ADVERTISEMENT

ಮನುಷ್ಯರು ಹಾಗೂ ಆನೆ ನಡುವಿನ ಸಂಘರ್ಷ: ವರ್ಷಕ್ಕೆ 100 ಆನೆಗಳ ಸಾವು

ಪಿಟಿಐ
Published 10 ಆಗಸ್ಟ್ 2020, 11:41 IST
Last Updated 10 ಆಗಸ್ಟ್ 2020, 11:41 IST
ಕೇರಳದ ಪಾಲಕ್ಕಾಡ್‌ ಜಿಲ್ಲೆಯಲ್ಲಿ ಕಳೆದ ಮೇ ತಿಂಗಳಲ್ಲಿ ಸ್ಫೋಟಕ ತುಂಬಿದ್ದ ಅನನಾಸ್‌ ಸೇವಿಸಿ ಗಾಯಗೊಂಡಿದ್ದ ಗರ್ಭಿಣಿ ಆನೆ ನದಿಯಲ್ಲೇ ನಿಂತು ಸಾವನ್ನಪ್ಪಿತ್ತು. (ಸಂಗ್ರಹ ಚಿತ್ರ)
ಕೇರಳದ ಪಾಲಕ್ಕಾಡ್‌ ಜಿಲ್ಲೆಯಲ್ಲಿ ಕಳೆದ ಮೇ ತಿಂಗಳಲ್ಲಿ ಸ್ಫೋಟಕ ತುಂಬಿದ್ದ ಅನನಾಸ್‌ ಸೇವಿಸಿ ಗಾಯಗೊಂಡಿದ್ದ ಗರ್ಭಿಣಿ ಆನೆ ನದಿಯಲ್ಲೇ ನಿಂತು ಸಾವನ್ನಪ್ಪಿತ್ತು. (ಸಂಗ್ರಹ ಚಿತ್ರ)   

ನವದೆಹಲಿ: ಮನುಷ್ಯರು ಮತ್ತು ಆನೆಗಳ ನಡುವೆ ನಡೆಯುವ ಸಂಘರ್ಷದಲ್ಲಿ ಪ್ರತಿ ವರ್ಷ 500ಕ್ಕೂ ಅಧಿಕ ಜನರು ಹಾಗೂ ನೂರಕ್ಕೂ ಅಧಿಕ ಆನೆಗಳು ಮೃತಪಟ್ಟಿವೆ ಎಂದು ಪರಿಸರ ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ.

ಆಗಸ್ಟ್‌ 12ರಂದು ಅಂತರರಾಷ್ಟ್ರೀಯ ಆನೆ ದಿನದ ಹಿನ್ನೆಲೆಯಲ್ಲಿ ಈ ಮಾಹಿತಿಯನ್ನು ಕಾರ್ಯಕ್ರಮವೊಂದರಲ್ಲಿ ಸಚಿವಾಲಯ ಬಿಡುಗಡೆಗೊಳಿಸಿದೆ. 2017ರಲ್ಲಿ ನಡೆದ ಸಮೀಕ್ಷೆಯಂತೆ ಭಾರತದಲ್ಲಿ 30 ಸಾವಿರ ಆನೆಗಳಿವೆ. ಮನುಷ್ಯರು ಮತ್ತು ಆನೆಗಳ ನಡುವೆ ನಡೆಯುತ್ತಿರುವ ಸಂಘರ್ಷದಿಂದ ಎರಡೂ ಕಡೆಗಳಲ್ಲಿ ಸಾವು ಸಂಭವಿಸಿದೆ ಎಂದು ಸಚಿವಾಲಯ ತಿಳಿಸಿದೆ.

ಈ ಕುರಿತು ಮಾತನಾಡಿದ ಕೇಂದ್ರ ಪರಿಸರ ಸಚಿವ ಪ್ರಕಾಶ್‌ ಜಾವಡೇಕರ್‌, ‘ಪರಿಸರ ವ್ಯವಸ್ಥೆಯನ್ನು ಸಮತೋಲನದಲ್ಲಿ ಇರಿಸುವ ಆನೆಗಳ ಸಂರಕ್ಷಣೆ ಅತ್ಯಾವಶ್ಯಕ. ಮನುಷ್ಯರ ಜೊತೆಗಿನ ಸಂಘರ್ಷಕ್ಕೆ ಕಡಿವಾಣ ಹಾಕಲು ಆನೆಗಳನ್ನು ಕಾಡಿನಲ್ಲೇ ಇರುವಂತೆ ನೋಡಿಕೊಳ್ಳಬೇಕಾಗಿದೆ. ಇದಕ್ಕಾಗಿ ಅಗತ್ಯ ಮೇವು ಹಾಗೂ ನೀರಿನ ಸಂಗ್ರಹಕ್ಕೆ ಬೇಕಾದ ಯೋಜನೆಗಳನ್ನು ಕೇಂದ್ರ ಸರ್ಕಾರ ಅನುಷ್ಠಾನಗೊಳಿಸುತ್ತಿದ್ದು, ಮುಂದಿನ ವರ್ಷದಿಂದಲೇ ಇದರ ಫಲಿತಾಂಶ ನಮ್ಮ ಮುಂದೆ ಇರಲಿದೆ’ ಎಂದರು.

ADVERTISEMENT

ಇದೇ ವೇಳೆ ಕಳೆದ ಮೇ 27ರಂದು ಕೇರಳದಲ್ಲಿ ನಡೆದ ಗರ್ಭಿಣಿ ಆನೆ ಹತ್ಯೆ ಪ್ರಕರಣವನ್ನು ಖಂಡಿಸಿದ ಕೇಂದ್ರ ಪರಿಸರ ಖಾತೆ ರಾಜ್ಯ ಸಚಿವ ಬಾಬುಲ್‌ ಸುಪ್ರಿಯೊ, ‘ನಾವೆಲ್ಲರೂ ಆನೆಗಳ ಸಂರಕ್ಷಿಸಬೇಕು. ಕೇರಳದಲ್ಲಿ ನಡೆದದ್ದು ಅಮಾನವೀಯ ಕೃತ್ಯ. ಅಂಥ ಕ್ರಿಮಿನಲ್‌ ಚಟುವಟಿಕೆಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತೇವೆ’ ಎಂದು ತಿಳಿಸಿದರು.

‘ಮನುಷ್ಯರ ಜೊತೆ ಸಂಘರ್ಷದ ಕಾರಣದಿಂದ ಪ್ರತಿ ವರ್ಷ ನೂರಕ್ಕೂ ಅಧಿಕ ಆನೆಗಳು ಸಾಯುತ್ತಿವೆ. ಕಳೆದ ಐದು ವರ್ಷದಲ್ಲಿ ಆನೆಗಳ ಸಂರಕ್ಷಣೆಗಾಗಿ ಹೆಚ್ಚಿನ ಕಾರಿಡಾರ್‌ಗಳನ್ನು ಗುರುತಿಸಲಾಗಿದೆ. ಆನೆಗಳ ಸಂರಕ್ಷಣೆಗೆ ಮೀಸಲಿಟ್ಟಿದ್ದ ಬಜೆಟ್‌ ಗಾತ್ರವನ್ನು ಶೇ 30 ಏರಿಕೆ ಮಾಡಲಾಗಿದೆ’ ಎಂದು ಅರಣ್ಯ ಸಚಿವಾಲಯದ ಹೆಚ್ಚುವರಿ ಪ್ರಧಾನ ನಿರ್ದೇಶಕ(ವನ್ಯಜೀವಿ ವಿಭಾಗ) ಸೌಮಿತ್ರ ದಾಸ್‌ಗುಪ್ತಾ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.