ADVERTISEMENT

ಕೋವಿಡ್‌ಗೆ 'ಮಾಲ್ನುಪಿರವಿರ್‌' ಮಾತ್ರೆ: ದೇಶದ 5 ಫಾರ್ಮಾಗಳು ಜೊತೆಗೂಡಿ ಪ್ರಯೋಗ

ಪಿಟಿಐ
Published 29 ಜೂನ್ 2021, 15:43 IST
Last Updated 29 ಜೂನ್ 2021, 15:43 IST
ಮಾತ್ರೆಗಳು–ಸಾಂದರ್ಭಿಕ ಚಿತ್ರ
ಮಾತ್ರೆಗಳು–ಸಾಂದರ್ಭಿಕ ಚಿತ್ರ   

ನವದೆಹಲಿ: ತೀವ್ರವಲ್ಲದ ಮಟ್ಟದಲ್ಲಿರುವ ಕೋವಿಡ್‌–19 ರೋಗಿಗಳ ಚಿಕಿತ್ಸೆಗಾಗಿ 'ಮಾಲ್ನುಪಿರವಿರ್‌' ಮಾತ್ರೆಗಳ ಬಳಕೆಗಾಗಿ ಕ್ಲಿನಿಕಲ್‌ ಪ್ರಯೋಗ ನಡೆಸಲು ದೇಶದ ಮುಂಚೂಣಿಯ ಫಾರ್ಮಾ ಕಂಪನಿಗಳು ಮುಂದೆ ಬಂದಿವೆ.

ಡಾ.ರೆಡ್ಡೀಸ್‌ ಲ್ಯಾಬೊರೇಟರೀಸ್‌, ಸಿಪ್ಲಾ, ಎಮ್ಯೂರ್‌ ಫಾರ್ಮಾಸ್ಯೂಟಿಕಲ್ಸ್‌, ಸನ್‌ ಫಾರ್ಮಾ ಇಂಡಸ್ಟ್ರೀಸ್‌ ಹಾಗೂ ಟಾರೆಂಟ್‌ ಫಾರ್ಮಾಸ್ಯೂಟಿಕಲ್ಸ್‌ ಜೊತೆಯಾಗಿ ದೇಶದಲ್ಲಿ ಮಾಲ್ನುಪಿರವಿರ್‌ ವೈರಸ್‌ ನಿರೋಧಕ ಮಾತ್ರೆಗಳ ಕ್ಲಿನಿಕಲ್‌ ಪ್ರಯೋಗ ನಡೆಸಲು ನಿರ್ಧರಿಸಿವೆ. ಐದೂ ಕಂಪನಿಗಳ ಸಹಯೋಗದಲ್ಲಿ ಕ್ಲಿನಿಕಲ್‌ ಪ್ರಯೋಗಗಳ ಮೇಲ್ವಿಚಾರಣೆ, ನಿರ್ವಹಣೆ ನಡೆಯುವುದಾಗಿ ಸಿಪ್ಲಾ ಮತ್ತು ಡಾ.ರೆಡ್ಡೀಸ್‌ ತಿಳಿಸಿವೆ.

ದೇಶದಲ್ಲಿ 1,200 ಕೋವಿಡ್‌–19 ರೋಗಿಗಳಿಗೆ ಮಾಲ್ನುಪಿರವಿರ್‌ ಮಾತ್ರೆಗಳನ್ನು ಚಿಕಿತ್ಸೆಗಾಗಿ ಬಳಸುವ ಮೂಲಕ ಕ್ಲಿನಿಕಲ್‌ ಪ್ರಯೋಗ ನಡೆಸಲು ನಿರ್ಧರಿಸಲಾಗಿದೆ. ಜೂನ್‌ನಿಂದ ಸೆಪ್ಟೆಂಬರ್‌ ನಡುವೆ ತೀವ್ರವಲ್ಲದ ಮಟ್ಟದ ಕೊರೊನಾ ವೈರಸ್‌ ಸೋಂಕಿತರಿಗೆ ಹೊರರೋಗಿಗಳಾಗಿ ಚಿಕಿತ್ಸೆ ನೀಡಲಾಗುತ್ತದೆ.

ADVERTISEMENT

ಇದೇ ಮೊದಲ ಬಾರಿಗೆ ದೇಶದಲ್ಲಿ ಫಾರ್ಮಾ ಕಂಪನಿಗಳು ಒಂದಾಗಿ ಇಂಥದ್ದೊಂದು ಪ್ರಯೋಗಕ್ಕೆ ಮುಂದಾಗಿವೆ. ಕೋವಿಡ್‌–19 ವಿರುದ್ಧದ ಸಾಮೂಹಿಕ ಹೋರಾಟದಲ್ಲಿ ಚಿಕಿತ್ಸೆಗಾಗಿ ಮತ್ತೊಂದು ಮಾರ್ಗವನ್ನು ಕಂಡುಕೊಳ್ಳುವ ಗುರಿ ಹೊಂದಿರುವುದಾಗಿ ಕಂಪನಿಗಳು ತಿಳಿಸಿವೆ. ಪ್ರಯೋಗ ಯಶಸ್ವಿಯಾದ ಬಳಿಕ ಕಂಪನಿಗಳು ಕೋವಿಡ್‌–19 ಚಿಕಿತ್ಸೆಗಾಗಿ ಪ್ರತ್ಯೇಕವಾಗಿ ಮಾಲ್ನುಪಿರವಿರ್‌ ಮಾತ್ರೆಗಳ ತಯಾರಿ ಮತ್ತು ಪೂರೈಕೆ ನಡೆಸಲು ಅನುಮತಿ ಕೋರಲಿವೆ.

ಅಮೆರಿಕದ ಪ್ರಮುಖ ಔಷಧ ಕಂಪನಿ ಮೆರ್ಕ್‌ ಮತ್ತು ರಿಡ್ಜ್‌ಬ್ಯಾಕ್ ಬಯೋಥೆರಪಿಟಿಕ್ಸ್ ಜತೆಯಾಗಿ ಜಾಗತಿಕ ಮಟ್ಟದಲ್ಲಿ ಮೂರನೇ ಹಂತದ ಕ್ಲಿನಿಕಲ್‌ ಪ್ರಯೋಗ ನಡೆಸುತ್ತಿವೆ. ಮಾಲ್ನುಪಿರವಿರ್‌ ಮಾತ್ರೆಗಳು ಪ್ರಬಲವಾದ ಶೀತಜ್ವರ ನಿರೋಧಕ ಚಟುವಟಿಕೆಯನ್ನು(ಆಂಟಿ ಇನ್ಫ್ಲ್ಯೂಯೆಂಜಾ)ಹೊಂದಿದೆ ಹಾಗೂ ಸಾರ್ಸ್‌–ಕೋವ್‌–2 ವೈರಸ್‌ ಮರುಕಳಿಸುವುದನ್ನು ಪ್ರಬಲವಾಗಿ ಪ್ರತಿಬಂಧಿಸುವ ಗುಣವನ್ನೂ ಹೊಂದಿದೆ ಎನ್ನಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.