ಕೊಳಲು ನುಡಿಸಿ ಪ್ರತಿಭಟನೆ ಮಾಡಿದ ಕಾಂಗ್ರೆಸ್ ಶಾಸಕರು
ಪಿಟಿಐ
ಭೋಪಾಲ್(ಮಧ್ಯಪ್ರದೇಶ): ಜನರ ಸಮಸ್ಯೆಗಳ ಬಗ್ಗೆ ಸರ್ಕಾರದ ಮೌನವನ್ನು ವಿರೋಧಿಸಿ ಮಂಗಳವಾರ ಕಾಂಗ್ರೆಸ್ ಶಾಸಕರು ವಿಧಾನಸಭಾ ಆವರಣದಲ್ಲಿ ಕೊಳಲು ನುಡಿಸಿ ವಿಭಿನ್ನವಾಗಿ ಪ್ರತಿಭಟನೆ ನಡೆಸಿದ್ದಾರೆ.
ಸದನದ ಕಲಾಪ ಆರಂಭವಾಗುವ ಮುನ್ನ ವಿರೋಧ ಪಕ್ಷದ ನಾಯಕ ಉಮಾಂಗ್ ಸಿಂಘರ್ ನೇತೃತ್ವದಲ್ಲಿ ಕಾಂಗ್ರೆಸ್ ಶಾಸಕರು ಪ್ರತಿಭಟನೆ ನಡೆಸಿದ್ದಾರೆ.
ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಸಿಂಘರ್, ‘ಕೋಣದ ಮುಂದೆ ಕಿನ್ನರಿ ನುಡಿಸಿದಂತೆ’ ಎಂಬ ಗಾದೆ ಮಾತಿನಿಂದ ಪ್ರೇರಿತವಾಗಿ ಈ ಪ್ರತಿಭಟನೆಯನ್ನು ನಡೆಸಲಾಗಿದೆ’ ಎಂದು ಹೇಳಿದ್ದಾರೆ.
‘ಜನರ ಸಮಸ್ಯೆಗಳ ಬಗ್ಗೆ ಆಡಳಿತರೂಢ ಬಿಜೆಪಿ ಸರ್ಕಾರದ ಮೌನದ ವಿರುದ್ಧ ಈ ಪ್ರತಿಭಟನೆ ನಡೆಸಲಾಯಿತು. ಬಿಜೆಪಿ ಸರ್ಕಾರವು ಕೋಣದ ಹಾಗೆ ಸಂವೇದನಾರಹಿತವಾಗಿದೆ. ಜನರ ಸಮಸ್ಯೆ ಕೇಳಲು ಮತ್ತು ಅರ್ಥ ಮಾಡಿಕೊಳ್ಳಲು ಸಿದ್ಧವಿಲ್ಲ’ ಎಂದು ತಿಳಿಸಿದ್ದಾರೆ.
‘ಹಣದುಬ್ಬರದಿಂದ ಜನರು ಬಸವಳಿದಿದ್ದಾರೆ. ಉದ್ಯೋಗವಿಲ್ಲದೇ ಯುವಕರು ಖಾಲಿ ಕುಳಿತಿದ್ದಾರೆ. ತಮ್ಮ ಹಕ್ಕುಗಳಿಗಾಗಿ ರೈತರು ಆಂದೋಲನ ನಡೆಸುತ್ತಿದ್ದಾರೆ. ಮೀಸಲಾತಿಗಾಗಿ ಒಬಿಸಿಗಳು ಹೋರಾಡುತ್ತಿದ್ದಾರೆ. ‘ಲಾಡ್ಲಿ ಬೆಹನ್’ ಯೋಜನೆಯಡಿ ಮಹಿಳೆಯರಿಗೆ ಮಾಸಿಕ ₹3 ಸಾವಿರ ಕೊಡುತ್ತೆವೆಂದು ಭರವಸೆ ನೀಡಿದ್ದ ಸರ್ಕಾರ ಅದನ್ನು ಈಡೇರಿಸಿಲ್ಲ. ಇದೆಲ್ಲದರ ಬಗ್ಗೆ ಸರ್ಕಾರ ಮೌನವಾಗಿದೆ’ ಎಂದು ಕಿಡಿಕಾರಿದ್ದಾರೆ.
‘ಮಲಗುತ್ತಿರುವ ಸರ್ಕಾರವನ್ನು ಎಬ್ಬಿಸಲು ‘ಮ್ಯೂಸಿಕ್’ ಪ್ರತಿಭಟನೆ ಮಾಡಲಾಯಿತು’ ಎಂದು ಶಾಸಕ ಸಚಿನ್ ಯಾದವ್ ಹೇಳಿದ್ದಾರೆ.
‘ಕೋಣದ ಹಾಗೆ ಸರ್ಕಾರ ಮಲಗಿದೆ. ಕೊಳಲು ನುಡಿಸಿ ಅದನ್ನು ಎಬ್ಬಿಸಲು ಪ್ರಯತ್ನಿಸಲಾಯಿತು’ ಎಂದು ಅವರು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.