ಹರಿಭಾವು ಬಗಡೆ
ಪಿಟಿಐ ಚಿತ್ರ
ಜೈಪುರ: ‘ಭಾರದ ಇತಿಹಾಸವು ಬ್ರಿಟಿಷರಿಂದ ಪ್ರಭಾವಿತರಾಗಿದ್ದು, ಮೊಘಲ್ ದೊರೆ ಅಕ್ಬರ್ ಹಾಗೂ ಜೋಧಾ ಬಾಯಿ ಅವರ ವಿವಾಹವು ಕಟ್ಟುಕಥೆಯಾಗಿದೆ’ ಎಂದು ರಾಜಸ್ಥಾನದ ರಾಜ್ಯಪಾಲ ಹರಿಭಾವು ಬಗಡೆ ಅಭಿಪ್ರಾಯಪಟ್ಟಿದ್ದಾರೆ.
ಉದಯಪುರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿರುವ ಅವರು, ‘ಅಕ್ಬರ್‌ನಾಮದಲ್ಲಿ ಜೋಧಾ ಮತ್ತು ಅಕ್ಬರ್ ನಡುವೆ ವಿವಾಹ ನಡೆದಿತ್ತು ಎಂಬುದರ ಯಾವ ಉಲ್ಲೇಖವೂ ಇಲ್ಲ. ಆದರೆ ಇವರಿಬ್ಬರ ಮದುವೆ ಕಥೆ ಆಧರಿಸಿ ಸಿನಿಮಾ ಕೂಡಾ ತೆರೆಕಂಡಿದೆ. ಇತಿಹಾಸ ಪುಸ್ತಕಗಳೂ ಅದನ್ನೇ ಹೇಳುತ್ತಿದ್ದು, ಅವೆಲ್ಲವೂ ಸುಳ್ಳಾಗಿವೆ’ ಎಂದಿದ್ದಾರೆ.
‘ಭರ್ಮಲ್ ಎಂಬ ರಾಜನಿದ್ದ. ಆತನ ದಾಸಿಯ ಮಗಳನ್ನು ಅಕ್ಬರ್ ಮದುವೆಯಾದ’ ಎಂದು ಬಗಡೆ ಹೇಳಿದ್ದಾರೆ.
1569ರಲ್ಲಿ ಅಂಬೆರ್‌ನ ರಜಪೂತ್ ರಾಜ ಭರ್ಮಲ್ ಮಗಳನ್ನು ಅಕ್ಬರ್ ಮದುವೆಯಾದ ಎಂಬ ಐತಿಹಾಸಿಕ ಘಟನೆಯ ಚರ್ಚೆಯನ್ನು ಬಗಡೆ ಮರುಹುಟ್ಟು ಹಾಕಿದ್ದಾರೆ. 1727ರಲ್ಲಿ ಸವಾಯಿ ಜೈ ಸಿಂಗ್ ದ್ವಿತೀಯ ತನ್ನ ರಾಜಧಾನಿಯನ್ನು ಜೈಪುರಕ್ಕೆ ಸ್ಥಳಾಂತರಿಸುವ ಮೊದಲು ರಜಪೂತರ ರಾಜಧಾನಿಯಾದ ಅಮೆರ್ ಅಥವಾ ಅಂಬೇರ್ (ಜೈಪುರ) ಅನ್ನು ಕಛವಾ ರಜಪೂತರು ಆಳುತ್ತಿದ್ದರು.
‘ಬ್ರಿಟಿಷರು ನಮ್ಮ ನಾಯಕರ ಇತಿಹಾಸವನ್ನೇ ತಿರುಚಿದ್ದಾರೆ. ಅವರು ಸಮರ್ಪಕವಾಗಿ ಬರೆದಿಲ್ಲ ಹಾಗೂ ಅವರ ದೃಷ್ಟಿಕೋನದ ಇತಿಹಾಸವನ್ನು ಆರಂಭದಲ್ಲಿ ಒಪ್ಪಿಕೊಳ್ಳಲಾಯಿತು. ನಂತರ ಕೆಲ ಭಾರತೀಯರು ಇತಿಹಾಸ ಬರೆದರೂ ಅವೆಲ್ಲವೂ ಬ್ರಿಟಿಷರಿಂದ ಪ್ರಭಾವಿತವಾಗಿತ್ತು’ ಎಂದು ಬಗಡೆ ಹೇಳಿದ್ದಾರೆ.
‘ರಜಪೂತರ ರಾಜ ಮಹಾರಾಣ ಪ್ರತಾಪ ಅವರ ಅಕ್ಬರ್‌ಗೆ ಸಂಧಾನ ಪತ್ರ ಬರೆದಿದ್ದರು ಎಂಬುದೂ ದಾರಿತಪ್ಪಿಸುವ ಹೇಳಿಕೆಯಾಗಿದೆ. ಮಹಾರಾಣ ಪ್ರತಾಪ ಅವರು ಎಂದಿಗೂ ತಮ್ಮ ಸ್ವಾಭಿಮಾನದೊಂದಿಗೆ ರಾಜಿ ಮಾಡಿಕೊಂಡಿಲ್ಲ. ಇತಿಹಾಸದಲ್ಲಿ ಅಕ್ಬರ್ ಕುರಿತು ಹೆಚ್ಚು ಕಲಿಸಲಾಗಿದೆ. ಹಾಗೆಯೇ ಮಹಾರಾಣ ಪ್ರತಾಪ್ ಬಗ್ಗೆ ಕಡಿಮೆ ಹೇಳಿಕೊಡಲಾಗಿದೆ’ ಎಂದು ಬಗಡೆ ಆರೋಪಿಸಿದ್ದಾರೆ.
‘ಆದರೆ ಸದ್ಯ ಪರಿಸ್ಥಿತಿ ಉತ್ತಮವಾಗುತ್ತಿದೆ. ಹೊಸ ಶಿಕ್ಷಣ ನೀತಿಯ ಮೂಲಕ ಹೊಸ ತಲೆಮಾರನ್ನು ಸಜ್ಜುಗೊಳಿಸುವ ಪ್ರಯತ್ನ ನಡೆದಿದೆ. ನಮ್ಮ ಸಂಸ್ಕೃತಿ ಮತ್ತು ಭವ್ಯ ಇತಿಹಾಸವನ್ನು ಕಾಪಾಡುವುದರ ಜತೆಗೆ ಭವಿಷ್ಯದ ಸವಾಲುಗಳನ್ನು ಎದುರಿಸಲು ಪೂರಕವಾದ ಕಾರ್ಯಗಳು ನಡೆಯುತ್ತಿವೆ’ ಎಂದು ಹೇಳಿದ್ದಾರೆ.
‘ಮಹಾರಾಣ ಪ್ರತಾಪ್ ಮತ್ತು ಛತ್ರಪತಿ ಶಿವಾಜಿ ಮಹಾರಾಜರು ದೇಶಪ್ರೇಮದ ಪ್ರತೀಕ. ಇವರಿಬ್ಬರ ಜನನದ ನಡುವೆ 90 ವರ್ಷಗಳ ಅಂತರವಿದೆ. ಒಂದೊಮ್ಮೆ ಇವರಿಬ್ಬರೂ ಸಮಕಾಲೀನರಾಗಿದ್ದರೆ ಈ ದೇಶದ ಇತಿಹಾಸವೇ ಬೇರೆಯಾಗಿರುತ್ತಿತ್ತು. ಈ ಇಬ್ಬರ ಧೈರ್ಯ ಹಾಗೂ ದೇಶಪ್ರೇಮ ಒಂದೇ ರೀತಿಯದ್ದು’ ಎಂದು ಬಗಡೆ ಅಭಿಪ್ರಾಯಪಟ್ಟಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.