ADVERTISEMENT

ಇಂಡಿಗೊ ವಿಮಾನದಲ್ಲಿ ಎ.ಸಿ ಅವ್ಯವಸ್ಥೆ: ಮೋಹನ್‌ದಾಸ್‌ ಪೈ ಟೀಕೆ

ಪಿಟಿಐ
Published 30 ಡಿಸೆಂಬರ್ 2024, 23:30 IST
Last Updated 30 ಡಿಸೆಂಬರ್ 2024, 23:30 IST
ಮೋಹನ್‌ದಾಸ್‌ ಪೈ
ಮೋಹನ್‌ದಾಸ್‌ ಪೈ   

ಬೆಂಗಳೂರು: ‘ಇಂಡಿಗೊ ಏರ್‌ಲೈನ್ಸ್‌ನ ವಿಮಾನದಲ್ಲಿ ಇತ್ತೀಚೆಗೆ ಪ್ರಯಾಣ ಮಾಡುವಾಗ ಅಸಮರ್ಪಕ ಹವಾನಿಯಂತ್ರಣ ವ್ಯವಸ್ಥೆ (ಎಸಿ) ಇತ್ತು’ ಎಂದು ಇನ್ಫೊಸಿಸ್ ಮಾಜಿ ಸಿಎಫ್‌ಒ ಟಿ.ವಿ. ಮೋಹನ್‌ದಾಸ್ ಪೈ ಟೀಕಿಸಿದ್ದಾರೆ.

ಬೆಂಗಳೂರಿನಿಂದ ಪ್ರಯಾಣಿಸಿದ 6ಇ 7407 ವಿಮಾನದಲ್ಲಿ ಎಸಿ ವ್ಯವಸ್ಥೆ ಸರಿ ಇಲ್ಲದೆ ತಮಗಾದ ಕಹಿ ಅನುಭವವನ್ನು ಅವರು ಸಾಮಾಜಿಕ ಜಾಲತಾಣ ‘ಎಕ್ಸ್‌’ನಲ್ಲಿ ಹಂಚಿಕೊಂಡಿದ್ದಾರೆ.

‘ಇಂಡಿಗೊ ತನ್ನ ಪ್ರಯಾಣಿಕರನ್ನು ಕೆಟ್ಟದಾಗಿ ನಡೆಸಿಕೊಳ್ಳುತ್ತದೆ. 6ಇ 7407 ವಿಮಾನವು ಟಾರ್ಮ್ಯಾಕ್‌ನಲ್ಲಿ (ವಿಮಾನ ನಿಲ್ಲುವ ಜಾಗ) ಇದ್ದಷ್ಟು ಹೊತ್ತು ಎಸಿ ಇರಲಿಲ್ಲ. ಪ್ರಯಾಣಿಕರು ಪ್ರತಿಭಟನೆ ಮಾಡಿದ ನಂತರವೇ ಸಿಬ್ಬಂದಿ ಟಾರ್ಮ್ಯಾಕ್‌ನ ಜನರೇಟರ್‌ ಬಳಸಿ ಎಸಿ ಚಾಲನೆಗೊಳಿಸಿದರು’ ಎಂದು ಅವರು ಪೋಸ್ಟ್‌ ಮಾಡಿದ್ದಾರೆ.

ADVERTISEMENT

ಮೋಹನ್‌ದಾಸ್‌ ಅವರ ಪೋಸ್ಟ್‌ಗೆ ಪ್ರತಿಕ್ರಿಯಿಸಿರುವ ಇಂಡಿಗೊ ಏರ್‌ಲೈನ್ಸ್, ‘ಸರ್‌, ನಿಮ್ಮ ತಾಳ್ಮೆ ಮತ್ತು ಸಹಕಾರವನ್ನು ನಾವು ಮೆಚ್ಚುತ್ತೇವೆ. ನಿಮಗೆ ಆಗಿರುವ ಕಹಿ ಅನುಭವದ ಬಗ್ಗೆ ಪರಿಶೀಲಿಸಲಾಗುವುದು. ಈ ಸಮಸ್ಯೆಯ ಬಗ್ಗೆ ಸಂಬಂಧಿಸಿದ ತಂಡದ ಜತೆ ಚರ್ಚಿಸುವುದಾಗಿ ಭರವಸೆ ನೀಡುತ್ತೇವೆ. ಗ್ರಾಹಕರಿಗೆ ಒದಗಿಸುವ ಸೌಲಭ್ಯ ನಮಗೆ ಅತ್ಯಂತ ಮಹತ್ವದ್ದಾಗಿದೆ’ ಎಂದು ಹೇಳಿದೆ. 

‘ಫ್ರಾಂಕೋ-ಇಟಲಿಯನ್ ಮಾದರಿಯ ಎಟಿಆರ್ ವಿಮಾನ ಇದಾಗಿದೆ. ವಿಮಾನವು ಹಾರಾಟದಲ್ಲಿರುವಾಗ ಮಾತ್ರ ಹವಾನಿಯಂತ್ರಣ ವ್ಯವಸ್ಥೆಯು ಕಾರ್ಯನಿರ್ವಹಿಸುತ್ತದೆ. ವಿಮಾನವು ನೆಲದ ಮೇಲಿರುವಾಗ ಎಸಿ ಕಾರ್ಯನಿರ್ವಹಿಸುವುದಿಲ್ಲ’ ಎಂದು ಇಂಡಿಗೊ ಏರ್‌ಲೈನ್ಸ್‌ ಮೂಲಗಳು ತಿಳಿಸಿವೆ.  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.