ADVERTISEMENT

₹ 30,000 ವೇತನ ಪಡೆಯುವ ಸಹಾಯಕ ಎಂಜಿನಿಯರ್‌ ಬಳಿ ₹ 7 ಕೋಟಿ ಆಸ್ತಿ

​ಪ್ರಜಾವಾಣಿ ವಾರ್ತೆ
Published 12 ಮೇ 2023, 16:10 IST
Last Updated 12 ಮೇ 2023, 16:10 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಭೋಪಾಲ್: ತಿಂಗಳಿಗೆ ₹30,000 ವೇತನ ಪಡೆಯುವ ಗುತ್ತಿಗೆ ಆಧಾರಿತ ಸಹಾಯಕ ಎಂಜಿನಿಯರ್‌ ಬಳಿ ₹ 7 ಕೋಟಿಗೂ ಹೆಚ್ಚು ಮೌಲ್ಯದ ಆಸ್ತಿ. ಇದು ನಿಜ. ಮಧ್ಯಪ್ರದೇಶದ ವಸತಿ ನಿಗಮದಲ್ಲಿ ಗುತ್ತಿಗೆ ಆಧಾರದಲ್ಲಿ ಕೆಲಸದಲ್ಲಿರುವ ಹೇಮಾ ಮೀನಾ (34) ಎಂಬ ಸಹಾಯಕ ಎಂಜಿನಿಯರ್‌ ವಿರುದ್ಧ ಈಚೆಗೆ ಲೋಕಾಯುಕ್ತಕ್ಕೆ ದೂರು ಬಂದಿತ್ತು.

‘ಹೇಮಾ ಮೀನಾ ಅವರು ತಮ್ಮ ವೇತನಕ್ಕಿಂತಲೂ ಹಲವುಪಟ್ಟು ಹೆಚ್ಚು ಮೊತ್ತದ ಆಸ್ತಿಯನ್ನು ಸಂಪಾದಿಸಿದ್ದಾರೆ. ಈ ಬಗ್ಗೆ ತನಿಖೆ ನಡೆಸಿ’ ಎಂದು ದೂರಿನಲ್ಲಿ ವಿವರಿಸಲಾಗಿತ್ತು.

ದೂರಿನ ಅನ್ವಯ ಲೋಕಾಯುಕ್ತ ಪೊಲೀಸರು ಹೇಮಾ ಅವರಿಗೆ ಸೇರಿದ ತೋಟದ ಮನೆಯಲ್ಲಿ ಶೋಧಕಾರ್ಯ ನಡೆಸಿದರು.

ADVERTISEMENT

‘ಶೋಧದ ವೇಳೆ ಪತ್ತೆಯಾದ ಸ್ವತ್ತುಗಳನ್ನು ನೋಡಿ, ನಾವೇ ದಂಗಾದೆವು’ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ. ಹೇಮಾ ವಿರುದ್ಧ ಭ್ರಷ್ಟಾಚಾರ ತಡೆ ಕಾಯ್ದೆ ಅಡಿ ಪ್ರಕರಣ ದಾಖಲಿಸಲಾಗಿದೆ. ಅವರನ್ನು ವಿಚಾರಣೆಗೆ ಕರೆಯಲಾಗಿದೆ ಎಂದು ಲೋಕಾಯುಕ್ತ ಅಧಿಕಾರಿಗಳು ತಿಳಿಸಿದ್ದಾರೆ.

ಪತ್ತೆಯಾದ ಸ್ವತ್ತುಗಳ ವಿವರ ಇಂತಿದೆ.

* ಭೋಪಾಲ್‌ನ ಬಿಲ್ಖೀರಿಯಾದಲ್ಲಿ 20,000 ಚದರ ಅಡಿಯ ತೋಟ. ತೋಟದಲ್ಲಿ 10,000 ಚದರ ಅಡಿಯ ಬಂಗಲೆ. ಬಂಗಲೆಯಲ್ಲಿ 40 ಕೊಠಡಿಗಳು. ₹ 1 ಕೋಟಿಗೂ ಹೆಚ್ಚು ಮೌಲ್ಯದ ಕಟ್ಟಡ ನಿರ್ಮಾಣ ಸಾಮಗ್ರಿಗಳು

* ದುಬಾರಿ ಬೆಲೆಯ ವಿದೇಶಿ ತಳಿಯ 35 ಸೇರಿ ಒಟ್ಟು 100 ನಾಯಿಗಳು. ನಾಯಿಗಳಿಗೆ ರೊಟ್ಟಿ ಮಾಡಲು ₹ 2.5 ಲಕ್ಷ ಮೌಲ್ಯದ ಯಂತ್ರ. ನಾಯಿಗಳಿಗೆಂದೇ ವಿಶೇಷ ಕೊಠಡಿಗಳು ಮತ್ತು ಹೊರಾಂಗಣದಲ್ಲಿ ಪ್ರತ್ಯೇಕ ಆವರಣ

* ₹30 ಲಕ್ಷ ಮೌಲ್ಯದ ಟಿ.ವಿ

* ದುಬಾರಿ ಬೆಲೆಯ ಹಲವು ಗಿರ್‌ ಹಸುಗಳು ಸೇರಿ ಒಟ್ಟು 30 ಜಾನುವಾರುಗಳು

* ದುಬಾರಿ ಬೆಲೆಯ ಎಸ್‌ಯುವಿ ಸೇರಿದಂತೆ ಒಟ್ಟು 10 ಐಷಾರಾಮಿ ಕಾರುಗಳು. ತಲಾ ಒಂದು ಟ್ರ್ಯಾಕ್ಟರ್‌, ಟ್ಯಾಂಕರ್, ಟ್ರಕ್‌

* ಮನೆ ಸಹಾಯಕರು ಮತ್ತು ನೌಕರರೊಂದಿಗೆ ಮಾತನಾಡಲು ಅತ್ಯಾಧುನಿಕ ವಾಕಿ–ಟಾಕಿ ವ್ಯವಸ್ಥೆ. ಮೊಬೈಲ್‌ ಜಾಮರ್‌

* ₹ 10 ಲಕ್ಷ ಮೌಲ್ಯದ ಚಿನ್ನಾಭರಣ

* ₹77,000 ನಗದು ಮತ್ತು ಹಲವು ಜಮೀನು ಪತ್ರಗಳು

ಆಧಾರ: ಪಿಟಿಐ, ಎನ್‌.ಡಿ.ಟಿವಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.