ಪ್ರಧಾನಿ ನರೇಂದ್ರ ಮೋದಿ
ಪಿಟಿಐ ಚಿತ್ರ
ಗುವಾಹಟಿ: ‘ಚುನಾವಣಾ ಆಯೋಗವು ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ಮೂಲಕ ನುಸುಳುಕೋರರನ್ನು ಚುನಾವಣಾ ಪ್ರಕ್ರಿಯೆಯಿಂದ ಹೊರಗಿಡಲು ಪ್ರಯತ್ನಿಸುತ್ತಿದ್ದರೆ, ‘ದೇಶದ್ರೋಹಿ’ಗಳು ಈ ನುಸುಳುಕೋರರನ್ನು ರಕ್ಷಿಸಲು ಪ್ರಯತ್ನಿಸುತ್ತಿದ್ದಾರೆ’ ಎಂದು ಪ್ರಧಾನಿ ಮೋದಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.
ಗುವಾಹಟಿ ವಿಮಾನ ನಿಲ್ದಾಣದಲ್ಲಿ ಹೊಸ ಟರ್ಮಿನಲ್ ಉದ್ಘಾಟನೆಯ ಬಳಿಕ ನಡೆದ ರ್‍ಯಾಲಿಯಲ್ಲಿ ಮಾತನಾಡಿದ ಅವರು, ‘ನುಸುಳುಕೋರರ ವಿರುದ್ಧ ಕೇಂದ್ರ ಸರ್ಕಾರ ಕಠಿಣ ಕ್ರಮ ಕೈಗೊಂಡಿದೆ. ಅರಣ್ಯವನ್ನು ಕಬಳಿಸಿ, ಅಸ್ಸಾಂನ ಭದ್ರತೆ ಮತ್ತು ಅಸ್ಮಿತೆಗೆ ಅಡ್ಡಿಯಾಗಿರುವ ನುಸುಳುಕೋರರನ್ನು ಕಾಂಗ್ರೆಸ್ ದಶಕಗಳಿಂದ ರಕ್ಷಿಸಿಕೊಂಡು ಬಂದಿದೆ. ಅಸ್ಸಾಂ ಸೇರಿದಂತೆ ಈಶಾನ್ಯ ರಾಜ್ಯಗಳಲ್ಲಿ ಕಾಂಗ್ರೆಸ್ ಮಾಡಿದ ಈ ತಪ್ಪನ್ನು ಬಿಜೆಪಿ ಈಗ ಸರಿಪಡಿಸುತ್ತಿದೆ’ ಎಂದರು.
‘ಅಸ್ಸಾಂ ಮತ್ತು ಈಶಾನ್ಯ ರಾಜ್ಯಗಳ ಅಭಿವೃದ್ಧಿಯು ಕಾಂಗ್ರೆಸ್‌ನ ಕಾರ್ಯಸೂಚಿಯ ಭಾಗವೇ ಆಗಿರಲಿಲ್ಲ’ ಎಂದು ದೂರಿದ ಅವರು, ದಶಕಗಳಿಂದ ಕಾಂಗ್ರೆಸ್‌ನ ನಿರ್ಲಕ್ಷ್ಯಕ್ಕೆ ತುತ್ತಾದ ಅಸ್ಸಾಂ, ಈಗ ದೇಶದ ಪ್ರಗತಿಯ ಹೆಬ್ಬಾಗಿಲಾಗಿ ವಿಕಸಿತಗೊಳ್ಳುತ್ತಿದೆ. ಈಶಾನ್ಯ ರಾಜ್ಯಗಳಲ್ಲಿ ಬಿಜೆಪಿಯ ‘ಡಬಲ್ ಎಂಜಿನ್’ ಸರ್ಕಾರದ ಅಭಿವೃದ್ಧಿಯ ವೇಗವು ಬ್ರಹ್ಮಪುತ್ರ ನದಿಯಂತೆ ಎಲ್ಲ ಅಡೆತಡೆಗಳನ್ನು ಮೀರಿ ಮುನ್ನುಗ್ಗುತ್ತಿದೆ’ ಎಂದರು.
ಪ್ರಧಾನಿ ಪಶ್ಚಿಮ ಬಂಗಾಳದ ಕಾರ್ಯಕ್ರಮದ ಬಳಿಕ ಅಸ್ಸಾಂನಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಎರಡೂ ರಾಜ್ಯಗಳಲ್ಲಿ ಆರು ತಿಂಗಳ ಒಳಗಾಗಿ ವಿಧಾನಸಭೆ ಚುನಾವಣೆ ನಡೆಯಲಿದೆ.
‘ಸ್ವಾತಂತ್ರ್ಯಪೂರ್ವದಲ್ಲಿ ಬ್ರಿಟಿಷರು ಮತ್ತು ಮುಸ್ಲಿಂ ಲೀಗ್ ಭಾರತ ವಿಭಜನೆಗೆ ಕಣವನ್ನು ಸಿದ್ಧಪಡಿಸುವಾಗಲೇ, ಅಸ್ಸಾಂ ಅನ್ನು ಪೂರ್ವ ಪಾಕಿಸ್ತಾನದ ಭಾಗವಾಗಿಸುವ ಪಿತೂರಿ ನಡೆದಿತ್ತು. ಈ ಪಿತೂರಿಯಲ್ಲಿ ಕಾಂಗ್ರೆಸ್ ಕೂಡ ಭಾಗಿಯಾಗಲಿತ್ತು. ಆದರೆ, ಅಸ್ಸಾಂನ ಹೆಗ್ಗುರುತನ್ನು ನಾಶಮಾಡುವ ಈ ಸಂಚನ್ನು ವಿರೋಧಿಸಿ ತಮ್ಮದೇ ಪಕ್ಷದ ವಿರುದ್ಧ ಗೋಪಿನಾಥ್ ಬೋರ್ದೋಲೊಯಿ ಸೆಟೆದು ನಿಂತರು. ಇವರಿಂದ ಭಾರತದಿಂದ ಅಸ್ಸಾಂ ವಿಭಜನೆಯಾಗುವುದು ತಪ್ಪಿತು’ ಎಂದು ಪ್ರಧಾನಿ ಹೇಳಿದರು.
ಬಿಜೆಪಿಯು, ಪಕ್ಷವನ್ನು ಮೀರಿ ಪ್ರತಿಯೊಬ್ಬ ದೇಶಭಕ್ತನನ್ನು ಗೌರವಿಸುತ್ತದೆ. ವಾಜಪೇಯಿ ಸರ್ಕಾರವು ಗೋಪಿನಾಥ್ ಬೋರ್ದೋಲೊಯಿ ಅವರಿಗೆ ‘ಭಾರತ ರತ್ನ’ ಪುರಸ್ಕಾರ ನೀಡಿತು ಎಂದು ಪ್ರಧಾನಿ ಸ್ಮರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.