ADVERTISEMENT

ಮುಂಬೈ | ₹252 ಕೋಟಿ ಮೌಲ್ಯದ ಮಾದಕವಸ್ತು ವಶ ಪ್ರಕರಣ: ಪ್ರಮುಖ ಆರೋಪಿ ಬಂಧನ

ಪಿಟಿಐ
Published 23 ಅಕ್ಟೋಬರ್ 2025, 14:20 IST
Last Updated 23 ಅಕ್ಟೋಬರ್ 2025, 14:20 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಮುಂಬೈ: ದುಬೈನಿಂದ ಗಡಿಪಾರಾಗಿದ್ದ, ₹252 ಕೋಟಿ ಮೌಲ್ಯದ ಮೆಫೆಡ್ರೋನ್‌ ಮಾದಕವಸ್ತು ಪ್ರಕರಣದ ಪ್ರಮುಖ ಆರೋಪಿ ಮಹಮ್ಮದ್ ಸಲೀಂ ಮಹಮ್ಮದ್ ಸೊಹೇಲ್ ಶೇಖ್ ಎಂಬಾತನನ್ನು ಬಂಧಿಸಿರುವುದಾಗಿ ಮುಂಬೈ ಪೊಲೀಸರು ಗುರುವಾರ ತಿಳಿಸಿದ್ದಾರೆ.

ಶೇಖ್‌ ವಿರುದ್ಧ ರೆಡ್ ಕಾರ್ನರ್‌ ನೋಟಿಸ್ ಹೊರಡಿಸಲಾಗಿತ್ತು. ಕೆಲ ದಿನಗಳ ಹಿಂದೆ ದುಬೈನಲ್ಲಿ ತನಿಖಾ ಸಂಸ್ಥೆಗಳು ಆತನನ್ನು ವಶಕ್ಕೆ ಪಡೆದು ಮುಂಬೈಗೆ ಕರೆತಂದವು. ಆಗ ಬಂಧಿಸಲಾಗಿದೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ದೇಶದಾದ್ಯಂತ ಮಾದಕ ವಸ್ತುಗಳ ತಯಾರಿಕಾ ಘಟಕಗಳನ್ನು ತೆರೆಯಲು ಶೇಖ್‌ ಹವಣಿಸುತ್ತಿದ್ದ. ಉತ್ತೇಜಕ ಔಷಧದ ರೂಪದಲ್ಲಿ ಬಳಸುವ ಸಂಶ್ಲೇಷಿತ ಉದ್ದೀಪನ ವಸ್ತು ಮೆಫೆಡ್ರೋನ್ ಮಾರಾಟಕ್ಕೆ ಪ್ರಯತ್ನಿಸುತ್ತಿದ್ದ ಎಂದು ಅಧಿಕಾರಿ ತಿಳಿಸಿದ್ದಾರೆ.

ADVERTISEMENT

ಅರಬ್‌ ಸಂಯುಕ್ತ ರಾಷ್ಟ್ರದಿಂದ ಬಂಧಿಸಿ ಕರೆತರುತ್ತಿರುವ ಮೂರನೇ ಆರೋಪಿ ಈತ. ಈ ಹಿಂದೆ ಮಾದಕವಸ್ತು ದಂಧೆಯ ಕಿಂಗ್‌ಪಿನ್ ಸಲೀಂ ಡೋಲಾ ಪುತ್ರ ತಾಹಿರ್ ಸಲೀಂ ಡೋಲಾ ಹಾಗೂ ಮುಸ್ತಾಫ ಮಹಮ್ಮದ್ ಕುಬ್ಬಾವಾಲಾನನ್ನು ಮುಂಬೈ ಪೊಲೀಸರು ಬಂಧಿಸಿದ್ದರು.

ಸಾಂಗ್ಲಿಯಲ್ಲಿ ಮಾದಕವಸ್ತು ತಯಾರಿಕಾ ಘಟಕದ ಮೇಲೆ ಈ ಹಿಂದೆ ದಾಳಿ ಮಾಡಿದ್ದ ಮುಂಬೈ ಪೊಲೀಸರು, ₹252 ಕೋಟಿ ಮೌಲ್ಯದ ಮೆಫೆಡ್ರೋನ್ ವಶಕ್ಕೆ ಪಡೆದಿದ್ದರು. ಪ್ರಕರಣದಲ್ಲಿ ಈವರೆಗೆ 15 ಮಂದಿಯನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.