ADVERTISEMENT

ಮಧ್ಯಪ್ರದೇಶ: ರ‍್ಯಾಪರ್‌ ಸ್ಟ್ಯಾನ್‌ ಕಾರ್ಯಕ್ರಮಕ್ಕೆ ಕರ್ಣಿ ಸೇನಾದಿಂದ ಅಡ್ಡಿ

​ಪ್ರಜಾವಾಣಿ ವಾರ್ತೆ
Published 18 ಮಾರ್ಚ್ 2023, 12:36 IST
Last Updated 18 ಮಾರ್ಚ್ 2023, 12:36 IST
   

ಇಂದೋರ್‌: ಮಧ್ಯಪ್ರದೇಶದ ಇಂದೋರ್‌ನಲ್ಲಿ ರ‍್ಯಾಪ್‌ ಹಾಡುಗಾರ ಎಂ.ಸಿ. ಸ್ಟ್ಯಾನ್‌ ಅವರ ಸಂಗೀತ ಕಾರ್ಯಕ್ರಮ ನಡೆಯುತ್ತಿದ್ದ ವೇಳೆ ಕರ್ಣಿ ಸೇನಾ ಕಾರ್ಯಕರ್ತರು ದಾಳಿ ನಡೆಸಿ, ಕಾರ್ಯಕ್ರಮವನ್ನು ಮಧ್ಯದಲ್ಲೇ ಮೊಟಕುಗೊಳಿಸಿದ ಘಟನೆ ಶುಕ್ರವಾರ ರಾತ್ರಿ ನಡೆದಿದೆ.

‌ಇಲ್ಲಿಯ ಲಸೂಡಿಯಾ ಪ್ರದೇಶದ ಹೋಟೆಲ್‌ ಒಂದರಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗಿತ್ತು. ಸ್ಥಳದಲ್ಲಿ ಪ್ರಕ್ಷುಬ್ಧ ವಾತಾವರಣ ಉಂಟಾದ ಕಾರಣ ಪೊಲೀಸರು ಮಧ್ಯಪ್ರವೇಶಿಸಿ ಪರಿಸ್ಥಿತಿ ಹತೋಟಿಗೆ ತಂದರು.

ಸ್ಟ್ಯಾನ್‌ ತನ್ನ ಹಾಡುಗಳಲ್ಲಿ ಅಸಹ್ಯಕರ ಪದಗಳನ್ನು ಬಳಕೆ ಮಾಡುವ ಮೂಲಕ ಯುವಜನರಲ್ಲಿ ಅಶ್ಲೀಲತೆಯನ್ನು ಪಸರಿಸುತ್ತಿದ್ದಾರೆ ಎಂದು ಕರ್ಣಿ ಸೇನಾದ ಜಿಲ್ಲಾ ಘಟಕ ಅಧ್ಯಕ್ಷ ಅನುರಾಗ್‌ ಪ್ರತಾಪ್‌ ಸಿಂಗ್‌ ರಾಘವ್‌ ಅವರು ಶನಿವಾರ ಆರೋಪಿಸಿದ್ದಾರೆ.

ADVERTISEMENT

ಶುಕ್ರವಾರದ ಘಟನೆ ಕುರಿತು ಮಾಹಿತಿ ನೀಡಿದ ಅವರು, ‘ಕಾರ್ಯಕ್ರಮದ ವೇಳೆ ಸ್ಟ್ಯಾನ್‌ ಅಸಹ್ಯಕರ ಭಾಷೆ ಬಳಸಿದನು. ಜೊತೆಗೆ ಯುವಜನರ ಎದುರು ಅಶ್ಲೀಲತೆಯಿಂದ ಕೂಡಿದ್ದ ಹಾಡುಗಳನ್ನು ಹಾಡಿದನು. ಆದ್ದರಿಂದ ಕರ್ಣಿ ಸೇನಾ ಮಧ್ಯಪ್ರವೇಶಿಸಿ ಕಾರ್ಯಕ್ರಮವನ್ನು ಅರ್ಧಕ್ಕೆ ಮೊಟಕುಗೊಳಿಸಿ, ಸ್ಟ್ಯಾನ್‌ನನ್ನು ವೇದಿಕೆಯಿಂದ ಹೊರಕಳಿಸಿತು’ ಎಂದರು.

ಈ ಘಟನೆಯ ವಿಡಿಯೊ ತುಣುಕುಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಕರ್ಣಿ ಸೇನಾ ಕಾರ್ಯಕರ್ತರು ಸ್ಟ್ಯಾನ್‌ ಅವರನ್ನು ವೇದಿಕೆಯಿಂದ ಹೊರಕಳಿಸಿ ವೇದಿಕೆಯನ್ನು ತಮ್ಮ ನಿಯಂತ್ರಣಕ್ಕೆ ತೆಗೆದುಕೊಂಡಿದ್ದು ಈ ವಿಡಿಯೋಗಳಲ್ಲಿ ಸೆರೆಯಾಗಿದೆ.

ಸ್ಟ್ಯಾನ್‌, ಬಿಗ್‌ ಬಾಸ್‌ ರಿಯಾಲಿಟಿ ಶೋನ ಸೀಸನ್‌ 16ರ ಸ್ಪರ್ಧಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.