ಮುಂಬೈ: ಇಲ್ಲಿನ ಕಿಂಗ್ಸ್ ವೃತ್ತದಲ್ಲಿ ಸಾರ್ವಜನಿಕ ಗಣೇಶೋತ್ಸವದ ಅಂಗವಾಗಿ ಜಿಎಸ್‌ಬಿ ಸೇವಾ ಮಂಡಲ ಪ್ರತಿಷ್ಠಾಪಿಸಿರುವ ಗಣಪತಿಯು ದೇಶದ ‘ಶ್ರೀಮಂತ ಗಣೇಶ ಮೂರ್ತಿ’ ಎನಿಸಿಕೊಂಡಿದೆ. ಈ ಗಣೇಶ ಮೂರ್ತಿಗೆ ನ್ಯೂ ಇಂಡಿಯಾ ಇನ್ಯೂರೆನ್ಸ್ ಕಂಪನಿಯಿಂದ ₹474.46 ಕೋಟಿ ಮೊತ್ತದ ವಿಮೆ ಮಾಡಿಸಲಾಗಿದೆ.
‘2024ರಲ್ಲಿ ಪ್ರತಿಷ್ಠಾಪಿಸಲಾದ ಗಣೇಶಮೂರ್ತಿಗೆ ₹400.58 ಕೋಟಿ ಮೊತ್ತದ ವಿಮೆ ಮಾಡಿಸಲಾಗಿತ್ತು. ಈ ಬಾರಿ ಈ ಮೊತ್ತ ₹73.88 ಕೋಟಿಯಷ್ಟು ಹೆಚ್ಚಿದೆ’ ಎಂದು ಜಿಎಸ್‌ಬಿ ಸೇವಾ ಮಂಡಲದ ಅಧ್ಯಕ್ಷ ಅಮಿತ್ ಡಿ.ಪೈ ತಿಳಿಸಿದ್ದಾರೆ. ಆದರೆ, ₹474.46 ಕೋಟಿ ಮೊತ್ತದ ವಿಮೆಗೆ ಜಿಎಸ್‌ಬಿ ಸೇವಾ ಮಂಡಲ ಪಾವತಿಸಿರುವ ವಿಮಾ ಕಂತು ಎಷ್ಟು ಎನ್ನುವುದನ್ನು ಪದಾಧಿಕಾರಿಗಳು ಬಹಿರಂಗಪಡಿಸಿಲ್ಲ.
ಗಣೇಶ ಮೂರ್ತಿ ಅಲಂಕಾರಕ್ಕೆ ಭಕ್ತರು ಸೇವಾ ರೂಪದಲ್ಲಿ ನೀಡುವ 69 ಕೆ.ಜಿಯಷ್ಟು ಚಿನ್ನಾಭರಣ ಮತ್ತು 336 ಕೆ.ಜಿಯಷ್ಟು ಬೆಳ್ಳಿಯ ಆಭರಣಗಳನ್ನು ಬಳಸಲಾಗುತ್ತದೆ. ಈ ಆಭರಣಗಳಿಗೆ ಹಾನಿಯಾನಿದರೆ, ಕಳುವಾದರೆ, ನಷ್ಟವಾದರೆ ₹67.03 ಕೋಟಿ ವಿಮಾ ಪರಿಹಾರ ಸಿಗಲಿದೆ. ವೇದಿಕೆಯಲ್ಲಿ ಅಗ್ನಿ ಅವಘಡ ಸಂಭವಿಸಿದರೆ ₹2 ಕೋಟಿಯಷ್ಟು ಪರಿಹಾರ ಸಿಗಲಿದೆ. ಭೂಕಂಪದಿಂದ ವೇದಿಕೆ, ಮೂರ್ತಿ ಅಲಂಕಾರಕ್ಕೆ ಬಳಸಿರುವ ಹೂವು, ಹಣ್ಣು, ತರಕಾರಿ ಇತರೆ ವಸ್ತುಗಳು, ಪೀಠೋಪಕರಣ, ಕಂಪ್ಯೂಟರ್, ಸಿ.ಸಿ.ಟಿ.ವಿ ಕ್ಯಾಮೆರಾ, ಕ್ಯೂಆರ್ ಕೋಡ್ ಸ್ಕ್ಯಾನರ್ ಯಂತ್ರ ಸೇರಿದಂತೆ ಇತರೆ ಹಾನಿಯಾದರೆ ವಿಶೇಷ ಪರಿಹಾರ ಲಭಿಸಲಿದೆ.
ಗಣೇಶೋತ್ಸವ ನಡೆಯುವ ಮೈದಾನ, ಪೆಂಡಾಲ್, ದರ್ಶನಕ್ಕೆ ಬರುವ ಭಕ್ತರಿಗಾಗಿ ₹30 ಕೋಟಿ ಮೊತ್ತದ ವಿಮೆ ಮಾಡಿಸಲಾಗಿದೆ. ಸ್ವಯಂ ಸೇವಕರಾಗಿ ಕಾರ್ಯನಿರ್ವಹಿಸುವರು, ಭದ್ರತಾ ಸಿಬ್ಬಂದಿ, ಅಡುಗೆ ಕೆಲಸದವರು, ವಾಹನ ನಿಲುಗಡೆ ನಿರ್ವಹಣೆಗಾರರು, ಪಾದರಕ್ಷೆ ಅಂಗಡಿಯವರು ಕೂಡ ವಿಮಾ ವ್ಯಾಪ್ತಿಗೆ ಬರಲಿದ್ದು, ಅಪಘಾತವಾದರೆ, ಜೀವ ಹಾನಿಯಾದರೆ ಇವರಿಗಾಗಿ ₹375 ಕೋಟಿ ಮೊತ್ತದ ವಿಮಾ ಪರಿಹಾರ ಲಭಿಸಲಿದೆ. ವೇದಿಕೆ, ಪೆಂಡಾಲ್ ಹೊರಗೆ ಅಗ್ನಿ ಅವಘಡ ಸಂಭವಿಸಿದರೂ ₹43 ಲಕ್ಷದ ವಿಮಾ ಪರಿಹಾರ ಲಭಿಸಲಿದೆ.
ಜಿಎಸ್‌ಬಿ ಗಣೇಶೋತ್ಸವದಲ್ಲಿ ದಿನದ 24 ಗಂಟೆಯೂ ಪೂಜೆ, ಅರ್ಜನೆ, ಸೇವೆ, ಅನ್ನದಾನ ನಡೆಯುತ್ತದೆ. ಈ ಗಣೇಶ ಮೂರ್ತಿಯು ‘ನೌಸಾಲಾ ಪೌನಾರಾ ವಿಶ್ವಾಚರಾಜ’ (ಹರಕೆ ಪೂರೈಸುವ ವಿಶ್ವದ ರಾಜ) ಎಂದೇ ಹೆಸರುವಾಸಿ. ಗಣೇಶೋತ್ಸವದ ಅಂಗವಾಗಿ ಸಮಾಜದ ದುರ್ಬಲ ವರ್ಗದ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ನೆರವು ಸೇರಿದಂತೆ ಹಲವು ಸಾಮಾಜಿಕ ಕಾರ್ಯಕ್ರಮಗಳನ್ನೂ ಹಮ್ಮಿಕೊಳ್ಳಲಾಗುತ್ತಿದೆ ಎಂದು ಅಮಿತ್ ಡಿ.ಪೈ ಹೇಳಿದರು.
ದರ್ಶನಕ್ಕೆ ಆ.25ರ ರಾತ್ರಿ 8 ಗಂಟೆಯಿಂದ ಅವಕಾಶ ಕಲ್ಪಿಸಲಾಗಿದೆ. ಗಣೇಶೋತ್ಸವ ಆ.27ರಿಂದ 31ರವರೆಗೆ ನಡೆಯಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.