ನವದೆಹಲಿ: ಬಂಗಳಾ ಕೊಲ್ಲಿ, ನಿಕೋಬಾರ್ ದ್ವೀಪಗಳ ದಕ್ಷಿಣ ಭಾಗ ಹಾಗೂ ಅಂಡಮಾನ್ ದ್ವೀಪಗಳ ಉತ್ತರ ಭಾಗದಲ್ಲಿ ನೈರುತ್ಯ ಮುಂಗಾರು ಮಂಗಳವಾರ ಚುರುಕಾಗಿದೆ. ಇದರ ಪರಿಣಾಮ, ನಿಕೋಬಾರ್ ದ್ವೀಪಗಳಲ್ಲಿ ಕಳೆದ ಎರಡು ದಿನಗಳಲ್ಲಿ ಸಾಧಾರಣದಿಂದ ಭಾರಿ ಮಳೆ ಬಿದ್ದಿದೆ ಎಂದು ಭಾರತೀಯ ಹವಾಮಾನ ಇಲಾಖೆ(ಐಎಂಡಿ) ತಿಳಿಸಿದೆ.
ನೈರುತ್ಯ ಮುಂಗಾರು ತೀವ್ರಗೊಳ್ಳಲು ಅನುಕೂಲಕರವಾದ ಪರಿಸ್ಥಿತಿ ಸೃಷ್ಟಿಯಾಗಿದೆ. ವಾಡಿಕೆಯ ಜೂನ್ 1ರ ಬದಲಾಗಿ ಮೇ 27ರಂದೇ ನೈರುತ್ಯ ಮುಂಗಾರು ಕೇರಳ ಕರಾವಳಿ ಪ್ರವೇಶಿಸುವ ಸಾಧ್ಯತೆ ಹೆಚ್ಚಾಗಿದೆ ಎಂದು ಇಲಾಖೆ ಹೇಳಿದೆ.
ಬಂಗಾಳ ಕೊಲ್ಲಿ, ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ ಮೇಲೆ ಬೀಸುತ್ತಿರುವ ಪಶ್ಷಿಮಾಭಿಮುಖಿ ಮಾರುತಗಳು ಬಲ ಪಡೆದುಕೊಂಡಿವೆ. ಸಮುದ್ರ ಮಟ್ಟದಿಂದ 1.5 ಕಿ.ಮೀ ಎತ್ತರದಲ್ಲಿ ಗಂಟೆಗೆ 20 ನಾಟ್ಸ್ ವೇಗದಿಂದ ಬೀಸುತ್ತಿರುವ ಗಾಳಿ, ಕೆಲ ಪ್ರದೇಶಗಳಲ್ಲಿ 4.5 ಕಿ.ಮೀ ದಷ್ಟು ಎತ್ತರದಲ್ಲಿ ಬೀಸುತ್ತಿರುವುದು ಕಂಡುಬಂದಿದೆ.
ಈ ಪ್ರದೇಶದಲ್ಲಿ ಒಎಲ್‌ಆರ್ ಸೂಚ್ಯಂಕದಲ್ಲಿ ಇಳಿಕೆ ಕಂಡು ಬಂದಿದೆ. ಒಎಲ್‌ಆರ್, ಮೋಡಗಳು ರೂಪುಗೊಳ್ಳುವುದನ್ನು ಸೂಚಿಸುತ್ತದೆ. ಈ ಸೂಚ್ಯಂಕದಲ್ಲಿನ ಇಳಿಕೆಯು ಮುಂಗಾರು ಆರಂಭಕ್ಕೆ ಅನುಕೂಲಕರ ಸನ್ನಿವೇಶ ನಿರ್ಮಾಣವಾಗಿರುವುದನ್ನು ಹೇಳುತ್ತದೆ ಎಂದು ಇಲಾಖೆ ತಿಳಿಸಿದೆ.
ಈ ಎಲ್ಲ ವಿದ್ಯಮಾನಗಳ ಫಲವಾಗಿ, ಅರಬ್ಬಿ ಸಮುದ್ರದ ದಕ್ಷಿಣ ಭಾಗ, ಮಾಲ್ದೀವ್ಸ್ ಹಾಗೂ ಕೊಮೊರಿನ್ ಪ್ರದೇಶದತ್ತ ಮುಂಗಾರು ಮಾರುತಗಳು ಬೀಸುವುದಕ್ಕೆ ಅನುಕೂಲಕರ ಪರಿಸ್ಥಿತಿ ನಿರ್ಮಾಣವಾಗಿದೆ. ಬಂಗಾಳ ಕೊಲ್ಲಿ, ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು, ಅಂಡಮಾನ್ ಸಾಗರದ ಉಳಿದ ಭಾಗದಲ್ಲಿ ಮುಂದಿನ 3–4 ದಿನಗಳಲ್ಲಿ ಮುಂಗಾರು ಮತ್ತಷ್ಟು ಚುರುಕಾಗಲಿದೆ ಎಂದಿದೆ.
ವಾಡಿಕೆಗಿಂತ ಮೊದಲೇ ಸಿಂಚನ
ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ಪ್ರಕಾರ ಈ ಬಾರಿ ಮೇ 27ರಂದೇ ನೈರುತ್ಯ ಮುಂಗಾರು ಕೇರಳ ಪ್ರವೇಶಿಸುವ ಸಾಧ್ಯತೆ ಇದೆ. ಈ ಮುನ್ಸೂಚನೆಯಂತೆಯೇ ಸಂಭವಿಸಿದಲ್ಲಿ 2009ರ ನಂತರ ದೇಶದ ಪ್ರಮುಖ ಭೂಭಾಗದಲ್ಲಿ ವಾಡಿಕೆಗಿಂತ ಮೊದಲೇ ಮುಂಗಾರು ಪ್ರವೇಶವಾದಂತಾಗಲಿದೆ. 2009ರಲ್ಲಿ ಮೇ 23ರಂದೇ ಮುಂಗಾರು ಕೇರಳ ಕರಾವಳಿ ಪ್ರವೇಶಿಸಿತ್ತು ಎಂದು ಇಲಾಖೆ ದತ್ತಾಂಶ ಹೇಳುತ್ತವೆ. ವಾಡಿಕೆಯಂತೆ ಜೂನ್ 1ರಂದು ನೈರುತ್ಯ ಮುಂಗಾರು ಕೇರಳ ಪ್ರವೇಶಿಸಿ ಜುಲೈ 8ರ ವೇಳೆಗೆ ದೇಶದಾದ್ಯಂತ ವ್ಯಾಪಿಸುತ್ತದೆ. ಸೆಪ್ಟೆಂಬರ್ 17ರ ವೇಳೆಗೆ ದೇಶದ ವಾಯವ್ಯ ಭಾಗದಿಂದ ಮುಂಗಾರು ಕ್ಷೀಣಿಸಲು ಆರಂಭವಾಗಿ ಅಕ್ಟೋಬರ್ 15ರ ವೇಳೆಗೆ ಕೊನೆಗೊಳ್ಳುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.