ADVERTISEMENT

‘ಪ್ರಿಯಾಂಕಾ ಕಾಂಗ್ರೆಸ್ ಅಧ್ಯಕ್ಷರಾದರೆ 2024ರಲ್ಲಿ ಬಿಜೆಪಿಗೆ ದೊಡ್ಡ ಸವಾಲು’

ಏಜೆನ್ಸೀಸ್
Published 25 ಆಗಸ್ಟ್ 2020, 9:50 IST
Last Updated 25 ಆಗಸ್ಟ್ 2020, 9:50 IST
ಪ್ರಿಯಾಂಕಾ ಗಾಂಧಿ ವಾದ್ರಾ
ಪ್ರಿಯಾಂಕಾ ಗಾಂಧಿ ವಾದ್ರಾ   
"ಮಾಜಿ ಪ್ರಧಾನಿ ಲಾಲ್‌ ಬಹದ್ದೂರ್ ಶಾಸ್ತ್ರಿ ಅವರ ಮಗ ಮತ್ತು ಕಾಂಗ್ರೆಸ್‌ ಪಕ್ಷದ ಹಿರಿಯ ನಾಯಕ ಅನಿಲ್‌ ಶಾಸ್ತ್ರಿ "

ಗೌತಮ್‌ ಬುದ್ಧ ನಗರ್ (ಉತ್ತರ ಪ್ರದೇಶ):ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಪಕ್ಷದ ಮುಖ್ಯಸ್ಥರಾದರೆ ಮುಂದಿನ ಲೋಕಸಭಾ ಚುನಾವಣೆ ವೇಳೆಗೆ ಬಿಜೆಪಿಗೆ ಕಠಿಣ ಸವಾಲು ಎದುರಾಗಲಿದೆ ಎಂದು ಮಾಜಿ ಪ್ರಧಾನಿ ಲಾಲ್‌ ಬಹದ್ದೂರ್ ಶಾಸ್ತ್ರಿ ಅವರ ಮಗ ಮತ್ತು ಕಾಂಗ್ರೆಸ್‌ ಪಕ್ಷದ ಹಿರಿಯ ನಾಯಕ ಅನಿಲ್‌ ಶಾಸ್ತ್ರಿ ಅವರು ಹೇಳಿದ್ದಾರೆ.

‘ಕಾಂಗ್ರೆಸ್ ಪಕ್ಷದ ನಾಯಕತ್ವದಲ್ಲಿ ಹಲವು ಕೊರತೆಗಳಿವೆ. ಪಕ್ಷದ ಮುಖಂಡರ ನಡುವೆ ಸಭೆಗಳು ನಡೆಯುವುದಿಲ್ಲ ಎಂಬುದು ಅದರಲ್ಲಿ ಅತ್ಯಂತ ಗಮನಾರ್ಹವಾದದ್ದು. ಬೇರೆ ರಾಜ್ಯದಿಂದ ಪಕ್ಷದ ಮುಖಂಡರೊಬ್ಬರು ದೆಹಲಿಗೆ ಬಂದರೆ, ಹಿರಿಯ ನಾಯಕರನ್ನು ಭೇಟಿಯಾಗುವುದು ಸುಲಭವಾಗಿಲ್ಲ’ ಎಂದು ಶಾಸ್ತ್ರಿ ತಿಳಿಸಿದ್ದಾರೆ.

‘ಒಂದುವೇಳೆ ಸೋನಿಯಾ ಗಾಂಧಿ, ರಾಹುಲ್‌ ಗಾಂಧಿ ಅವರಂತಹ ಹಿರಿಯ ನಾಯಕರು ಸಭೆಗಳನ್ನು ನಡೆಸಲು ಆರಂಭಿಸಿದರೆ, ನನ್ನ ಪ್ರಕಾರ ಶೇ. 50ರಷ್ಟು ಸಮಸ್ಯೆಗಳು ಬಗೆಹರಿಯಲಿವೆ’ ಎಂದು ಅಭಿಪ್ರಾಯಪಟ್ಟಿದ್ದಾರೆ.

ADVERTISEMENT

ವಿವಿಧ ರಾಜ್ಯಗಳ ಮಾಜಿ ಹಾಗೂ ಹಾಲಿ ಮುಖ್ಯಮಂತ್ರಿಗಳು ಸೇರಿದಂತೆ ಕಾಂಗ್ರೆಸ್‌ನ ಒಟ್ಟು 23 ನಾಯಕರು ಪಕ್ಷದ ನಾಯಕತ್ವ ಬದಲಾವಣೆ ಕುರಿತು ಮುಖ್ಯಸ್ಥೆ ಸೋನಿಯಾ ಗಾಂಧಿ ಅವರಿಗೆ ಪತ್ರ ಬರೆದಿದ್ದರು. ಅದಾದ ಬಳಿಕ ಈ ವಿಚಾರವಾಗಿ ಪಕ್ಷದೊಳಗೆ ದೊಡ್ಡ ಮಟ್ಟದ ಚರ್ಚೆ ಆರಂಭವಾಗಿದೆ. ಈ ಬಗ್ಗೆ ಮಾತನಾಡಿರುವ ಶಾಸ್ತ್ರಿ, ನೆಹರೂ–ಗಾಂಧಿ ಕುಟುಂಬದವರೇ ಪಕ್ಷದ ನೇತೃತ್ವ ವಹಿಸಬೇಕು ಎಂದು ಒತ್ತಾಯಿಸಿದ್ದಾರೆ.

‍‘ಒಂದು ವೇಳೆ ಗಾಂಧಿ ಕುಟುಂಬದವರೇ ಕಾಂಗ್ರೆಸ್‌ ನಾಯಕತ್ವವನ್ನು ವಹಿಸಿಕೊಳ್ಳದಿದ್ದರೆ, ಪಕ್ಷವು ಅಂತ್ಯ ಕಾಣಲಿದೆ. ಗಾಂಧಿ ಕುಟುಂಬದವರೇ ಮುಖ್ಯಸ್ಥರಾಗಿರಬೇಕು. ಸೋನಿಯಾ ಅವರೇ ಅಧ್ಯಕ್ಷರಾಗಿ ಮುಂದುವರಿಯುವುದಾದರೆ, ನಂತರ ರಾಹುಲ್‌ ಅಥವಾ ಪ್ರಿಯಾಂಕಾಅಧಿಕಾರ ಸ್ವೀಕರಿಸಬೇಕು. ಕಳೆದ ವರ್ಷ ರಾಹುಲ್‌ ಗಾಂಧಿ ಪಕ್ಷದ ನಾಯಕತ್ವವನ್ನು ತ್ಯಜಿಸಿದ್ದಾರೆ’

ಮಾಜಿ ಪ್ರಧಾನಿ ಲಾಲ್‌ ಬಹದ್ದೂರ್ ಶಾಸ್ತ್ರಿ ಅವರ ಮಗ ಮತ್ತು ಕಾಂಗ್ರೆಸ್‌ ಪಕ್ಷದ ಹಿರಿಯ ನಾಯಕ ಅನಿಲ್‌ ಶಾಸ್ತ್ರಿ

‘ಇಂತಹ ಸನ್ನಿವೇಶದಲ್ಲಿ, ಕಾಂಗ್ರೆಸ್‌ ಅಧ್ಯಕ್ಷ ಸ್ಥಾನಕ್ಕೆ ಪ್ರಿಯಾಂಕಾ ಗಾಂಧಿ ಅವರಿಗಿಂತ ಉತ್ತಮರು ಇಲ್ಲ ಎಂದು ನನಗನಿಸುತ್ತದೆ. ಪ್ರಿಯಾಂಕಾ ಅವರಿಗೆ ಅಷ್ಟು ಅರ್ಹತೆ ಇದೆ. ಅವರು ಪಕ್ಷದ ಮುಖ್ಯಸ್ಥರಾದರೆ, 2024 ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ದೊಡ್ಡ ಸವಾಲು ಎದುರಾಗಲಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.