
ಮುಂಬೈ– ಅಹಮದಾಬಾದ್ ನಡುವಿನ ಬುಲೆಟ್ ರೈಲು
ಪಿಟಿಐ ಚಿತ್ರ
ನವದೆಹಲಿ: ಮಹತ್ವಾಕಾಂಕ್ಷಿಯ ಮುಂಬೈ– ಅಹಮದಾಬಾದ್ ನಡುವಿನ ಬುಲೆಟ್ ರೈಲಿನ ಯೋಜನಾ ವೆಚ್ಚವು ₹1.98 ಲಕ್ಷ ಕೋಟಿಗೆ ಏರಿಕೆಯಾಗಲಿದೆ. 2016ರಲ್ಲಿ ಈ ಮಾರ್ಗದ ವೆಚ್ಚ ₹1.08 ಲಕ್ಷ ಎಂದು ಅಂದಾಜಿಸಲಾಗಿತ್ತು.
ಈ ಕುರಿತು ಮಾಹಿತಿ ನೀಡಿದ ರೈಲ್ವೆ ಮಂಡಳಿ ಅಧ್ಯಕ್ಷ ಸತೀಶ್ ಕುಮಾರ್, ‘ಭೂ ಸ್ವಾಧೀನ ಸೇರಿದಂತೆ ಹಲವು ಕಾರಣದಿಂದ ಯೋಜನಾ ವೆಚ್ಚವು ಏರಿಕೆಯಾಗಿದೆ’ ಎಂದು ತಿಳಿಸಿದರು.
ಶೇ 56.6ರಷ್ಟು ಭೌತಿಕ ಕಾಮಗಾರಿ ಪೂರ್ಣಗೊಂಡಿದ್ದು, 2025ರ ನವೆಂಬರ್ ತಿಂಗಳವರೆಗೂ ₹85,801 ಕೋಟಿ ವೆಚ್ಚ ಮಾಡಲಾಗಿದೆ ಎಂದು ರೈಲ್ವೆ ಸಚಿವಾಲಯವು ತಿಳಿಸಿತ್ತು.
ಭೂಸ್ವಾಧೀನದಲ್ಲಿ ವಿಳಂಬ, ಅರಣ್ಯ ಹಾಗೂ ಪರಿಸರ ಇಲಾಖೆಯಿಂದ ಅನುಮತಿ ಪಡೆಯುವ ಪ್ರಕ್ರಿಯೆಯೂ ನಿಧಾನವಾಗಿರುವ ಕಾರಣ ಯೋಜನಾ ವೆಚ್ಚ ಏರಲು ಕಾರಣವಾಗಿದೆ.
2017ರಲ್ಲಿ ಬುಲೆಟ್ ರೈಲು ಯೋಜನೆಗೆ ಭೂಮಿಪೂಜೆ ನೆರವೇರಿಸಲಾಗಿತ್ತು. 2023ರ ಒಳಗಾಗಿ ಇಡೀ ಯೋಜನೆ ಪೂರ್ಣಗೊಳಿಸುವ ಗುರಿ ಹೊಂದಲಾಗಿತ್ತು.
ಸೂರತ್–ಬಿಲಿಮೊರಾ ನಡುವಿನ ಮೊದಲ ಹಂತವು 2027ರ ಆಗಸ್ಟ್ 15ರಂದು ಚಾಲನೆ ನೀಡಲಾಗುವುದು ಎಂದು ರೈಲ್ವೆ ಸಚಿವ ಅಶ್ಚಿನಿ ವೈಷ್ಣವ್ ಕಳೆದ ವಾರ ಘೋಷಿಸಿದ್ದರು.
508 ಕಿ.ಮೀ ಉದ್ದದ ಪೂರ್ಣ ಮಾರ್ಗವು 2029ರ ಕೊನೆ ಭಾಗದಲ್ಲಿ ಉದ್ಘಾಟನೆಯಾಗಲಿದೆ ಎಂದು ಮಾಹಿತಿ ನೀಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.