ಸಮಾವೇಶದಲ್ಲಿ ನರೇಂದ್ರ ಮೋದಿ ಹಾಗೂ ನಿತೀಶ್ ಕುಮಾರ್
– ಪಿಟಿಐ ಚಿತ್ರ
ಮೋತಿಹಾರಿ (ಬಿಹಾರ): ಆರ್‌ಜೆಡಿ ಪಕ್ಷವು ಯುವಕರಿಗೆ ಉದ್ಯೋಗ ನೀಡುವ ಬಗ್ಗೆ ಯೋಚಿಸುವುದಿಲ್ಲ, ಯಾಕೆಂದರೆ ಅವರು ಕೆಲಸ ನೀಡುವ ಮೊದಲು ಬಡವರ ಜಮೀನು ಕಿತ್ತುಕೊಂಡರು ಎಂದು ಪ್ರಧಾನಿ ನರೇಂದ್ರ ಮೋದಿ ವಾಗ್ದಾಳಿ ನಡೆಸಿದ್ದಾರೆ.
ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಅವರೊಂದಿಗೆ ತಳುಕು ಹಾಕಿಕೊಂಡಿರುವ ‘ಉದ್ಯೋಗಕ್ಕಾಗಿ ಭೂಮಿ’ ಹಗರಣವನ್ನು ಉಲ್ಲೇಖಿಸಿ ಪ್ರಧಾನಿ ಹೀಗೆ ಹೇಳಿದ್ದಾರೆ.
ಕಾಂಗ್ರೆಸ್ ಹಾಗೂ ಆರ್‌ಜೆಡಿ ಪಕ್ಷಗಳು ಬಡವರ ಹಾಗೂ ಸಾಮಾಜಿಕವಾಗಿ ಹಿಂದುಳಿದವರ ಹೆಸರಿನಲ್ಲಿ ರಾಜಕೀಯ ಮಾಡುತ್ತಿದೆ, ಆದರೆ ಉಭಯ ಪಕ್ಷಗಳು ಈ ಹಿಂದೆ ಈ ಸಮುದಾಯಗಳನ್ನು ನಿರ್ಲಕ್ಷಿಸಿತ್ತು ಎಂದು ಪ್ರಧಾನಿ ಆರೋಪಿದ್ದಾರೆ.
ಮುಂಬರುವ ವಿಧಾನಸಭೆ ಚುನಾವಣೆಯ ಅಂಗವಾಗಿ ಮೋತಿಹಾರಿಯಲ್ಲಿ ಆಯೋಜಿಸಲಾದ ಸಾರ್ವಜನಿಕ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಅವರು, ‘ಬನಾಯೇಂಗೆ ನಯಾ ಬಿಹಾರ್, ಫಿರ್ ಏಕ್ ಬಾರ್ ಎನ್‌ಡಿಎ ಸರ್ಕಾರ್’ (ಹೊಸ ಬಿಹಾರ ಮಾಡುತ್ತೇವೆ, ಮತ್ತೊಮ್ಮೆ ಎನ್‌ಡಿಎ ಸರ್ಕಾರ) ಎನ್ನುವ ಹೊಸ ಘೋಷಣೆಯನ್ನೂ ಮಾಡಿದ್ದಾರೆ.
ಅಪರೇಷನ್ ಸಿಂಧೂರ ನಡೆಯುವ ನಿರ್ಧಾರವನ್ನು ನಾನು ಬಿಹಾರದ ನೆಲದಲ್ಲೇ ನಿಂತು ಮಾಡಿದ್ದೆ. ಅದರ ಯಶಸ್ಸನ್ನು ಇಡೀ ಜಗತ್ತು ನೋಡಿದೆ ಎಂದು ಹೇಳಿದ್ದಾರೆ.
ಆರ್‌ಜೆಡಿ–ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯಗಳು ನಿಂತು ಹೋಗಿದ್ದವು. ಅವರಿಗೆ ಬಡವರ ಕಲ್ಯಾಣದ ಬಗ್ಗೆ ಯೋಚನೆಯೇ ಇಲ್ಲ. ಅವರು ಬಡವರು, ಸಾಮಾಜಿಕವಾಗಿ ಹಿಂದುಳಿದವರ ಹೆಸರಿನಲ್ಲಿ ರಾಜಕೀಯ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.
ಯುವಕರಿಗೆ ಹೆಚ್ಚಿನ ಅವಕಾಶ ನೀಡುತ್ತೇವೆ ಎಂದು ಭರವಸೆ ನೀಡಿದ ಅವರು, ದೇಶದಲ್ಲಿ ಯುವಕರಿಗೆ ಉದ್ಯೋಗಾವಕಾಶ ನೀಡಲು ಕೇಂದ್ರ ಸರ್ಕಾರ ಒಂದು ಲಕ್ಷ ಕೋಟಿ ಹೂಡಿಕೆ ಮಾಡಲಿದೆ ಎಂದರು.
ಪೂರ್ವ ಭಾರತದ ಅಭಿವೃದ್ಧಿಗೆ ವಿಕಸಿತ ಬಿಹಾರ ಅತಿ ಮುಖ್ಯ. ರಾಜ್ಯದ ಸರ್ವಾಂಗೀಣ ಅಭಿವೃದ್ಧಿ ಬಗ್ಗೆ ಎನ್‌ಡಿಎ ಕಾಳಜಿ ವಹಿಸಿದೆ ಎಂದು ಮೋದಿ ಹೇಳಿದ್ದಾರೆ.
ಕಳೆದ 45 ದಿನಗಳಲ್ಲಿ ಬಿಹಾರದ 24 ಸಾವಿರ ಸ್ವ–ಸಹಾಯ ಸಂಘಗಳಿಗೆ ₹1 ಸಾವಿರ ಕೋಟಿಯನ್ನು ಬಿಡುಗಡೆ ಮಾಡಲಾಗಿದೆ. ದೇಶದಲ್ಲಿ ಒಟ್ಟು 1.5 ಕೋಟಿ ಲಖ್‌ಪತಿ ದೀದಿಗಳಿದ್ದು ಆ ಪೈಕಿ 20 ಕೋಟಿ ಬಿಹಾರದಲ್ಲೇ ಇದ್ದಾರೆ ಎಂದು ಹೇಳಿದ್ದಾರೆ.
ದೇಶದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಚಂಪರಾನ್ ಮಹಾತ್ಮ ಗಾಂಧಿ ಅವರಿಗೆ ಹೊಸ ದಿಕ್ಕನ್ನು ನೀಡಿತು. ಮೋತಿಹಾರಿಯನ್ನು ಮುಂಬೈ ಮಾದರಿಯಲ್ಲಿ ಅಭಿವೃದ್ಧಿಪಡಿಸಬೇಕಿದೆ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.