ADVERTISEMENT

ಲಡಾಖ್‌ ಗಡಿಯಲ್ಲಿ ಗಸ್ತು ತಡೆಯಲು ಯಾವುದೇ ಶಕ್ತಿಯಿಂದ ಸಾಧ್ಯವಿಲ್ಲ: ರಾಜನಾಥ್‌

ಎಲ್‌ಎಸಿಯಲ್ಲಿ ಯಥಾಸ್ಥಿತಿ ಬದಲಿಸಲು ಚೀನಾ ಪ್ರಯತ್ನಿಸಿತ್ತು: ರಾಜ್ಯಸಭೆಯಲ್ಲಿ ಹೇಳಿಕೆ

ಪಿಟಿಐ
Published 17 ಸೆಪ್ಟೆಂಬರ್ 2020, 18:04 IST
Last Updated 17 ಸೆಪ್ಟೆಂಬರ್ 2020, 18:04 IST
ರಾಜನಾಥ್‌ ಸಿಂಗ್‌
ರಾಜನಾಥ್‌ ಸಿಂಗ್‌   

ನವದೆಹಲಿ: ‘ಲಡಾಖ್‌ ಪ್ರದೇಶದ ಗಡಿಯಲ್ಲಿ ಗಸ್ತು ತಿರುಗುವುದನ್ನು ಜಗತ್ತಿನ ಯಾವುದೇ ಶಕ್ತಿಯಿಂದ ತಡೆಯಲು ಸಾಧ್ಯವಿಲ್ಲ’ ಎಂದು ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ತಿಳಿಸಿದ್ದಾರೆ.

ರಾಜ್ಯಸಭೆಯಲ್ಲಿ ಗುರುವಾರ ಪೂರ್ವ ಲಡಾಖ್‌ನಲ್ಲಿನ ಪರಿಸ್ಥಿತಿಯ ಬಗ್ಗೆ ಹೇಳಿಕೆ ನೀಡಿದ ಅವರು, ಚೀನಾದ ಧೋರಣೆಗಳನ್ನು ಕಟುವಾಗಿ ಟೀಕಿಸಿದರು.

‘ಚೀನಾ ಹೇಳುವುದು ಒಂದು, ಮಾಡುವುದು ಇನ್ನೊಂದು. ವಾಸ್ತವ ನಿಯಂತ್ರಣ ರೇಖೆಯಲ್ಲಿನ (ಎಲ್‌ಎಸಿ) ಯಥಾಸ್ಥಿತಿಯನ್ನು ಬದಲಿಸಲು ಚೀನಾ ಕಳೆದ ತಿಂಗಳು ಪ್ರಯತ್ನಿಸಿತ್ತು’ ಎಂದು ಹೇಳಿದರು.

ADVERTISEMENT

‘ಲಡಾಖ್‌ ಗಡಿಯಲ್ಲಿ ಗಸ್ತು ತಿರುಗುವುದಕ್ಕೆ ಸಂಬಂಧಿಸಿದಂತೆಯೇ ಚೀನಾ ಜತೆ ಕಳೆದ ಕೆಲವು ತಿಂಗಳಿಂದ ಘರ್ಷಣೆಗಳು ನಡೆದಿವೆ. ಗಸ್ತು ತಿರುಗುವುದಕ್ಕಾಗಿ ನಮ್ಮ ಯೋಧರು ತಮ್ಮ ಬದುಕನ್ನು ತ್ಯಾಗ ಮಾಡಿದ್ದಾರೆ. ಗಸ್ತು ವ್ಯವಸ್ಥಿತವಾಗಿ ನಡೆಯುತ್ತಿದೆ’ ಎಂದು ಹೇಳಿದರು.

‘ಗಡಿ ವಿಷಯಕ್ಕೆ ಸಂಬಂಧಿಸಿದಂತೆ ಭಾರತ ಶಾಂತಿಯುತ ಪರಿಹಾರವನ್ನು ಬಯಸುತ್ತದೆ. ಆದರೆ, ದೇಶದ ಸಾರ್ವಭೌಮತೆಯನ್ನು ರಕ್ಷಿಸಲು ಯಾವುದೇ ಕ್ರಮಗಳನ್ನು ಕೈಗೊಳ್ಳಲು ಹಿಂಜರಿಯುವ ಪ್ರಶ್ನೆಯೇ ಇಲ್ಲ’ ಎಂದು ಸ್ಪಷ್ಟಪಡಿಸಿದರು.

‘ಉಭಯ ದೇಶಗಳು ರಾಜತಾಂತ್ರಿಕ ಮತ್ತು ಸೇನಾ ಮಾತುಕತೆಯಲ್ಲಿ ತೊಡಗಿದ್ದವು. ಆದರೆ, ಇದೇ ಸಂದರ್ಭದಲ್ಲಿ ಚೀನಾ ಪ್ರಚೋದನಾಕಾರಿ ಸೇನಾ ಕ್ರಮಗಳನ್ನು ಆಗಸ್ಟ್‌ 29 ಮತ್ತು 30ರಂದು ಕೈಗೊಂಡಿತ್ತು. ಪಾಂಗಾಂಗ್‌ ಸರೋವರದ ಪ್ರದೇಶದ ದಕ್ಷಿಣ ದಂಡೆಯಲ್ಲಿ ಯಥಾಸ್ಥಿತಿಯನ್ನು ಬದಲಾಯಿಸುವ ಪ್ರಯತ್ನಗಳನ್ನು ನಡೆಸಿತ್ತು. ಸದಾ ಸನ್ನದ್ಧ ಸ್ಥಿತಿಯಲ್ಲಿರುವ ನಮ್ಮ ಸೇನಾ ಪಡೆಗಳು ಸಕಾಲಕ್ಕೆ ದೃಢವಾದ ಕಠಿಣ ಕ್ರಮಗಳನ್ನು ಕೈಗೊಂಡಿದ್ದರಿಂದ ಚೀನಾದ ಪ್ರಯತ್ನಗಳು ವಿಫಲವಾದವು’ ಎಂದು ವಿವರಿಸಿದರು.

ಎಲ್‌ಎಸಿ ಗೌರವಿಸಿ: ಚೀನಾಕ್ಕೆ ಭಾರತ ಸಲಹೆ

ನವದೆಹಲಿ: ಗಡಿಯಲ್ಲಿಯ ವಾಸ್ತವ ನಿಯಂತ್ರಣ ರೇಖೆಯನ್ನು (ಎಲ್‌ಎಸಿ) ಗೌರವಿಸುವಂತೆ ಚೀನಾಕ್ಕೆ ಭಾರತ ಮತ್ತೆ ಸಲಹೆ ಮಾಡಿದೆ.

ಭಾರತ–ಚೀನಾ ಗಡಿಯಲ್ಲಿ ಯಥಾಸ್ಥಿತಿ ಬದಲಾವಣೆಗಾಗಿ ಚೀನಾ ಯಾವುದೇ ದುಸ್ಸಾಹಸ ಮಾಡದಂತೆಯೂ ಭಾರತ ತಾಕೀತು ಮಾಡಿದೆ.

ಸುದ್ದಿಗಾರರ ಜತೆ ಮಾತನಾಡಿದ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅನುರಾಗ್‌ ಶ್ರೀವಾಸ್ತವ್‌, ಗಡಿಯಿಂದ ಸಂಪೂರ್ಣವಾಗಿ ಸೇನೆಯನ್ನು ವಾಪಸ್‌ ಕರೆಸಿಕೊಳ್ಳುವ ದಿಸೆಯಲ್ಲಿ ಚೀನಾ, ಭಾರತದ ಜತೆ ಪ್ರಾಮಾಣಿಕವಾಗಿ ಕೆಲಸ ಮಾಡಬೇಕು ಎಂದರು.

ರಷ್ಯಾ ರಾಜಧಾನಿ ಮಾಸ್ಕೊದಲ್ಲಿ ಕಳೆದ ವಾರ ವಿದೇಶಾಂಗ ವ್ಯವಹಾರಗಳ ಸಚಿವ ಎಸ್‌. ಜೈಶಂಕರ್ ಮತ್ತು ಚೀನಾ ವಿದೇಶಾಂಗ ವ್ಯವಹಾರಗಳ ಸಚಿವ ವಾಂಗ್‌ ಯಿ ನಡುವೆ ಮಾತುಕತೆ ನಡೆದಿತ್ತು. ಆ ವೇಳೆ ಗಡಿಯಿಂದ ಸೇನೆಯನ್ನು ವಾಪಸ್‌ ಕರೆಸಿಕೊಳ್ಳುವುದು ಸೇರಿದಂತೆ ಐದು ಅಂಶಗಳ ಸೂತ್ರ ಕಂಡುಕೊಳ್ಳಲಾಗಿತ್ತು. ಆದರೆ, ಆ ದಿಶೆಯಲ್ಲಿ ಇನ್ನೂ ಯಾವದೇ ಬೆಳವಣಿಗೆಯಾಗಿಲ್ಲ.

ಕಾಶ್ಮೀರ ಗಡಿಗೆ ನರವಣೆ ಭೇಟಿ

ಶ್ರೀನಗರ: ಭಾರತದ ಭೂ ಸೇನೆಯ ಮುಖ್ಯಸ್ಥ ಜನರಲ್‌ ಎಂ.ಎಂ. ನರವಣೆ ಅವರು ಗುರುವಾರ ಉತ್ತರ ಕಾಶ್ಮೀರದ ಗಡಿ ನಿಯಂತ್ರಣ ರೇಖೆ (ಎಲ್‌ಒಸಿ) ಪ್ರದೇಶಕ್ಕೆ ಭೇಟಿ ನೀಡಿದರು.

ಕಾಶ್ಮೀರಕ್ಕೆ ಎರಡು ದಿನಗಳ ಪ್ರವಾಸ ಕೈಗೊಂಡಿರುವ ನರವಣೆ, ಭಾರತ ಮತ್ತು ಪಾಕಿಸ್ತಾನ ಗಡಿಯಲ್ಲಿರುವ ಭದ್ರತಾ ಸ್ಥಿತಿ ಮತ್ತು ಭಾರತೀಯ ಸೇನೆಯ ಸನ್ನದ್ಧ ಸ್ಥಿತಿ ಕುರಿತು ಪರಿಶೀಲನೆ ನಡೆಸಿದರು.

ಗಡಿಯಲ್ಲಿ ಕಣ್ಗಾವಲಿಗೆ ಬಳಸುತ್ತಿರುವ ಅತ್ಯಾಧುನಿಕ ತಂತ್ರಾಜ್ಞಾನದಿಂದಾಗಿ ನುಸುಳುವಿಕೆ ಯತ್ನಗಳನ್ನು ವಿಫಲಗೊಳಿಸಲಾಗಿದೆ ಎಂದು ಅವರು ತಿಳಿಸಿದರು.ಜಮ್ಮ ಮತ್ತು ಕಾಶ್ಮೀರದಲ್ಲಿರುವ ಭದ್ರತಾ ಸ್ಥಿತಿ ಕುರಿತು ಅವರು ಸೇನಾಧಿಕಾರಿಗಳು ಮತ್ತು ಯೋಧರ ಜತೆ ಮಾತುಕತೆ ನಡೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.