ಭೋಪಾಲ್: ಕೋವಿಡ್-19 ಸೋಂಕು ತಗುಲಿ ಆಸ್ಪತ್ರೆಗೆ ಸೇರಿದ್ದ ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರು ಇಲ್ಲಿನ ಖಾಸಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ಆರು ದಿನಗಳ ನಂತರ ನಡೆಸಿದ ಪರೀಕ್ಷೆಯಲ್ಲಿ ವರದಿ ನೆಗೆಟಿವ್ ಬಂದಿರುವುದಾಗಿ ತಿಳಿಸಿದ್ದಾರೆ.
61 ವರ್ಷದ ಚೌಹಾಣ್ ಅವರಿಗೆ ಜುಲೈ 25 ರಂದು ಕೊರೊನಾವೈರಸ್ ಸೋಂಕು ತಗುಲಿರುವುದು ದೃಢಪಟ್ಟಿತ್ತು. ಬಳಿಕ ಆಸ್ಪತ್ರೆ ಸೇರಿದ್ದ ಅವರು, ಆಗಸ್ಟ್ 5 ರಂದು ಡಿಸ್ಚಾರ್ಜ್ ಆದಾಗಿನಿಂದಲೂ ಹೋಂ ಕ್ವಾರಂಟೈನ್‌ನಲ್ಲಿ ಇದ್ದಾರೆ.
'ನನ್ನ ಕೋವಿಡ್-19 ವರದಿಯು ನಕಾರಾತ್ಮಕವಾಗಿ ಹೊರಬಂದಿದೆ. ವೈದ್ಯರ ಸಲಹೆ ಮೇರೆಗೆ ನಾನು ನಾಳೆಯವರೆಗೆ ಪ್ರತ್ಯೇಕವಾಗಿರುತ್ತೇನೆ. ವೈದ್ಯರು, ದಾದಿಯರು ಮತ್ತು ಅವರ ಇಡೀ ತಂಡಕ್ಕೆ ನಾನು ಪ್ರಾಮಾಣಿಕವಾಗಿ ಧನ್ಯವಾದಗಳನ್ನು ಅರ್ಪಿಸುತ್ತೇನೆ. ನನ್ನ ಆರೋಗ್ಯಕ್ಕಾಗಿ ನಿಮ್ಮೆಲ್ಲರ ಶುಭಾಶಯಗಳು ಮತ್ತು ಪ್ರಾರ್ಥನೆಗಳಿಗೆ ನಾನು ಕೃತಜ್ಞನಾಗಿದ್ದೇನೆ' ಎಂದು ಮುಖ್ಯಮಂತ್ರಿ ಟ್ವೀಟ್ ಮಾಡಿದ್ದಾರೆ.
ಆಗಸ್ಟ್ 3ರಂದು ಚೌಹಾಣ್ ಅವರಿಗೆ ಮತ್ತೆ ಕೋವಿಡ್ ಸೋಂಕು ತಗುಲಿರುವುದು ದೃಢಪಟ್ಟಿತ್ತು.
ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯ (ಐಸಿಎಂಆರ್) ಮಾರ್ಗಸೂಚಿಗಳ ಪ್ರಕಾರ ಮುಖ್ಯಮಂತ್ರಿಯನ್ನು ಬಿಡುಗಡೆ ಮಾಡಲಾಗುತ್ತಿದೆ ಎಂದು ಚೌಹಾಣ್ ದಾಖಲಾಗಿದ್ದ ಚಿರಾಯು ಆಸ್ಪತ್ರೆಯಿಂದ ತಿಳಿಸಿದ್ದರು.
ಮೇ 8 ರ ಐಸಿಎಂಆರ್ ನೀತಿಯ ಪ್ರಕಾರ ಡಿಸ್ಚಾರ್ಜ್ ಮಾಡಲು ವೈದ್ಯರು ಸಲಹೆ ನೀಡಿದರು. ಈ ಪ್ರಕಾರ ರೋಗಿಗಳಿಗೆ ಲಕ್ಷಣಗಳು ಕಾಣಿಸಿಕೊಂಡ 10 ದಿನಗಳ ನಂತರ ಮತ್ತು ಮೂರು ದಿನಗಳವರೆಗೆ ಜ್ವರವಿಲ್ಲ ಎಂದಾದರೆ ಬಿಡುಗಡೆ ಮಾಡಬಹುದು. ಡಿಸ್ಚಾರ್ಜ್ ಮಾಡುವ ಮೊದಲು ಪರೀಕ್ಷೆಯ ಅಗತ್ಯವಿಲ್ಲಎಂದು ಆಸ್ಪತ್ರೆ ನೀಡಿರುವ ಬುಲೆಟಿನ್‌ನಲ್ಲಿ ಹೇಳಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.