಲಿ ತುಂಬಿಸಿಡಲಾಗಿತ್ತು ಎಂದು ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ.
ಇಲಾಖೆಯ ಜಂಟಿ ನಿರ್ದೇಶಕ ದೇವವ್ರತ್ ಮೊಹಾಂತಿ ಅವರನ್ನು ಮಂಗಳವಾರ ರಾತ್ರಿ ರಾಜ್ಯ ಜಾಗೃತ ದಳ ಬಂಧಿಸಿತ್ತು. ಭುವನೇಶ್ವರದಲ್ಲಿರುವ ಅಧಿಕಾರಿಯ ಫ್ಲಾಟ್‌ನಲ್ಲಿ ಹಣ ವಶಕ್ಕೆ ಪಡೆದುಕೊಳ್ಳಲಾಗಿದೆ. ‘ಇದು ರಾಜ್ಯ ಭ್ರಷ್ಟಾಚಾರ ನಿಗ್ರಹ ದಳ ದಾಳಿ ನಡೆಸಿದ ಪ್ರಕರಣವೊಂದರಲ್ಲಿ ಈವರೆಗೆ ವಶಪಡಿಸಿಕೊಂಡ ಅತಿಹೆಚ್ಚು ಪ್ರಮಾಣದ ನಗದು’ ಜಾಗೃತ ದಳದ ನಿರ್ದೇಶಕ ಯಶ್ವಂತ್ ಜೇತ್ವಾ ಅವರು ತಿಳಿಸಿದ್ದಾರೆ.
‘2009ರಲ್ಲೂ ಮೊಹಾಂತಿ ಇದೇ ರೀತಿಯ ಭ್ರಷ್ಟಾಚಾರ ಪ್ರಕರಣದಲ್ಲಿ ಸಿಲುಕಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಯೂರ್‌ಭಂಜ್ ಜಿಲ್ಲಾ ನ್ಯಾಯಾಲಯದಲ್ಲಿ ಇನ್ನೂ ವಿಚಾರಣೆ ನಡೆಯುತ್ತಿದೆ’ ಎಂದು ಜಾಗೃತ ದಳದ ಎಸ್‌ಪಿ ಸರೋಜ್ ಕುಮಾರ್ ತಿಳಿಸಿದ್ದಾರೆ.
ಅಧಿಕಾರಿ ಬಳಿ ಭಾರಿ ಪ್ರಮಾಣದ ನಗದು ಪತ್ತೆ ಆಗುತ್ತಿದ್ದಂತೆ ಆಡಳಿತಾರೂಢ ಬಿಜೆಪಿ ಸರ್ಕಾರದ ವಿರುದ್ಧ ಕಾಂಗ್ರೆಸ್ ರಾಜ್ಯ ಘಟಕದ ಅಧ್ಯಕ್ಷ ಭಟ್ಕ ಚರಣ್ ದಾಸ್ ವಾಗ್ದಾಳಿ ನಡೆಸಿ, ‘ಡಬಲ್ ಎಂಜಿನ್ ಸರ್ಕಾರದ ಭ್ರಷ್ಟಾಚಾರದ ಪ್ರಮಾಣವನ್ನು ಅಧಿಕಾರಿ ಬಳಿ ಸಿಕ್ಕ ಹಣ ಬಯಲು ಮಾಡಿದೆ’ ಎಂದಿದ್ದಾರೆ.
‘ಕಲ್ಲಿದ್ದಲು ಮಾರಾಟಗಾರರೊಬ್ಬರ ಬಳಿ ₹30,000 ಲಂಚ ಸ್ವೀಕರಿಸುವ ವೇಳೆ ಮೊಹಾಂತಿ ಅವರನ್ನು ಜಾಗೃತ ದಳ ಬಂಧಿಸಿ, ಕಚೇರಿಯಲ್ಲಿ ₹1.20 ಲಕ್ಷ ಪತ್ತೆ ಮಾಡಿತ್ತು. ತನಿಖೆಯ ಭಾಗವಾಗಿ ಭುವನೇಶ್ವರದ ಫ್ಲಾಟ್, ಭದ್ರಕ್ ಜಿಲ್ಲೆಯಲ್ಲಿರುವ ಮನೆ, ಕಟಕ್‌ನ ಕಚೇರಿಗಳಲ್ಲಿ ಶೋಧ ನಡೆಸಿದೆ’ ಎಂದು ಎಸ್‌ಪಿ ತಿಳಿಸಿದ್ದಾರೆ.
‘ಎರಡು ಅಂತಸ್ತಿನ ಮನೆ, ಸುಮಾರು 130 ಗ್ರಾಂ ಚಿನ್ನ, 2,400 ಚದರ ಅಡಿಯ ಫ್ಲಾಟ್, ಬ್ಯಾಂಕ್ ಖಾತೆಯಲ್ಲಿ 10 ಲಕ್ಷ ಹಣ ಸೇರಿ ಅಪಾರ ಸಂಪತ್ತು ಪತ್ತೆಯಾಗಿದೆ. 2004ರಲ್ಲಿ ₹8000 ವೇತನಕ್ಕೆ ಕಿರಿಯ ಗಣಿ ಅಧಿಕಾರಿಯಾಗಿ ಮೊಹಾಂತಿ ಸರ್ಕಾರಿ ಸೇವೆಗೆ ಸೇರಿದ್ದರು’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.