ಚಾದರ ಅರ್ಪಿಸಿದ ಕಿರಣ್ ರಿಜಿಜು
– ಪಿಟಿಐ ಚಿತ್ರ
ಜೈಪುರ: ಸೂಫಿ ಸಂತ ಅಜ್ಮೀರ್‌ನ ಖಾಜಾ ಮೊಯಿನುದ್ದೀನ್ ಚಿಶ್ತಿ ಅವರ ಉರುಸ್ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ನೀಡಿದ ‘ಚಾದರ್’ ಅನ್ನು ಅವರ ಪರವಾಗಿ ಕೇಂದ್ರ ಸಚಿವ ಕಿರಣ್ ರಿಜಿಜು ಅವರು ದರ್ಗಾಕ್ಕೆ ಶನಿವಾರ ಸಮರ್ಪಿಸಿದರು.
ಭಾರಿ ಭದ್ರತೆಯೊಂದಿಗೆ ಸಚಿವರು ದರ್ಗಾಕ್ಕೆ ಆಗಮಿಸಿದರು. ದೆಹಲಿಯಿಂದ ಜೈಪುರಕ್ಕೆ ವಿಮಾನದಲ್ಲಿ ಬಂದ ಅವರು, ಬಳಿಕ ಅಲ್ಲಿಂದ ರಸ್ತೆ ಮಾರ್ಗದ ಮೂಲಕ ಅಜ್ಮೀರ್‌ಗೆ ತಲುಪಿದರು.
ವಿಮಾನ ನಿಲ್ದಾಣದಲ್ಲಿ ರಾಜ್ಯ ಬಿಜೆಪಿಯ ಅಲ್ಪಸಂಖ್ಯಾತ ಮೋರ್ಚಾದ ಪದಾಧಿಕಾರಿಗಳು ಅವರನ್ನು ಬರಮಾಡಿಕೊಂಡರು.
‘ಪ್ರಧಾನ ಮಂತ್ರಿಯವರ ಸಹೋದರತ್ವದ ಹಾಗೂ ದೇಶ ಒಗ್ಗಟ್ಟಾಗಿರಬೇಕು ಎನ್ನುವ ಸಂದೇಶದೊಂದಿಗೆ ಅಜ್ಮೀರ್‌ಗೆ ತೆರಳುತ್ತಿದ್ದೇನೆ’ ಎಂದು ರಿಜಿಜು ವಿಮಾನ ನಿಲ್ದಾಣದಲ್ಲಿ ಪತ್ರಕರ್ತರೊಂದಿಗೆ ಹೇಳಿದರು.
‘ಉರುಸಿನ ಈ ಶುಭ ಸಂದರ್ಭದಲ್ಲಿ, ದೇಶದಲ್ಲಿ ಉತ್ತಮ ವಾತಾವರಣ ಸೃಷ್ಠಿಸಲು ನಾವು ಬಯಸುತ್ತೇವೆ. ದೇಶದ ಸಾಮರಸ್ಯಕ್ಕೆ ಧಕ್ಕೆಯಾಗುವ ಕೆಲಸವನ್ನು ಯಾರೂ ಮಾಡಬಾರದು’ ಎಂದು ರಿಜಿಜು ನುಡಿದರು.
ನೀವು ಹಿಂದುವೋ, ಮುಸಲ್ಮಾನನೋ, ಕ್ರೈಸ್ತನೋ, ಪಾರ್ಸಿಯೋ, ಬುದ್ಧನೋ ಅಥವಾ ಜೈನನೋ ಎಲ್ಲರನ್ನೂ ದರ್ಗಾದಲ್ಲಿ ಸ್ವಾಗತಿಸಲಾಗುತ್ತದೆ. ಲಕ್ಷಾಂತರ ಜನರು ದರ್ಗಾಕ್ಕೆ ಭೇಟಿ ನೀಡುತ್ತಾರೆ. ಅವರಿಗೆ ಯಾವ ತೊಂದರೆಯೂ ಆಗಕೂಡದು. ಪ್ರಕ್ರಿಯೆ ಸರಳವಾಗಿರಬೇಕು ಎಂದು ಅವರು ಹೇಳಿದರು.
ದರ್ಗಾವನ್ನು ಶಿವ ದೇಗುಲದ ಮೇಲೆ ನಿರ್ಮಿಸಲಾಗಿದೆ ಎಂದು ಸ್ಥಳೀಯ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಕೆಯಾಗಿರುವ ಬಗ್ಗೆ ಕೇಳಿದ ಪ್ರಶ್ನೆಗೆ ‘ನಾನು ಇಲ್ಲಿ ಚಾದರ್ ಅರ್ಪಿಸಲಷ್ಟೇ ಬಂದಿದ್ದೇನೆ’ ಎಂದರು.
‘ನಾನು ಏನನ್ನೂ ಪ್ರದರ್ಶಿಸಲೋ, ಅಥವಾ ಏನಾದರೂ ಹೇಳಲೋ ಇಲ್ಲಿಗೆ ಬರಲಿಲ್ಲ. ದೇಶದ ಜನರೆಲ್ಲರೂ ನೆಮ್ಮದಿಯಿಂದ ಇರಬೇಕು ಎನ್ನುವ ಪ್ರಧಾನಿ ನರೇಂದ್ರ ಮೋದಿಯವರ ಸಂದೇಶದೊಂದಿಗೆ ತೆರಳುತ್ತಿದ್ದೇನೆ’ ಎಂದು ಪ್ರತಿಕ್ರಿಯಿಸಿದರು.
ಈ ಹಿಂದೆ ಇದ್ದ ಶಿವನ ದೇಗುಲವನ್ನು ಧ್ವಂಸ ಮಾಡಿ ದರ್ಗಾ ನಿರ್ಮಾಣ ಮಾಡಲಾಗಿದೆ ಎಂದು ಹಿಂದೂ ಸಂಘಟನೆ ಸ್ಥಳೀಯ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿತ್ತು. ಬಳಿಕ ಅಜ್ಮೀರ್ ದರ್ಗಾ ಸಮಿತಿ, ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ಇಲಾಖೆ ಹಾಗೂ ಪುರಾರತ್ವ ಸರ್ವೇಕ್ಷಣಾಲಯಕ್ಕೆ ಕೋರ್ಟ್ ನೋಟಿಸ್ ಜಾರಿ ಮಾಡಿತ್ತು.
ಸುಪ್ರೀಂ ಕೋರ್ಟ್‌ನ ಆದೇಶದಿಂದಾಗಿ ವಿಚಾರಣೆ ಸ್ಥಗಿತಗೊಂಡಿತ್ತು.
ಈ ಬಾರಿಯ ಉರುಸ್‌ಗೆ ಚಾದರ್ ಕಳುಹಿಸಬಾರದು ಎಂದು ಹಿಂದೂ ಸೇನಾ ಅಧ್ಯಕ್ಷ ವಿಷ್ಣು ಗುಪ್ತಾ ಅವರು ಪ್ರಧಾನಿ ಮೋದಿಗೆ ಮನವಿಯನ್ನೂ ಸಲ್ಲಿಸಿದ್ದರು.
ಖಾಜಾ ಮೊಯಿನುದ್ದೀನ್ ಚಿಶ್ತಿಯವರ ಸಾವಿನ ವರ್ಷಾಚರಣೆ ಪ್ರಯುಕ್ತ ಅಜ್ಮೀರ್‌ನಲ್ಲಿ ವರ್ಷಂಪ್ರತಿ ಉರುಸ್ ನಡೆಯುತ್ತದೆ. ಪ್ರಧಾನಿ ನರೇಂದ್ರ ಮೋದಿ ಪ್ರತಿ ವರ್ಷವೂ ಚಾದರ್ ಅರ್ಪಿಸುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.