ADVERTISEMENT

ಲೋಕಪಾಲ ನೇಮಕಾತಿ: ಮೋದಿ ಸರ್ಕಾರ ವಿಳಂಬ ನೀತಿ ಅನುಸರಿಸಿದ್ದಕ್ಕೆ ಇದೆ ದಾಖಲೆ

ಒಂದು ಸಭೆ ನಡೆಸಲು 45 ತಿಂಗಳು ತೆಗೆದುಕೊಂಡ ಕೇಂದ್ರ

​ಪ್ರಜಾವಾಣಿ ವಾರ್ತೆ
Published 31 ಡಿಸೆಂಬರ್ 2018, 12:00 IST
Last Updated 31 ಡಿಸೆಂಬರ್ 2018, 12:00 IST
ನರೇಂದ್ರ ಮೋದಿ (ಸಂಗ್ರಹ ಚಿತ್ರ)
ನರೇಂದ್ರ ಮೋದಿ (ಸಂಗ್ರಹ ಚಿತ್ರ)   

ನವದೆಹಲಿ: ಭ್ರಷ್ಟಾಚಾರ ತಡೆಯುವ ಉದ್ದೇಶದ ಲೋಕಪಾಲ ಸಂಸ್ಥೆ ಸ್ಥಾಪಿಸುವುದಕ್ಕೆ ಸಂಬಂಧಿಸಿದ ಲೋಕಪಾಲ ಮತ್ತು ಲೋಕಾಯುಕ್ತ ಕಾಯ್ದೆಗೆ 2013ರಲ್ಲೇ ಅನುಮೋದನೆ ದೊರೆತಿದೆ. ಆದರೆ ಇನ್ನೂ ಆ ಸಂಸ್ಥೆಗೆ ಅಧ್ಯಕ್ಷರ ಹಾಗೂ ಸದಸ್ಯರ ನೇಮಕವಾಗದಿರುವುದಕ್ಕೆ ನರೇಂದ್ರ ಮೋದಿ ನೇತೃತ್ವದ ಸರ್ಕಾರ ವಿಳಂಬ ನೀತಿ ಅನುಸರಿಸಿದ್ದೇ ಕಾರಣ ಎಂಬುದು ಮಾಹಿತಿ ಹಕ್ಕು ಕಾಯ್ದೆ (ಆರ್‌ಟಿಐ) ಅನ್ವಯ ಪಡೆದ ಮಾಹಿತಿಯಿಂದ ತಿಳಿದುಬಂದಿದೆ.

ಲೋಕಪಾಲ ನೇಮಕಕ್ಕೆ ಸಂಬಂಧಿಸಿದ ಸ್ಥಿತಿಗತಿ ಕುರಿತು ಮಾಹಿತಿ ಕೋರಿ ಮಾಹಿತಿ ಹಕ್ಕು ಕಾರ್ಯಕರ್ತೆ ಅಂಜಲಿ ಭಾರದ್ವಾಜ್ (ಮಾಹಿತಿ ಹಕ್ಕು ಕುರಿತ ರಾಷ್ಟ್ರೀಯ ಅಭಿಯಾನದ ಸದಸ್ಯೆ/ಎನ್‌ಸಿಪಿಆರ್‌ಐ)ಅರ್ಜಿ ಸಲ್ಲಿಸಿದ್ದರು. ಲೋಕಪಾಲರ ನೇಮಕ ವಿಳಂಬವಾಗುತ್ತಿರುವುದರ ಬಗ್ಗೆ 2018ರ ಜನವರಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಎನ್‌ಸಿಪಿಆರ್‌ಐ ವಿಸ್ತೃತ ಪತ್ರ ಬರೆದಿತ್ತು. ‘ಲೋಕಪಾಲ ನೇಮಕಕ್ಕೆ ಸಂಬಂಧಿಸಿ 2014ರ ಜನವರಿ 1ರಂದು ಅಧಿಸೂಚನೆ ಹೊರಡಿಸಲಾಗಿತ್ತು. ಆದರೆ ಈವರೆಗೂ ಸಂಸ್ಥೆಗೆ ಒಬ್ಬರನ್ನೂ ನೇಮಕ ಮಾಡಲಾಗಿಲ್ಲ’ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿತ್ತು.

ಲೋಕಪಾಲ ಮತ್ತು ಲೋಕಾಯುಕ್ತ ಕಾಯ್ದೆಯ ಅನ್ವಯ ನೇಮಕ ಮಾಡಲಾದ ಲೋಕಪಾಲರ ಆಯ್ಕೆ ಸಮಿತಿ 2014ರ ಎಷ್ಟು ಸಭೆಗಳನ್ನು ನಡೆಸಿದೆ? ಏನೇನು ಕ್ರಮ ಕೈಗೊಂಡಿದೆ, ಸಭೆಗಳಲ್ಲಿ ಏನೇನು ಚರ್ಚೆಯಾಗಿದೆ ಮತ್ತು ಯಾರೆಲ್ಲ ಇದ್ದರು ಎಂಬ ಬಗ್ಗೆಅಂಜಲಿ ಮಾಹಿತಿ ಕೋರಿದ್ದರು.

45 ತಿಂಗಳು ನಡೆದಿಲ್ಲ ಒಂದೇ ಒಂದು ಸಭೆ

ಅಂಜಲಿ ಅವರ ಅರ್ಜಿಗೆಸಿಬ್ಬಂದಿ ಮತ್ತು ತರಬೇತಿ ಸಚಿವಾಲಯ ಡಿಸೆಂಬರ್ 13ರಂದು ಉತ್ತರ ನೀಡಿದೆ. ‘2014ರ ಫೆಬ್ರುವರಿ 3 ಮತ್ತು ಫೆಬ್ರುವರಿ 21ರಂದು ಲೋಕಪಾಲ ಆಯ್ಕೆ ಸಮಿತಿಯ ಸಭೆ ನಡೆದಿದೆ. ಅಂದಿನ ಪ್ರಧಾನಿ ಮನಮೋಹನ್ ಸಿಂಗ್ ಅಧ್ಯಕ್ಷತೆಯಲ್ಲಿ ಸಭೆ ನಡೆದಿತ್ತು. ಲೋಕಸಭೆಯ ಅಂದಿನ ಸ್ಪೀಕರ್ ಮೀರಾ ಕುಮಾರ್, ಅಂದಿನ ಪ್ರತಿಪಕ್ಷ ನಾಯಕಿ ಸುಷ್ಮಾ ಸ್ವರಾಜ್, ಸುಪ್ರೀಂ ಕೋರ್ಟ್‌ನ ಅಂದಿನ ನ್ಯಾಯಮೂರ್ತಿ ಎಚ್‌.ಎಲ್‌.ದತ್ತು ಭಾಗವಹಿಸಿದ್ದರು. ದ್ವಿತೀಯ ಸಭೆಯಲ್ಲಿ ಕಾನೂನು ತಜ್ಞ (ಎಮಿನೆಂಟ್ ಜ್ಯೂರಿಸ್ಟ್ ಅಥವಾ ಲೋಕಪಾಲ ಆಯ್ಕೆ ಸಮಿತಿಯಲ್ಲಿನ ಕಾನೂನು ತಜ್ಞ) ಪಿ.ಪಿ.ರಾವ್ ಭಾಗವಹಿಸಿದ್ದರು. ನಂತರ 2018ರಲ್ಲಿ ಆಯ್ಕೆ ಸಮಿತಿಯು ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ 6 ಸಭೆಗಳನ್ನು ನಡೆಸಿದೆ. ಮೊದಲೆರಡು ಸಭೆಗಳು 2018ರ ಮಾರ್ಚ್‌ 1 ಮತ್ತು ಏಪ್ರಿಲ್ 10ರಂದು ನಡೆದಿವೆ. ಲೋಕಸಭೆ ಸ್ಪೀಕರ್ ಸುಮಿತ್ರಾ ಮಹಾಜನ್ ಹಾಗೂ ಸುಪ್ರೀಂ ಕೋರ್ಟ್‌ನ ನಿವೃತ್ತ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ಸಹ ಈ ಸಭೆಗಳಲ್ಲಿ ಭಾಗವಹಿಸಿದ್ದಾರೆ. ನಂತರ ಜುಲೈ 19, ಸೆಪ್ಟೆಂಬರ್ 4 ಮತ್ತು ಸೆಪ್ಟೆಂಬರ್ 19ರಂದು ಸಭೆ ನಡೆದಿತ್ತು. ಕಾನೂನು ತಜ್ಞರಾಗಿ ಮುಕುಲ್ ರೋಹ್ಟಗಿ ಸಹ ಈ ಸಭೆಗಳಲ್ಲಿ ಭಾಗವಹಿಸಿದ್ದರು’ ಎಂದುಸಿಬ್ಬಂದಿ ಮತ್ತು ತರಬೇತಿ ಸಚಿವಾಲಯ ಅಂಜಲಿ ಅವರಿಗೆ ನಿಡಿರುವ ಉತ್ತರದಲ್ಲಿ ತಿಳಿಸಿದೆ. ಇದರ ಪ್ರಕಾರ, ಎನ್‌ಡಿಎ ಸರ್ಕಾರ ಅಧಿಕಾರಕ್ಕೆ ಬಂದ 45 ತಿಂಗಳ ಕಾಲ ಲೋಕಪಾಲ ಆಯ್ಕೆಗೆ ಸಂಬಂಧಿಸಿ ಒಂದೇ ಒಂದು ಸಭೆ ನಡೆದಿಲ್ಲ.

ಆರ್‌ಟಿಐ ಅರ್ಜಿಗೆಸಿಬ್ಬಂದಿ ಮತ್ತು ತರಬೇತಿ ಸಚಿವಾಲಯ ನೀಡಿರುವ ಉತ್ತರದ ಪ್ರತಿ

‘ಸಭೆಯಲ್ಲಿ ಚರ್ಚೆಯಾದ ವಿಷಯಗಳ ಮಾಹಿತಿ ನೀಡಲಾಗದು’

3–5 ಮಂದಿ ಗಣ್ಯರು ಭಾಗವಹಿಸಿದ್ದ ಆ ಸಭೆಗಳಲ್ಲಿ ಏನೇನು ಚರ್ಚೆಯಾಗಿದೆ ಎಂಬ ಮಾಹಿತಿ ‘ಗೋಪ್ಯ ಕಡತ’ಗಳ ವ್ಯಾಪ್ತಿಯಲ್ಲಿ ಬರುವುದರಿಂದ ಅದನ್ನು ಬಹಿರಂಪಡಿಸಲಾಗದು ಎಂದು ಸಚಿವಾಲಯ ಹೇಳಿದೆ. ಆದಾಗ್ಯೂ, ‘ಲೋಕಪಾಲಕ್ಕೆ 8 ಮಂದಿಯ ಆಯ್ಕೆ ಮಾಡುವ ವಿಚಾರಕ್ಕೆ ಸಂಬಂಧಿಸಿ ಶೋಧ ಸಮಿತಿಯೊಂದನ್ನು ರಚಿಸುವಂತೆದ್ವಿತೀಯ ಸಭೆಯಲ್ಲಿ ಆಯ್ಕೆ ಸಮಿತಿ ಶಿಫಾರಸು ಮಾಡಿತ್ತು. ಆದರೆ ಆಯ್ಕೆ ಸಮಿತಿಯ ಇಬ್ಬರು ಸದಸ್ಯರು ಈ ಶಿಫಾರಸನ್ನು ತಿರಸ್ಕರಿಸಿದ್ದಲ್ಲದೆ, ನಿಷ್ಪ್ರಯೋಜಕ ಎಂದು ಬಣ್ಣಿಸಿದ್ದರು’ ಎಂಬ ಮಾಹಿತಿ ನೀಡಿದೆ. 2018ರ ಸೆಪ್ಟೆಂಬರ್‌ನಲ್ಲಿ ಶೋಧ ಸಮಿತಿ ರಚಿಸುವ ಬಗ್ಗೆ ಆದೇಶ ಹೊರಡಿಸಲಾಗಿದೆ.

ಪಿ.ಪಿ. ರಾವ್ ಅವರ ನಿಧನದ ನಂತರ ಅಟಾರ್ನಿ ಜನರಲ್ ಮುಕುಲ್ ರೋಹ್ಟಗಿ ಅವರನ್ನು ಲೋಕಪಾಲ ಆಯ್ಕೆ ಸಮಿತಿಯಕಾನೂನು ತಜ್ಞರಾಗಿ ನೇಮಕ ಮಾಡಲಾಗಿತ್ತು ಎಂದೂ ಸಚಿವಾಲಯ ತಿಳಿಸಿದೆ.

‘ಮಾಹಿತಿ ನಿರಾಕರಣೆ ಕಾನೂನುಬಾಹಿರ’

ಸಭೆಯ ನಡಾವಳಿ ಬಹಿರಂಗಪಡಿಸಲು ಸಿಬ್ಬಂದಿ ಮತ್ತು ತರಬೇತಿ ಇಲಾಖೆಯು ನಿರಾಕರಿಸಿದೆ. 3ರಿಂದ 5 ಉನ್ನತ ವ್ಯಕ್ತಿಗಳು ಈ ಸಭೆಯಲ್ಲಿ ಭಾಗಿಯಾಗಿದ್ದಾರೆ. ಹಾಗಾಗಿ ಈ ಸಭೆಯ ನಡಾವಳಿಯನ್ನು ಬಹಿರಂಗಪಡಿಸುವ ಹಕ್ಕು ತನಗೆ ಇಲ್ಲ ಎಂದು ಇಲಾಖೆ ಹೇಳಿದೆ. ಆದರೆ, ಈ ಮಾಹಿತಿಗೆ ಮಾಹಿತಿ ಹಕ್ಕು ಕಾಯ್ದೆಯು ವಿನಾಯಿತಿ ನೀಡಿರುವ ಬಗ್ಗೆ ಯಾವುದೇ ದಾಖಲೆಯನ್ನು ಇಲಾಖೆ ಕೊಟ್ಟಿಲ್ಲ. ಹಾಗಾಗಿ ನಡಾವಳಿ ಬಹಿರಂಗಪಡಿಸಲು ಇಲಾಖೆ ನಿರಾಕರಿಸಿರುವುದು ಕಾನೂನುಬಾಹಿರ ಎಂದು ಅಂಜಲಿ ಹೇಳಿದ್ದಾರೆ.

ಪ್ರತಿಪಕ್ಷಗಳಿಂದ ವಾಗ್ದಾಳಿ

ಲೋಕಪಾಲ ನೇಮಕ ಮಾಡದಿರುವುದನ್ನು ಪ್ರತಿಪಕ್ಷಗಳೂ ಟೀಕಿಸಿವೆ. ನೀರವ್ ಮೋದಿ ಮತ್ತು ಮೆಹುಲ್ ಚೊಕ್ಸಿ ಪಂಜಾಬ್ ನ್ಯಾಷನಲ್ ಬ್ಯಾಂಕ್‌ಗೆ ಬಹುಕೋಟಿ ವಂಚಿಸಿರುವ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಲೋಕಪಾಲ ನೇಮಕವಾಗದಿರುವ ವಿಷಯವನ್ನು ಕಾಂಗ್ರೆಸ್ ಮತ್ತೆ ಪ್ರಸ್ತಾಪಿಸಿತ್ತು.ಮೋದಿ ಅವರು ಇಂತಹ ಉದ್ಯಮಿಗಳ ಪರ ವಹಿಸುತ್ತಿದ್ದಾರೆ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರು ಕರ್ನಾಟಕದ ರ್‍ಯಾಲಿಯೊಂದರಲ್ಲಿ ಆರೋಪಿಸಿದ್ದರು. ಅಲ್ಲದೆ, ಲೋಕಪಾಲ ನೇಮಕ ಮಾಡದಿರುವುದನ್ನು ಪ್ರಶ್ನಿಸಿದ್ದರು.

ಅಸಮಾಧಾನ ವ್ಯಕ್ತಪಡಿಸಿದ್ದ ಸುಪ್ರೀಂ ಕೋರ್ಟ್

ಲೋಕಪಾಲ ಸಂಸ್ಥೆಗೆ ಅಧ್ಯಕ್ಷರು ಹಾಗೂ ಸದಸ್ಯರನ್ನು ನೇಮಕ ಮಾಡದ ಕೇಂದ್ರ ಸರ್ಕಾರದ ಕ್ರಮದ ಬಗ್ಗೆ 2018ರ ಜುಲೈನಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದ ಸುಪ್ರೀಂ ಕೋರ್ಟ್‌, ಸರ್ಕಾರದ ನಿಲುವು ‘ಒಂದುಚೂರೂ ತೃಪ್ತಿಕರವಾಗಿಲ್ಲ’ ಎಂದು ಹೇಳಿತ್ತು.ಲೋಕಪಾಲ ಸಂಬಂಧ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿರುವ ಸರ್ಕಾರೇತರ ಸಂಸ್ಥೆ (ಎನ್‌ಜಿಒ) ಪರವಾಗಿ ಹಿರಿಯ ವಕೀಲ ಪ್ರಶಾಂತ್‌ ಭೂಷಣ್ ಹಾಜರಾಗಿದ್ದರು. ಅವರು ‘ಲೋಕಪಾಲ ನೇಮಕ ಕಾನೂನು ಜಾರಿಯಾಗಿ ಐದು ವರ್ಷ ಕಳೆದಿದೆ. ಆದರೂ ಸರ್ಕಾರ ನೇಮಕ ಪ್ರಕ್ರಿಯೆ ವಿಳಂಬ ಮಾಡುತ್ತಿದೆ. ಅಲ್ಲದೆ, ಮುಂದಿನ ಸಭೆ ನಡೆಯುವ ನಿರ್ದಿಷ್ಟ ದಿನಾಂಕವನ್ನೂ ತಿಳಿಸಿಲ್ಲ’ ಎಂದು ಆಕ್ಷೇಪ ವ್ಯಕ್ತಪಡಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.