ADVERTISEMENT

ತಮ್ಮ ಹುದ್ದೆಗೆ ಅಗೌರವ ತೋರಿದ ರಾಜ್ಯಪಾಲ: ತಮಿಳುನಾಡು ಮುಖ್ಯಮಂತ್ರಿ ಸ್ಟಾಲೀನ್‌

ಪಿಟಿಐ
Published 24 ಜನವರಿ 2026, 14:46 IST
Last Updated 24 ಜನವರಿ 2026, 14:46 IST
ಸ್ಟಾಲಿನ್
ಸ್ಟಾಲಿನ್   

ಚೆನ್ನೈ: ವಿಧಾನಮಂಡಲ ಅಧಿವೇಶನ ಉದ್ದೇಶಿಸಿ ಭಾಷಣ ಮಾಡದ ರಾಜ್ಯಪಾಲ ಆರ್‌.ಎನ್‌. ರವಿ ಅವರು ತಮ್ಮ ಸ್ಥಾನಕ್ಕೆ ಅಗೌರವ ತೋರಿದ್ದಾರೆ ಎಂದು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್ ಶನಿವಾರ ಆರೋಪಿಸಿದರು.

ರಾಜ್ಯಪಾಲರ ಭಾಷಣದ ಮೇಲಿನ ವಂದನಾ ನಿರ್ಣಯಕ್ಕೆ ಪ್ರತಿಕ್ರಿಯಿಸಿದ ಸ್ಟಾಲಿನ್, ‘ತಮಿಳುನಾಡು ಹಲವಾರು ರಾಜ್ಯಪಾಲರನ್ನು ಕಂಡಿದೆ. ಆದರೆ, ಯಾರು ರವಿ ಅವರಂತೆ ವರ್ತಿಸಿಲ್ಲ. ಮಾಜಿ ಮುಖ್ಯಮಂತ್ರಿಗಳಾದ ಸಿ.ಎನ್‌ ಅಣ್ಣಾದೊರೈ, ಎಂ. ಕರುಣಾನಿಧಿ, ಎಂ.ಜಿ ರಾಮಚಂದ್ರನ್ ಮತ್ತು ಜೆ. ಜಯಲಲಿತಾ ಅವರು ಎದುರಿಸದ ಬಿಕ್ಕಟ್ಟು ನನಗೆ ಎದುರಾಗಿದೆ’ ಎಂದರು.

ಮಂಗಳವಾರ ಆರಂಭಗೊಂಡ ತಮಿಳುನಾಡು ವಿಧಾನಮಂಡಲ ಅಧಿವೇಶನವನ್ನು ಉದ್ದೇಶಿಸಿ ಭಾಷಣ ಮಾಡಲು ರಾಜ್ಯಪಾಲರು ನಿರಾಕರಿಸಿದ್ದರು. ರಾಜ್ಯ ಸರ್ಕಾರ ಸಿದ್ಧಪಡಿಸಿರುವ ಭಾಷಣದಲ್ಲಿ ಸತ್ಯಾಂಶಗಳು ಇಲ್ಲ ಮತ್ತು ಅಧಿವೇಶನದ ಆರಂಭದಲ್ಲಿ ರಾಷ್ಟ್ರಗೀತೆ ನುಡಿಸಬೇಕು ‌ಎಂದು ಹೇಳಿದ್ದರು. ಬಳಿಕ ಅದೇ ಭಾಷಣದ ತಮಿಳು ಆವೃತ್ತಿಯನ್ನು ಸಭಾಪತಿ ಓದಿದರು.

ADVERTISEMENT

‘ತಮಿಳುನಾಡು ವಿಧಾನಮಂಡಲದ ಸಂಪ್ರದಾಯದಂತೆ ಅಧಿವೇಶನದ ಆರಂಭದಲ್ಲಿ ತಮಿಳು ನಾಡಗೀತೆಯನ್ನು ನುಡಿಸಲಾಗುತ್ತದೆ. ರಾಷ್ಟ್ರಗೀತೆಯನ್ನು ಅಧಿವೇಶನ ಮುಗಿದ ಬಳಿಕವೇ ನುಡಿಸಲಾಗುತ್ತದೆ. ದೇಶಭಕ್ತಿಯ ವಿಚಾರದಲ್ಲಿ ನಾವು ಯಾರಿಗೂ ಕಡಿಮೆಯಿಲ್ಲ. ಈ ಬಗ್ಗೆ ನಮಗೆ ಯಾರೂ ಪಾಠ ಮಾಡುವ ಅಗತ್ಯವಿಲ್ಲ. ಈ ಹಿಂದೆಯೂ  ಹಲವು ಸವಾಲುಗಳು ನನಗೆ ಎದುರಾಗಿತ್ತು. ಅವುಗಳನ್ನು ನಿಭಾಯಿಸಿದ್ದೇನೆ’ ಎಂದು ಸ್ಟಾಲಿನ್ ಹೇಳಿದರು.

‘ತಮಿಳುನಾಡಿನ ಕಲ್ಯಾಣಕ್ಕಾಗಿ ಕೆಲಸ ಮಾಡಬೇಕಾದ ರಾಜ್ಯಪಾಲರು. ರಾಜ್ಯದ ಮತ್ತು ಜನರಿಗಾಗಿ ಶ್ರಮಿಸುತ್ತಿರುವವರ ವಿರುದ್ಧ ಕೆಲಸ ಮಾಡುವುದನ್ನು ಮುಂದುವರಿಸುತ್ತಿರುವುದು ನೋವುಂಟು ಮಾಡುತ್ತದೆ. ಅವರ ಸಭಾತ್ಯಾಗ ಅಚ್ಚರಿ ಮೂಡಿಸಿತ್ತು. ಜವಬ್ದಾರಿಯುತ ಸ್ಥಾನದಲ್ಲಿದ್ದುಕೊಂಡು ದೇಶದ ಸಂವಿಧಾನಕ್ಕೆ ಅಪಚಾರ ಎಸಗಿದ್ದಾರೆ’ ಎಂದು ಹೇಳಿದರು.

‘ಕಳೆದ ಮೂರು ವರ್ಷಗಳಿಂದ ಅವರು ಒಂದೇ ರೀತಿಯ ಕಾರಣಗಳನ್ನು ನೀಡಿ, ಭಾಷಣವನ್ನು ಓದುತ್ತಿಲ್ಲ. ಇದು ಪ್ರಜಾಪ್ರಭುತ್ವಕ್ಕೆ ಎಸೆದ ಸವಾಲು ಎಂದು ಪರಿಗಣಿಸಬೇಕಾಗುತ್ತದೆ‌. ಪ್ರಜಾಪ್ರಭುತ್ವ ರಾಷ್ಟ್ರದ ಸಂವಿಧಾನದ ಘನತೆಗೆ ಸರ್ವಾಧಿಕಾರದ ಮೂಲಕ ಧಕ್ಕೆ ತರುತ್ತಿರುವವರು ರಾಷ್ಟ್ರವಿರೋಧಿಗಳು. ಅದು ಯಾರೆಂದು ಜನರಿಗೆ ಗೊತ್ತಿದೆ’ ಎಂದು ಪರೋಕ್ಷವಾಗಿ ಬಿಜೆಪಿಯನ್ನು ಟೀಕಿಸಿದರು.

‘ಬೇರೆ ಸರ್ಕಾರಗಳ ಅವಧಿಯಲ್ಲಿಯೂ ರಾಜ್ಯಪಾಲರುಗಳಿಗೆ ಭಿನ್ನಾಭಿಪ್ರಾಯ ಇತ್ತು. ಆದರೆ ಅವರು ಸಂಘರ್ಷಕ್ಕೆ ದಾರಿ ಮಾಡಿ ಕೊಟ್ಟಿರಲಿಲ್ಲ. ಇಂಥ ಬಿಕ್ಕಟ್ಟನ್ನು ಎದುರಿಸಿದವನು ನಾನೊಬ್ಬನೆ. ನನ್ನನ್ನು ಟೀಕಿಸಬಹುದು ಹೊರತು ಹಾನಿಗೊಳಿಸಲು ಸಾಧ್ಯವಿಲ್ಲ’ ಎಂದು ಗುಡುಗಿದರು.

‘ಕೇಂದ್ರ ಸರ್ಕಾರವನ್ನು ಪ್ರಶ್ನಿಸಿ’
ಭಾಷಣ ನಿರಾಕರಣೆಗೆ ರಾಜ್ಯಪಾಲರು ನೀಡಿದ ಕಾರಣಗಳನ್ನು ಉಲ್ಲೇಖಿಸಿ ಮಾತನಾಡಿದ ಸ್ಟಾಲಿನ್ ‘14 ವರ್ಷಗಳ ಬಳಿಕ ತಮಿಳುನಾಡು ಎರಡಂಕಿಯ ಆರ್ಥಿಕ ಪ್ರಗತಿಯನ್ನು ಸಾಧಿಸಿದೆ. ಇದನ್ನು ಕೇಂದ್ರಸರ್ಕಾರವು ಒಪ್ಪಿಕೊಂಡಿದೆ. ಇದನ್ನು ಹೇಳಿರುವುದು ನಾವಲ್ಲ ಕೇಂದ್ರ ಸರ್ಕಾರದ ಸಾಂಖ್ಯಿಕ ಇಲಾಖೆ. ರಾಜ್ಯಪಾಲರಿಗೆ ಪ್ರಶ್ನೆಗಳಿದ್ದರೆ ಅವರನ್ನು ಇಲ್ಲಿಗೆ ಕಳುಹಿಸಿದ ಕೇಂದ್ರ ಸರ್ಕಾರದ ಬಳಿಯೇ ಕೇಳಬೇಕು’ ಎಂದು ಸ್ಟಾಲಿನ್‌ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.