ADVERTISEMENT

ಮಿರಾಜ್-2000 ದುರಂತಕ್ಕೆ ಪೈಲಟ್ ಅಲ್ಲ; ಎಚ್‌ಎಎಲ್ ತಾಂತ್ರಿಕ ದೋಷ ಕಾರಣ

​ಪ್ರಜಾವಾಣಿ ವಾರ್ತೆ
Published 21 ಮಾರ್ಚ್ 2019, 7:27 IST
Last Updated 21 ಮಾರ್ಚ್ 2019, 7:27 IST
   

ನವದೆಹಲಿ:ಹಿಂದೂಸ್ತಾನ್‌ ಎರೋನಾಟಿಕ್ಸ್‌ ಲಿಮಿಟೆಡ್‌(ಎಚ್‌ಎಎಲ್‌)ನಿಲ್ದಾಣದಲ್ಲಿ ಫೆಬ್ರುವರಿ 01 ರಂದು ಸಂಭವಿಸಿದ್ದ‘ಮಿರಾಜ್‌ 2000’ ವಿಮಾನ ಅಪಘಾತವು ಪೈಲಟ್‌ ತಪ್ಪಿನಿಂದ ಆದುದ್ದಲ್ಲ. ಬದಲಾಗಿ ವಿಮಾನ ಮೇಲ್ದರ್ಜೆಗೇರಿಸುವ ಪ್ರಕ್ರಿಯೆಯಲ್ಲಿ ಉಂಟಾದ ದೋಷ ಕಾರಣವಿರಬಹುದು ಎಂದು ವಿಚಾರಣಾ ನ್ಯಾಯಾಲಯದ(ಸಿಒಐ) ತನಿಖಾ ವರದಿ ಆಧರಿಸಿದಿ ಪ್ರಿಂಟ್‌ ವರದಿ ಮಾಡಿದೆ.

ಮೇಲ್ದರ್ಜೆಗೇರಿಸಲಾಗಿದ್ದ ಮಿರಾಜ್‌ 2000 ವಿಮಾನವನ್ನು ಪರೀಕ್ಷಾರ್ಥ ಹಾರಾಟ ನಡೆಸುತ್ತಿದ್ದಾಗ ದುರಂತ ಸಂಭವಿಸಿ, ಪೈಲಟ್‌ಗಳಾದ ಸಮೀರ್ ಅಬ್ರೋಲ್ ಹಾಗೂ ಸಿದ್ಧಾರ್ಥ್ ನೇಗಿ ಮೃತಪಟ್ಟಿದ್ದರು.

ಸಿಒಐ ಪ್ರಕಾರ, ಪರೀಕ್ಷಾರ್ಥ ಹಾರಾಟ ಸಂದರ್ಭದಲ್ಲಿ ಉಂಟಾದ ತಾಂತ್ರಿಕ ದೋಷದಿಂದಾಗಿ ದುರಂತ ಸಂಭವಿಸಿದೆ.ಮಾತ್ರವಲ್ಲದೆ, ನಿಲ್ದಾಣದ ರನ್‌ ವೇನಲ್ಲಿ ಇರುವಅರೆಸ್ಟರ್‌ ಬ್ಯಾರಿಯರ್‌ಗಳು(ರನ್‌ ವೇ ತುದಿಯಲ್ಲಿ ವಿಮಾನವನ್ನು ನಿಯಂತ್ರಿಸಲು ಇರುವ ಬಲೆಯಂತಹ ತಡೆಗೋಡೆ) ವಿಮಾನವನ್ನು ತಡೆಯುವಲ್ಲಿ ವಿಫಲವಾಗಿವೆ ಎಂದೂಆರೋಪಿಸಲಾಗಿದೆ.

ಆದರೆ ಈ ಬಗ್ಗೆ ಪ್ರತಿಕ್ರಿಯಿಸಿರುವ ಎಚ್‌ಎಎಲ್‌, ‘ಸಿಒಐ ಪ್ರಕರಣದ ವಿಚಾರಣೆಯನ್ನೂ ಇನ್ನೂ ಪೂರ್ಣಗೊಳಿಸದಿದ್ದರೆ, ಈ ರೀತಿ ಹೇಳಿಕೆ ನೀಡುವುದು ಅಕಾಲಿಕ. ಎಚ್‌ಎಎಲ್‌ಗೆ ವಿಮಾನದ ತಂತ್ರಾಂಶದೊಂದಿಗೆ ಯಾವ ಸಂಬಂಧವೂ ಇಲ್ಲ’ ಎಂದು ಹೇಳಿದೆ.

ವಿಮಾನವು ಐದು ಮೀಟರ್‌ಗಳಷ್ಟು ಮೇಲಕ್ಕೆ ಹಾರಾಟ ಆರಂಭಿಸಿದ ಕೆಲವೇ ಸೆಂಕೆಂಡ್‌ಗಳಲ್ಲಿಕೆಳಮುಖವಾಗಿ ಚಲಿಸಿ ರನ್‌ ವೇಗೆ ಅಪ್ಪಳಿಸಿತ್ತು. ಬಳಿಕ ದುರಂತ ಸಂಭವಿಸಿತ್ತು.ಪ್ರಕರಣದ ತನಿಖೆಇನ್ನೂ ಪ್ರಗತಿಯಲ್ಲಿದೆ. ಈಗಷ್ಟೇ ದುರಂತಕ್ಕೆ ನಿಖರ ಕಾರಣಗಳನ್ನು ಪಟ್ಟಿಮಾಡಲಾಗುತ್ತಿದೆ ಎಂದು ರಕ್ಷಣಾ ಸಂಸ್ಥೆಯ ಉನ್ನತ ಮೂಲಗಳು ತಿಳಿಸಿವೆ.

ಫ್ರೆಂಚ್ ಸಂಸ್ಥೆಯ ಡಸ್ಸಾಲ್ಟ್ ಕಂಪೆನಿ ತಯಾರಿಸಿದ ‘ಮಿರಾಜ್ 2000’ ಯುದ್ಧ ವಿಮಾನವವನ್ನು ಸರ್ಕಾರಿ ಸ್ವಾಮ್ಯದ ಎಚ್‌ಎಎಲ್‌ ಮೇಲ್ದರ್ಜೆಗೇರಿಸಿತ್ತು. ಹೀಗಾಗಿ ಮೇಲ್ದರ್ಜೆಗೇರಿಸುವ ಪ್ರಕ್ರಿಯೆಯಲ್ಲಿ ಉಂಟಾದ ದೋಷವೇ ದುರಂತಕ್ಕೆ ಕಾರಣ ಎನ್ನಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.