
ಕೋಲ್ಕತ್ತ: ‘ದಾರಿ ತಪ್ಪಿಸುವ ಅಭಿಯಾನಗಳಿಂದ, ಒಂದು ವರ್ಗದ ಜನರಲ್ಲಿ ಸಂಘಟನೆಯ ಬಗ್ಗೆ ತಪ್ಪು ಕಲ್ಪನೆಗಳು ಮೂಡಿವೆ’ ಎಂದು ಆರ್‌ಎಸ್‌ಎಸ್‌ನ ಸರಸಂಘಚಾಲಕ ಮೋಹನ್ ಭಾಗವತ್ ತಿಳಿಸಿದ್ದಾರೆ.
ಆರ್‌ಎಸ್‌ಎಸ್‌ನ ಶತಮಾನೋತ್ಸವದ ಹಿನ್ನೆಲೆಯಲ್ಲಿ ಇಲ್ಲಿನ ಸೈನ್ಸ್ ಸಿಟಿ ಆಡಿಟೋರಿಯಂನಲ್ಲಿ ಭಾನುವಾರ ಆಯೋಜಿಸಿದ್ದ ಉಪನ್ಯಾಸ– ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
‘ಸಂಘಕ್ಕೆ ಯಾರೂ ಶತ್ರುಗಳಿಲ್ಲ. ಸಂಘಟನೆಯು ಬೆಳೆದರೆ, ಸಂಕುಚಿತ ಮನಃಸ್ಥಿತಿಯ ಅಂಗಡಿಗಳು ಮುಚ್ಚುತ್ತವೆ’ ಎಂದು ವಿರೋಧಿಗಳಿಗೆ ತಿರುಗೇಟು ನೀಡಿದ್ದಾರೆ.
‘ಒಬ್ಬ ವ್ಯಕ್ತಿಗೆ ಆರ್‌ಎಸ್‌ಎಸ್ ಕುರಿತು ಅಭಿಪ್ರಾಯ ವ್ಯಕ್ತಪಡಿಸುವ ಹಕ್ಕು ಇದೆ. ಅದು ವಾಸ್ತವವನ್ನು ಆಧರಿಸಿ ಇರಬೇಕೇ ಹೊರತು, ನಿರೂಪಣೆ ಅಥವಾ ಎರಡನೇ ಹಂತದ ಮಾಹಿತಿಯಿಂದ ಅಲ್ಲ. ಜನರ ಮುಂದೆ ನೈಜ ವಿಚಾರವನ್ನು ತಿಳಿಸುವ ಉದ್ದೇಶದಿಂದ ದೇಶದ ನಾಲ್ಕು ನಗರಗಳಲ್ಲಿ ಉಪನ್ಯಾಸ ಹಾಗೂ ಸಂವಾದ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ’ ಎಂದು ಹೇಳಿದ್ದಾರೆ.
ರಾಜಕೀಯ ಅಜೆಂಡಾವಿಲ್ಲ: ‘ಆರ್‌ಎಸ್‌ಎಸ್ ಯಾವುದೇ ರಾಜಕೀಯ ಅಜೆಂಡಾ ಹೊಂದಿಲ್ಲ. ಸಂಘವು ಹಿಂದೂ ಸಮಾಜದ ರಕ್ಷಣೆ ಹಾಗೂ ಏಳ್ಗೆಗಾಗಿ ಶ್ರಮಿಸುತ್ತದೆ. ದೇಶವು ಮತ್ತೊಮ್ಮೆ ‘ವಿಶ್ವಗುರು’ ಆಗುತ್ತದೆ, ಆ ಉದ್ದೇಶಕ್ಕಾಗಿಯೇ ಸಮಾಜವನ್ನು ಸಿದ್ಧಪಡಿಸುವುದು ಆರ್‌ಎಸ್‌ನ ಕರ್ತವ್ಯವಾಗಿದೆ’ ಎಂದು ಭಾಗವತ್ ತಿಳಿಸಿದ್ದಾರೆ.
ಶತಮಾನೋತ್ಸವದ ಅಂಗವಾಗಿ ಆರ್‌ಎಸ್‌ಎಸ್ ನವದೆಹಲಿ, ಮುಂಬೈ, ಬೆಂಗಳೂರಿನಲ್ಲಿಯೂ ಈ ಹಿಂದೆ ಕಾರ್ಯಕ್ರಮವನ್ನು ಆಯೋಜಿಸಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.