ADVERTISEMENT

ಪಕ್ಷಾಂತರ ಮಾಡಿದರೂ ಉಪಚುನಾವಣೆ ನಡೆಯದು: ತೆಲಂಗಾಣ CM ಮಾತಿಗೆ ‘ಸುಪ್ರೀಂ’ ಕಿಡಿ

‘ಇದು, ಸಂವಿಧಾನದ ಅಣಕ’ ಎಂದ ಪೀಠ

ಪಿಟಿಐ
Published 2 ಏಪ್ರಿಲ್ 2025, 15:39 IST
Last Updated 2 ಏಪ್ರಿಲ್ 2025, 15:39 IST
ಸುಪ್ರೀಂ ಕೋರ್ಟ್‌
ಸುಪ್ರೀಂ ಕೋರ್ಟ್‌   

ನವದೆಹಲಿ: ‘ಬಿಆರ್‌ಎಸ್‌ ಪಕ್ಷದ ಶಾಸಕರು ಕಾಂಗ್ರೆಸ್‌ಗೆ ಪಕ್ಷಾಂತರ ಮಾಡಿದರೂ ಅವರ ಕ್ಷೇತ್ರಗಳಿಗೆ ಉಪ ಚುನಾವಣೆ ನಡೆಯುವುದಿಲ್ಲ’ ಎಂದು ತೆಲಂಗಾಣ ಮುಖ್ಯಮಂತ್ರಿ ಹೇಳಿಕೆ ನೀಡಿದ್ದಾರೆ ಎನ್ನಲಾದ ಮಾತಿಗೆ ಸುಪ್ರೀಂ ಕೋರ್ಟ್ ತೀವ್ರ ತರಾಟೆ ತೆಗೆದುಕೊಂಡಿದೆ.

‘ಮುಖ್ಯಮಂತ್ರಿ ಅವರು ಈ ಮಾತನ್ನು ಸದನದಲ್ಲಿಯೇ ಹೇಳಿದ್ದಲ್ಲಿ, ಅದು ಸಂವಿಧಾನದ 10ನೇ ಪರಿಚ್ಛೇದದ ಅಣಕವಾಗಿದೆ’ ಎಂದು ನ್ಯಾಯಮೂರ್ತಿಗಳಾದ ಬಿ.ಆರ್. ಗವಾಯಿ ಮತ್ತು ಆಗಸ್ಟೀನ್ ಜಾರ್ಜ್‌ ಮಸೀಹ್ ಅವರಿದ್ದ ಪೀಠ ಕಟುವಾಗಿ ಹೇಳಿತು.

ವಿಧಾನಸಭೆ ಸದಸ್ಯರು ಪಕ್ಷಾಂತರ ಮಾಡಿದಲ್ಲಿ ಶಾಸಕ ಸ್ಥಾನದಿಂದ ಅವರನ್ನು ಅನರ್ಹಗೊಳಿಸುವ ನಿಯಮಗಳನ್ನು ಈ ಪರಿಚ್ಛೇದವು ಒಳಗೊಂಡಿದೆ.   

ADVERTISEMENT

ತೆಲಂಗಾಣದ ಮುಖ್ಯಮಂತ್ರಿ ಎ. ರೇವಂತರೆಡ್ಡಿ ಅವರು ಮಾರ್ಚ್‌ 26ರಂದು ವಿಧಾನಸಭೆಯಲ್ಲಿ ಈ ಮಾತು ಆಡಿದ್ದಾರೆ ಎಂದು ಬಿಆರ್‌ಎಸ್‌ ಮುಖಂಡರ ಪರ ವಕೀಲ ಪೀಠದ ಗಮನಕ್ಕೆ ತಂದರು. ಮುಖ್ಯಮಂತ್ರಿ ಮಾತಿಗೆ ನ್ಯಾಯಮೂರ್ತಿ ಬಿ.ಆರ್‌.ಗವಾಯಿ ಆಕ್ಷೇಪ ವ್ಯಕ್ತಪಡಿಸಿದರು.

‘ರಾಮ್‌ಲೀಲಾ ಮೈದಾನದಲ್ಲಿ ನಿಂತು ಏನೋ ಹೇಳುವುದಕ್ಕೂ, ಸದನದಲ್ಲಿ ಆಡುವ ಮಾತುಗಳಿಗೂ ವ್ಯತ್ಯಾಸವಿದೆ. ರಾಜಕಾರಣಿ ಸದನದಲ್ಲಿ ಆಡುವ ಮಾತಿಗೆ ಪಾವಿತ್ರ್ಯತೆ ಇರುತ್ತದೆ’ ಎಂದು ನ್ಯಾಯಮೂರ್ತಿ ಒಂದು ಹಂತದಲ್ಲಿ ಕಟುವಾಗಿ ಹೇಳಿದರು.

‘ಸಚಿವರು ಸದನದಲ್ಲಿ ಆಡಿರುವ ಮಾತುಗಳನ್ನು ಆಧರಿಸಿ ಒಟ್ಟು ಪರಿಸ್ಥಿತಿಯನ್ನು ವ್ಯಾಖ್ಯಾನಿಸಿರುವುದಕ್ಕೆ ಸಂಬಂಧಿಸಿದ ತೀರ್ಪುಗಳೂ ಇವೆ’ ಎಂದು ನ್ಯಾಯಮೂರ್ತಿ ಅವರ ವಕೀಲರ ಗಮನಕ್ಕೆ ತಂದರು. 

ಕಾಂಗ್ರೆಸ್‌ ಪಕ್ಷಕ್ಕೆ ಪಕ್ಷಾಂತರ ಮಾಡಿರುವ ಬಿಆರ್‌ಎಸ್‌ ಶಾಸಕರಿಗೆ ನೋಟಿಸ್ ಜಾರಿ ಮಾಡಲು ಸ್ಪೀಕರ್ ವಿಳಂಬ ಮಾಡುತ್ತಿದ್ದಾರೆ ಎಂದು ಆಕ್ಷೇಪಿಸಿ ಸಲ್ಲಿಸಲಾಗಿದ್ದ ಅರ್ಜಿಯ ವೇಳೆ ಸುಪ್ರೀಂ ಕೋರ್ಟ್‌ ಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿತು.

‘ಸ್ಪೀಕರ್ ಅವರೇ.. ನಿಮ್ಮ ಮೂಲಕ ಈ ಸದಸ್ಯರಿಗೆ ಉಪ ಚುನಾವಣೆ ಕುರಿತು ಆತಂಕ ಪಡುವ ಅಗತ್ಯವಿಲ್ಲ ಎಂದು ನಾನು ಭರವಸೆ  ನೀಡುತ್ತೇನೆ. ಬಿಆರ್‌ಎಸ್‌ ಶಾಸಕರು ಪಕ್ಷ ಬದಲಿಸಿದರೂ ಉಪ ಚುನಾವಣೆ ನಡೆಯದು ಎಂದು ಮುಖ್ಯಮಂತ್ರಿ ರೇವಂತ ರೆಡ್ಡಿ ಸದನದಲ್ಲಿ ಹೇಳಿದ್ದಾರೆ’ ಎಂದು ಬಿಆರ್‌ಎಸ್‌ ನಾಯಕ ಪಡಿ ಕೌಶಿಕ್‌ ರೆಡ್ಡಿ ವಕೀಲ ಸುಂದರಂ ಅವರು ಪೀಠದ ಗಮನಕ್ಕೆ ತಂದರು.

ಸ್ಪೀಕರ್ ಅವರನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲ ಮುಕುಲ್‌ ರೋಹಟಗಿ ಅವರು ಮಧ್ಯಪ್ರವೇಶಿಸಿ, ‘ಸುಪ್ರೀಂ ಕೋರ್ಟ್‌ ಮುಂದೆ ಈಗ ವಿಚಾರಣೆಯಲ್ಲಿ ಇರುವುದು ವಿಧಾನಸಭೆಯ ನಡಾವಳಿಯಲ್ಲ’ ಎಂದು ಹೇಳಿದರು. 

‘ನಾನು ಇಲ್ಲಿ ಸಿ.ಎಂ ಅವರನ್ನು ಪ್ರತಿನಿಧಿಸುತ್ತಿಲ್ಲ’ ಎಂದೂ ರೋಹಟಗಿ ಹೇಳಿದರು. ಆಗ ನ್ಯಾಯಮೂರ್ತಿ ಗವಾಯಿ ಅವರು, ‘ರೋಹಟಗಿ ಅವರೇ ಒಮ್ಮೆ ನೀವು ಸಿ.ಎಂ ಅವರನ್ನೂ ಪ್ರತಿನಿಧಿಸಿದ್ದೀರಿ. ಅವರಿಗೆ ಎಚ್ಚರಿಸಿ. ನ್ಯಾಯಾಂಗ ನಿಂದನೆ ನೋಟಿಸ್ ಜಾರಿ ಮಾಡುವುದನ್ನು ನಾವು ನಿಧಾನ ಮಾಡುತ್ತಿದ್ದೇವೆ ಎಂಬುದರ ಅರಿವು ನಮಗಿದೆ’ ಎಂದು ಹೇಳಿದರು.

‘ಸ್ಪೀಕರ್ ಕ್ರಮಕೈಗೊಳ್ಳದಿದ್ದರೆ ಕೋರ್ಟ್‌ ಕೈಗೊಳ್ಳಲಿದೆ...’

ನವದೆಹಲಿ: ಕಾಂಗ್ರೆಸ್‌ಗೆ ಪಕ್ಷಾಂತರ ಮಾಡಿದ್ದ ಬಿಆರ್‌ಎಸ್‌ ಶಾಸಕರ ಅನರ್ಹತೆ ಕೋರಿದ್ದ ಅರ್ಜಿಗೆ ಸಂಬಂಧಿಸಿ ನೋಟಿಸ್‌ ಜಾರಿ ಮಾಡಲು 10 ತಿಂಗಳು ತೆಗೆದುಕೊಂಡ ತೆಲಂಗಾಣ ವಿಧಾನಸಭೆ ಸ್ಪೀಕರ್ ಅವರ ನಡೆಗೆ ‘ಸುಪ್ರೀಂ’ ತರಾಟೆ ತೆಗೆದುಕೊಂಡಿತು.

‘ಸ್ಪೀಕರ್ ಅವರು ಕ್ರಮಕೈಗೊಳ್ಳುವುದೇ ಇಲ್ಲ ಎಂದಾದರೆ ಈ ದೇಶದ ಕೋರ್ಟ್‌ ಕ್ರಮ ಕೈಗೊಳ್ಳಲಿದೆ. ಕೋರ್ಟ್‌ಗೆ ಈ ಸಂಬಂಧ ಅಧಿಕಾರವಷ್ಟೇ ಅಲ್ಲ ದೇಶದ ಸಂವಿಧಾನವನ್ನು ರಕ್ಷಿಸುವ ಕರ್ತವ್ಯವೂ ಇದೆ’ ಎಂದು ಸುಪ್ರೀಂ ಕೋರ್ಟ್‌ ಚಾಟಿ ಬೀಸಿತು. ಸ್ಪೀಕರ ಪರ ವಕೀಲ ಮುಕುಲ್ ರೋಹಟಗಿ ಅವರು ‘ಶಾಸಕರ ಅನರ್ಹತೆ ಕೋರಲಾಗಿದ್ದ ಮೊದಲ ಅರ್ಜಿ ಮಾರ್ಚ್ 18 2024ರಲ್ಲಿ ಸಲ್ಲಿಸಿದ್ದು ನಂತರ ಕ್ರಮವಾಗಿ ಏಪ್ರಿಲ್‌ 2 8ರಂದು ಎರಡು ಅರ್ಜಿಗಳು ಸಲ್ಲಿಕೆಯಾಗಿವೆ’ ಎಂದು ತಿಳಿಸಿದರು.  

ಆದರೂ ಮೊದಲ ನೋಟಿಸ್ ಜಾರಿಗೆ ಏಕೆ ವಿಳಂಬವಾಯಿತು ಎಂದು ಕೋರ್ಟ್ ಪ್ರಶ್ನಿಸಿದಾಗ ‘ಈ ಸಂಬಂಧಿತ ಅರ್ಜಿ ಹೈಕೋರ್ಟ್‌ ವಿಚಾರಣೆಯಲ್ಲಿತ್ತು. ಹೀಗಾಗಿ ಅನರ್ಹತೆ ಅರ್ಜಿಗೆ ಸಂಬಂಧಿಸಿ ನೋಟಿಸ್‌ ಜಾರಿ ಮಾಡಿರಲಿಲ್ಲ’ ಎಂದು ರೋಹಟಗಿ ತಿಳಿಸಿದರು.

‘ಹಾಗಿದ್ದರೆ ಹೈಕೋರ್ಟ್‌ನ ಮುಂದೆ ವಿಚಾರಣೆ ಬಾಕಿ ಇದ್ದಾಗಲೇ ಸ್ಪೀಕರ್‌ ಏಕೆ ನೋಟಿಸ್‌ ನೀಡಿದರು. ಇದಕ್ಕಾಗಿ ನಾವು ನ್ಯಾಯಾಂಗ ನಿಂದನೆ ನೋಟಿಸ್ ನೀಡಬಹುದೇ’ ಎಂದು ನ್ಯಾಯಮೂರ್ತಿ ಗವಾಯಿ ಪ್ರಶ್ನಿಸಿದರು. ವಿಚಾರಣೆ ಏ.3ರಂದು ಮುಂದುವರಿಯಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.