ADVERTISEMENT

ಮೊರ್ಬಿ ಸೇತುವೆ ನವೀಕರಣಕ್ಕೆ 2 ಕೋಟಿ ಪಡೆದು ಕೇವಲ 12 ಲಕ್ಷ ಖರ್ಚು ಮಾಡಿದ್ದ ಕಂಪನಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 5 ನವೆಂಬರ್ 2022, 11:25 IST
Last Updated 5 ನವೆಂಬರ್ 2022, 11:25 IST
   

ಮೊರ್ಬಿ: 135 ಮಂದಿಯ ಸಾವಿಗೆ ಕಾರಣವಾದ ಗುಜರಾತ್‌ನ ಮೊರ್ಬಿ ಸೇತುವೆ ದುರಂತಕ್ಕೆ, ನವೀಕರಣಕ್ಕೆ ಗುತ್ತಿಗೆ ಪಡೆದಿದ್ದ ಒರೆವಾ ಕಂಪನಿಯ ಭ್ರಷ್ಟಾಚಾರವೇ ಕಾರಣ ಎಂದು ಪ್ರಾಥಮಿಕ ತನಿಖೆಯಿಂದ ಗೊತ್ತಾಗಿದೆ.

ಸೇತುವೆಯ ಪುನಶ್ಚೇತನಕ್ಕೆಂದು ನೀಡಲಾಗಿದ್ದ ಎರಡು ಕೋಟಿ ರೂಪಾಯಿಯಲ್ಲಿ ಕೇವಲ 12 ಲಕ್ಷ ರೂಪಾಯಿ ಮಾತ್ರ ಖರ್ಚು ಮಾಡಿ, ಸೇತುವೆ ಸಿದ್ದವಾಗಿದೆ ಎಂದು ಕಂಪನಿಯು ಸೇತುವೆಯನ್ನು ಸಾರ್ವಜನಿಕರ ಬಳಕೆಗೆ ಮುಕ್ತ ಮಾಡಿತ್ತು.

143 ವರ್ಷ ಪುರಾತನ ಸೇತುವೆಯ ದುರಸ್ತಿಗೆಂದು ಪಡೆದುಕೊಂಡಿದ್ದ ಹಣದಲ್ಲಿ ಶೇ 6 ರಷ್ಟು ಮಾತ್ರ ಖರ್ಚು ಮಾಡಿ ಕಳಪೆ ಕಾಮಗಾರಿ ಮಾಡಿತ್ತು. ಕಂಪನಿಯ ಬೇಜವಾಬ್ದಾರಿಗೆ 135 ಮಂದಿ ಬಲಿಯಾಗಿದ್ದರು.

ADVERTISEMENT

ಸೇತುವೆಯ ಪುನಶ್ಚೇತನ ಹಾಗೂ 15 ವರ್ಷಗಳ ನಿರ್ವಹಣೆಗೆ ಒರೆವಾ ಗ್ರೂಪ್‌ ಮೊರ್ಬಿ ನಗರ ಪಾಲಿಕೆ ಜತೆಗೆ ಕಳೆದ ಮಾರ್ಚ್‌ನಲ್ಲಿ ಒಪ್ಪಂದ ಮಾಡಿಕೊಂಡಿತ್ತು. ಸೇತುವೆಯನ್ನು ಪುನಶ್ಚೇತನಗೊಳಿಸಿದ್ದ ಕಂಪನಿಯು ಸುರಕ್ಷತಾ ಪರೀಕ್ಷೆ ನಡೆಸದೇ ಸಾರ್ವಜನಿಕರ ಬಳಕೆಗೆ ಮುಕ್ತ ಮಾಡಿತ್ತು.

ಸೇತುವೆ ಪುನಶ್ಚೇತನದ ಗುತ್ತಿಗೆ ಪಡೆದಿದ್ದ ಒರೆವಾ ಗ್ರೂಪ್‌, ಕಾಮಗಾರಿ ನಡೆಸಲು ಇನ್ನೊಂದು ಕಂಪನಿಗೆ ಹೊರಗುತ್ತಿಗೆ ನೀಡಿತ್ತು. ಶತಮಾನಗಳಷ್ಟು ಹಳೆಯದಾದ ಸೇತುವೆಯನ್ನು ಗಟ್ಟಿಗೊಳಿಸಲು ಬೇಕಾದಷ್ಟು ಕೆಲಸಗಳನ್ನು ಆ ಕಂಪನಿಯು ಮಾಡಿಲ್ಲ ಎಂದು ಪ್ರಾಥಮಿಕ ತನಿಖೆಯಿಂದ ಗೊತ್ತಾಗಿದೆ.

ಗಡಿಯಾರ ತಯಾರಿಸುವುದರಲ್ಲಿ ಅನುಭವ ಇರುವ ಒರೆವಾ ಗ್ರೂಪ್‌ಗೆ ಇಂತಹ ಕಾಮಗಾರಿ ಮಾಡುವುದರಲ್ಲಿ ಯಾವುದೇ ಅನುಭವ ಇರಲಿಲ್ಲ. ಹೀಗಾಗಿ ದೇವ್‌ ಪ್ರಕಾಶ್‌ಸೊಲ್ಯೂಷನ್‌ ಎನ್ನುವ ಧಾರಗಾದ್ರ ಮೂಲಕ ಕಂಪನಿಗೆ ಹೊರ ಗುತ್ತಿಗೆ ನೀಡಿತ್ತು. ಆದರೆ ಹೊರ ಗುತ್ತಿಗೆ ಪಡೆದುಕೊಂಡ ಕಂಪನಿಗೂ ಈ ಸೇತುವೆ ದುರಸ್ತಿ ಬಗ್ಗೆ ತಾಂತ್ರಿಕ ಮಾಹಿತಿ ಇರಲಿಲ್ಲ ಎನ್ನುವುದು ಈವರೆಗೆ ಆಗಿರುವ ತನಿಖೆಯಿಂದ ಗೊತ್ತಾದ ಮಾಹಿತಿ.

ಪ್ರಕರಣ ಸಂಬಂಧ ಹೆಚ್ಚಿನ ತನಿಖೆ ಜಾರಿಯಲ್ಲಿದ್ದು, ತನಿಖಾ ಸಂಸ್ಥೆಗಳು ದೇವ್‌ ಪ್ರಕಾಶ್‌ ಸೊಲ್ಯೂಷನ್‌ ಕಂಪನಿಯಿಂದ ಕಾಮಗಾರಿಗೆ ಸಂಬಂಧಿಸಿದ ಹಣಕಾಸು ದಾಖಲೆಗಳನ್ನು ಜಪ್ತಿ ಮಾಡಿವೆ.

ಮೊರ್ಬಿ ತೂಗುಸೇತುವೆಯ ಕೇಬಲ್‌ಗಳು ತುಕ್ಕು ಹಿಡಿದಿದ್ದರೂ ಅವುಗಳನ್ನು ಬದಲಾಯಿಸದೇ, ಅವುಗಳಿಗೆ ಬಣ್ಣ ಬಳಿಯಲಾಗಿತ್ತು. ಸೇತುವೆಯನ್ನು ಗಟ್ಟಿ ಮಾಡದೇ ಮೇಲ್ನೋಟಕ್ಕೆ ಮಾತ್ರ ಸುಂದರಗೊಳಿಸಲಾಗಿತ್ತು ಎಂದು ಮಾಹಿತಿ ಲಭಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.