ADVERTISEMENT

ಮಂದಿರ–ಮಸೀದಿಗಳ ವಿವಾದ: ಮೋಹನ್ ಭಾಗವತ್ ಹೇಳಿಕೆಗೆ ಅಖಿಲ ಭಾರತೀಯ ಸಂತ ಸಮಿತಿ ಕಿಡಿ

ಪಿಟಿಐ
Published 24 ಡಿಸೆಂಬರ್ 2024, 10:16 IST
Last Updated 24 ಡಿಸೆಂಬರ್ 2024, 10:16 IST
<div class="paragraphs"><p>ಮೋಹನ್&nbsp;ಭಾಗವತ್</p></div>

ಮೋಹನ್ ಭಾಗವತ್

   

ನವದೆಹಲಿ: ದೇಶದಲ್ಲಿ ಹೊಸದಾಗಿ ಮಂದಿರ – ಮಸೀದಿಗಳ ವಿವಾದಗಳನ್ನು ಹುಟ್ಟುಹಾಕಲಾಗುತ್ತಿದೆ ಎಂಬ ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್‌) ಮುಖ್ಯಸ್ಥ ಮೋಹನ್‌ ಭಾಗವತ್‌ ಹೇಳಿಕೆ ಕುರಿತು ಅಖಿಲ ಭಾರತೀಯ ಸಂತ ಸಮಿತಿ ಆಕ್ರೋಶ ಹೊರಹಾಕಿದೆ.

‘ಕೆಲವು ವ್ಯಕ್ತಿಗಳು, ಅಯೋಧ್ಯೆಯ ರಾಮ ಮಂದಿರ ನಿರ್ಮಾಣದ ನಂತರ ಹೊಸದಾಗಿ ಮಂದಿರ – ಮಸೀದಿಗಳ ವಿವಾದಗಳನ್ನು ಕೆರಳಿಸುವ ಮೂಲಕ ಹಿಂದೂಗಳ ನಾಯಕರಾಗಬಹುದೆಂದು ಭಾವಿಸಿದ್ದಾರೆ. ಆದರೆ, ಅದು ಸ್ವೀಕಾರಾರ್ಹವಲ್ಲ’ ಎಂದೂ ಭಾಗವತ್‌ ಹರಿಹಾಯ್ದಿದ್ದರು.

ADVERTISEMENT

ಇದೀಗ ಅಖಿಲ ಭಾರತೀಯ ಸಂತ ಸಮಿತಿಯು ಮೋಹನ್‌ ಭಾಗವತ್‌ ಅವರ ಹೇಳಿಕೆಯನ್ನು ಕಟುವಾಗಿ ಟೀಕಿಸಿದೆ. ಜತೆಗೆ, ಮಂದಿರ ಮತ್ತು ಮಸೀದಿಗಳ ಕುರಿತಾದ ವಿಚಾರಗಳ ಬಗ್ಗೆ ಧಾರ್ಮಿಕ ಮುಖಂಡರು ನಿರ್ಧರಿಸುತ್ತಾರೆಯೇ ಹೊರತು ಆರ್‌ಎಸ್‌ಎಸ್ ಅಲ್ಲ. ಆರ್‌ಎಸ್‌ಎಸ್ ಒಂದು ‘ಸಾಂಸ್ಕೃತಿಕ ಸಂಸ್ಥೆ’ ಎಂಬುದನ್ನು ಎಲ್ಲರೂ ಅರ್ಥಮಾಡಿಕೊಳ್ಳಬೇಕು ಎಂದು ತಿಳಿಸಿದೆ.

‘ಧರ್ಮದ ವಿಷಯ ಉದ್ಭವಿಸಿದಾಗ ಅದನ್ನು ಧಾರ್ಮಿಕ ಗುರುಗಳು ನಿರ್ಧರಿಸುತ್ತಾರೆ. ಅಂತಹ ನಿರ್ಧಾರಗಳನ್ನು ಆರ್‌ಎಸ್‌ಎಸ್‌ ಮತ್ತು ವಿಶ್ವ ಹಿಂದೂ ಪರಿಷತ್ ಅನುಸರಿಸುತ್ತದೆ’ ಎಂದು ಎಕೆಎಸ್‌ಎಸ್ ಪ್ರಧಾನ ಕಾರ್ಯದರ್ಶಿ ಸ್ವಾಮಿ ಜಿತೇಂದ್ರಾನಂದ ಸರಸ್ವತಿ ಹೇಳಿದ್ದಾರೆ.

ಉತ್ತರಾಖಂಡದ ಜ್ಯೋತಿರ್ಮಠ ಪೀಠದ ಸ್ವಾಮಿ ಅವಿಮುಕ್ತೇಶ್ವರಾನಂದ ಸರಸ್ವತಿ ಅವರು ದೇವಾಲಯಗಳ ಜೀರ್ಣೋದ್ಧಾರದ ಬಗ್ಗೆ ಭಾಗವತ್ ಅವರು ರಾಜಕೀಯವಾಗಿ ಅನುಕೂಲಕರ ನಿಲುವುಗಳನ್ನು ತೆಗೆದುಕೊಳ್ಳುತ್ತಾರೆ ಎಂದು ಟೀಕಿಸಿದ್ದಾರೆ.

ಈ ಹಿಂದೆ ಆಕ್ರಮಣಕಾರರಿಂದ ನಾಶಪಡಿಸಲಾದ ದೇವಾಲಯಗಳ ಪಟ್ಟಿಯನ್ನು ಸಿದ್ಧಪಡಿಸಬೇಕು. ಪುರಾತತ್ವ ಇಲಾಖೆ ವತಿಯಿಂದ ಸಮೀಕ್ಷೆ ನಡೆಸಬೇಕು ಎಂದು ಅವಿಮುಕ್ತೇಶ್ವರಾನಂದ ಆಗ್ರಹಿಸಿದ್ದಾರೆ.

‘ರಾಜಕೀಯ ನಾಯಕರಿಗೆ ಅಧಿಕಾರ ಬೇಕು ಎಂದಾಗ ದೇವಸ್ಥಾನಗಳ ಬಗ್ಗೆ ಮಾತನಾಡುತ್ತಿದ್ದರು. ಈಗ ಅಧಿಕಾರವಿದೆ ಆದರೆ, ದೇವಸ್ಥಾನಗಳ ಕುರಿತು ಸಮೀಕ್ಷೆ ನಡೆಸಬಾರದು ಎಂದು ಸಲಹೆ ನೀಡುತ್ತಿದ್ದಾರೆ’ ಎಂದು ಅವಿಮುಕ್ತೇಶ್ವರಾನಂದ ಕಿಡಿಕಾರಿದ್ದಾರೆ.

‘ಈ ಹಿಂದೆ ಹಿಂದೂಗಳ ಮೇಲೆ ಸಾಕಷ್ಟು ದೌರ್ಜನ್ಯಗಳು ನಡೆದಿವೆ. ಹಿಂದೂಗಳ ಧಾರ್ಮಿಕ ಸ್ಥಳಗಳನ್ನು ನಾಶಪಡಿಸಲಾಗಿದೆ. ಆದರೆ, ಈಗ ಹಿಂದೂ ಸಮಾಜವು ತನ್ನ ದೇವಾಲಯಗಳನ್ನು ಪುನಃಸ್ಥಾಪಿಸಲು ಮತ್ತು ಸಂರಕ್ಷಿಸಲು ಬಯಸಿದರೆ ಅದರಲ್ಲಿ ತಪ್ಪೇನಿದೆ’ ಎಂದು ಅವಿಮುಕ್ತೇಶ್ವರಾನಂದ ಪ್ರಶ್ನಿಸಿದ್ದಾರೆ.

ಮೋಹನ್‌ ಭಾಗವತ್‌ ಹೇಳಿದ್ದೇನು?

ಈಚೆಗೆ ಪುಣೆಯಲ್ಲಿ ನಡೆದ ಸಹಜೀವನ ವ್ಯಾಖ್ಯಾನಮಾಲಾದಲ್ಲಿ (ಉಪನ್ಯಾಸ ಮಾಲಿಕೆ) ಮಾತನಾಡದ್ದ ಭಾಗವತ್‌, ‘ಭಾರತ – ವಿಶ್ವಗುರು’ ವಿಷಯದ ಬಗ್ಗೆ ಉಪನ್ಯಾಸ ನೀಡಿದ ಅವರು, ಎಲ್ಲರನ್ನೂ ಒಳಗೊಳ್ಳುವ ಸಮಾಜದ ಅಗತ್ಯವಿದೆ. ದೇಶವು ಸಾಮರಸ್ಯದಿಂದ ಬದುಕಬಹುದು ಎಂಬುದನ್ನು ಜಗತ್ತಿಗೆ ತೋರಿಸಬೇಕಾಗಿದೆ ಎಂದಿದ್ದರು.

ಭಾರತೀಯ ಸಮಾಜದ ಬಹುತ್ವವನ್ನು ಎತ್ತಿ ತೋರಿಸಿದ ಅವರು, ‘ರಾಮಕೃಷ್ಣ ಮಿಷನ್‌ನಲ್ಲಿ ಕ್ರಿಸ್‌ಮಸ್ ಆಚರಿಸಲಾಗುತ್ತದೆ. ನಾವು ಹಿಂದೂಗಳಾಗಿರುವುದರಿಂದ ಮಾತ್ರ ಇದನ್ನೆಲ್ಲವನ್ನು ಮಾಡುತ್ತಿದ್ದೇವೆ’ ಎಂದು ಹೇಳಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.