ನವದೆಹಲಿ: ತಮ್ಮ ವಿರುದ್ಧದ ಹಣ ಅಕ್ರಮ ವರ್ಗಾವಣೆ ಪ್ರಕರಣವನ್ನು ರದ್ದು ಮಾಡುವಂತೆ ಕೋರಿ ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡಿಸ್ ಸಲ್ಲಿಸಿದ್ದ ಅರ್ಜಿಯನ್ನು ದೆಹಲಿ ಹೈಕೋರ್ಟ್ ಗುರುವಾರ ವಜಾ ಮಾಡಿದೆ. ಸುಕೇಶ್ ಚಂದ್ರಶೇಖರ್ ಆರೋಪಿಯಾಗಿರುವ ₹200 ಕೋಟಿ ಹಣದ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಈ ನಟಿಯ ಹೆಸರು ಕೂಡಾ ಇದೆ.
ದೆಹಲಿ ವಿಚಾರಣಾ ನ್ಯಾಯಾಲಯದಲ್ಲಿ ಬಾಕಿ ಇರುವ ಪ್ರಕರಣ ಮತ್ತು ವಿಚಾರಣೆಗೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯದ ಎರಡನೇ ಪೂರಕ ಆರೋಪಪಟ್ಟಿಯನ್ನು ರದ್ದುಗೊಳಿಸಲು ಕೂಡ ನಟಿ ಅರ್ಜಿಯಲ್ಲಿ ಕೋರಿದ್ದರು.
ಅರ್ಜಿಯನ್ನು ವಿರೋಧಿಸಿದ ಜಾರಿ ನಿರ್ದೇಶನಾಲಯದ (ಇ.ಡಿ) ಪರ ವಕೀಲ, ‘ತನಿಖಾ ಸಂಸ್ಥೆಯು ಸಲ್ಲಿಸಿದ್ದ ಆರೋಪಪಟ್ಟಿಯನ್ನು ವಿಶೇಷ ನ್ಯಾಯಾಲಯವು ವಿಚಾರಣೆಗೆ ಅಂಗೀಕರಿಸಿದೆ. ಈ ಪ್ರಕರಣದಲ್ಲಿ ಆರೋಪಿಗಳ ವಿರುದ್ಧದ ಆರೋಪಗಳಲ್ಲಿ ಮೇಲ್ನೋಟಕ್ಕೆ ಸತ್ಯವಿರುವಂತೆ ಕಂಡುಬಂದಿರುವುದಾಗಿ ನ್ಯಾಯಾಲಯ ಅಭಿಪ್ರಾಯಪಟ್ಟಿದೆ’ ಎಂದು ಹೇಳಿದರು.
ಚಂದ್ರಶೇಖರ್ ವಿರುದ್ಧ ದಾಖಲಾಗಿರುವ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ನಟಿ ಜಾಕ್ವೆಲಿನ್ ಕೂಡಾ ಆರೋಪಿಯಾಗಿದ್ದು, ಇ.ಡಿ ವಿಚಾರಣೆ ಎದುರಿಸಿದ್ದರು. ರಾನ್‌ಬಾಕ್ಸಿಯ ಮಾಜಿ ಪ್ರವರ್ತಕರಾದ ಶಿವಿಂದರ್ ಸಿಂಗ್ ಮತ್ತು ಮಲ್ವಿಂದರ್ ಸಿಂಗ್ ಅವರ ಪತ್ನಿಯರಿಗೆ ₹ 200 ಕೋಟಿ ವಂಚನೆ ಮಾಡಿದ ಆರೋಪದ ಮೇಲೆ ದೆಹಲಿ ಪೊಲೀಸರು ಚಂದ್ರಶೇಖರ್ ವಿರುದ್ಧ ಪ್ರಕರಣ ದಾಖಲಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.