ADVERTISEMENT

2004ರಲ್ಲಿ ವಾಜಪೇಯಿ ಸೋತಂತೆ 2019ರಲ್ಲಿ ಮೋದಿಗೂ ಸೋಲು: ಸೀತಾರಾಮ್ ಯೆಚೂರಿ

​ಪ್ರಜಾವಾಣಿ ವಾರ್ತೆ
Published 17 ಡಿಸೆಂಬರ್ 2018, 10:21 IST
Last Updated 17 ಡಿಸೆಂಬರ್ 2018, 10:21 IST
ಸೀತಾರಾಮ್ ಯೆಚೂರಿ
ಸೀತಾರಾಮ್ ಯೆಚೂರಿ   

ನವದೆಹಲಿ:ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಎನ್‌ಡಿಎ ಸರ್ಕಾರ 2004ರ ಲೋಕಸಭೆ ಚುನಾವಣೆಯಲ್ಲಿ ಸೋಲನುಭವಿಸಿದಂತೆಯೇ 2019ರಲ್ಲಿ ನರೇಂದ್ರ ಮೋದಿ ಅವರ ಸರ್ಕಾರಕ್ಕೂ ಸೋಲಾಗಲಿದೆ ಎಂದು ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಸೀತಾರಾಮ್ ಯೆಚೂರಿ ಅಭಿಪ್ರಾಯಪಟ್ಟಿದ್ದಾರೆ.

ಅಜೆಂಡಾ ಆಜ್‌ತಕ್ಕಾರ್ಯಕ್ರಮದ ಸಂದರ್ಭ ಸಂವಾದದಲ್ಲಿ ಮಾತನಾಡಿದ ಅವರು, ‘ಚುನಾವಣೆಯ ನಂತರವಷ್ಟೇ ಪ್ರತಿಪಕ್ಷಗಳು ಪ್ರಧಾನಿ ಅಭ್ಯರ್ಥಿಯನ್ನು ಘೋಷಿಸಲಿವೆ’ ಎಂದು ಹೇಳಿದರು.

‘ಈಗ ಮೋದಿ ಎದುರು ಪ್ರತಿಪಕ್ಷಗಳ ಪ್ರಧಾನಿ ಅಭ್ಯರ್ಥಿ ಯಾರೆಂದು ಘೋಷಣೆಯಾಗಿಲ್ಲ.2004ರಲ್ಲಿಯೂ ವಾಜಪೇಯಿ ಎದುರು ಪ್ರಧಾನಿ ಅಭ್ಯರ್ಥಿಯಾಗಿ ಯಾರೂ ಇರಲಿಲ್ಲ. ಆದರೆ ಫಲಿತಾಂಶ ಏನಾಯಿತೆಂಬುದು ನಮಗೆಲ್ಲ ತಿಳಿದಿದೆ. ನಂತರ ಪ್ರಧಾನಿಯಾದ ಮನಮೋಹನ್ ಸಿಂಗ್ ಅವರು ನಿರಂತರ 10 ವರ್ಷ ಆಡಳಿತ ನಡೆಸಿದರು. 2019ರಲ್ಲೂ ಹೀಗೆಯೇ ಆಗಲಿದೆ’ ಎಂದು ಯೆಚೂರಿ ಹೇಳಿದರು.

ADVERTISEMENT

ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಪ್ರತಿಪಕ್ಷಗಳ ಪ್ರಧಾನಿ ಅಭ್ಯರ್ಥಿಯಾಗಿ ಘೋಷಿಸಬೇಕು ಎಂಬ ಡಿಎಂಕೆ ಅಧ್ಯಕ್ಷ ಸ್ಟಾಲಿನ್ ಹೇಳಿಕೆ ಬಗ್ಗೆ ಕೇಳಲಾದ ಪ್ರಶ್ನೆಗೆ, ‘ಸ್ಟಾಲಿನ್ ಅವರ ಅಭಿಪ್ರಾಯ ಹೇಳಿದ್ದಾರೆ. ಚುನಾವಣೆಯ ನಂತರವೇ ಪ್ರತಿಪಕ್ಷಗಳು ಪ್ರಧಾನಿ ಅಭ್ಯರ್ಥಿ ಘೋಷಣೆ ಮಾಡಲಿವೆ’ ಎಂದು ಉತ್ತರಿಸಿರು.

ರಾಜ್ಯಗಳಲ್ಲಿ ಚುನಾವಣಾಪೂರ್ವ, ಕೇಂದ್ರದಲ್ಲಿ ಚುನಾವಣೊತ್ತರ ಮೈತ್ರಿ

ರಾಜ್ಯಗಳಲ್ಲಿ ಪ್ರತಿಪಕ್ಷಗಳು ಚುನಾವಣಾಪೂರ್ವ ಮೈತ್ರಿ ಮಾಡಿಕೊಂಡಿವೆ. ಆದರೆ, ಕೇಂದ್ರದಲ್ಲಿ ಚುನಾವಣೋತ್ತರ ಮೈತ್ರಿ ಮಾಡಿಕೊಳ್ಳಲಿವೆ ಎಂದು ಯೆಚೂರಿ ತಿಳಿಸಿದರು. ಸದ್ಯ ರಾಜ್ಯಗಳಲ್ಲಿ ಬಿಜೆಪಿ ವಿರೋಧಿ ಮತಗಳನ್ನು ಹೇಗೆ ಒಗ್ಗೂಡಿಸಬಹುದು ಎಂಬುದರತ್ತ ಪ್ರತಿಪಕ್ಷಗಳು ಚಿತ್ತನೆಟ್ಟಿವೆ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.