ADVERTISEMENT

ಸಹಜೀವನ ಸಂಗಾತಿ ಕೊಂದು ತುಂಡು ತುಂಡು ಮಾಡಿ ನಾಯಿಗಳಿಗೆ ಹಾಕಿದ!

ಪಿಟಿಐ
Published 9 ಜೂನ್ 2023, 0:51 IST
Last Updated 9 ಜೂನ್ 2023, 0:51 IST
   

ಠಾಣೆ, ಮಹಾರಾಷ್ಟ್ರ: ತನ್ನ ಸಹಜೀವನ ಸಂಗಾತಿ, 32 ವರ್ಷದ ಮಹಿಳೆಯನ್ನು ತುಂಡುಗಳಾಗಿ ಕತ್ತರಿಸಿಹತ್ಯೆಗೈದಿರುವ ವ್ಯಕ್ತಿ, ಕೆಲ ಅಂಗಗಳನ್ನು ಕುಕ್ಕರ್‌ನಲ್ಲಿ ಬೇಯಿಸಿ, ಮಿಕ್ಸರ್‌ನಲ್ಲಿ ಅರೆದು ಕ್ರೂರತೆಯನ್ನು ಮೆರೆದಿರುವ ಕೃತ್ಯ ಇಲ್ಲಿ ನಡೆದಿದೆ.

ದೆಹಲಿಯಲ್ಲಿ ಕಳೆದ ವರ್ಷ ಮೇ ತಿಂಗಳು ನಡೆದಿದ್ದ ಯುವತಿ ಶ್ರದ್ಧಾ ವಾಕರ್‌ ಅವರ ದೇಹವನ್ನು ಕತ್ತರಿಸಿ, ಅಂಗಾಂಗಗಳನ್ನು ಫ್ರಿಜ್‌ನಲ್ಲಿ ಇಟ್ಟಿದ್ದ ಹತ್ಯೆಯ ಮುಂದುವರಿದ ಪ್ರಕರಣದಂತಿರುವ ಈ ಕೃತ್ಯವು ನಾಗರಿಕ ಸಮಾಜವನ್ನು ಬೆಚ್ಚಿಬೀಳಿಸಿದೆ.

ಠಾಣೆ ನಗರದ ಮೀರಾ ರಸ್ತೆಯ ಗೀತಾ ಅಕ್ಷದ್ವೀಪ್‌ ಸಮುಚ್ಚಯದ 7ನೇ ಮಹಡಿಯ ಫ್ಲ್ಯಾಟ್‌ನಲ್ಲಿ ಕೃತ್ಯ ನಡೆದಿದೆ. ಈ ಜೋಡಿ ಇಲ್ಲಿ ಮೂರು ವರ್ಷಗಳಿಂದ ಬಾಡಿಗೆಗೆ ಇದ್ದರು. ಪ್ರಾಥಮಿಕ ಮಾಹಿತಿ ಪ್ರಕಾರ, ಕೃತ್ಯ ಜೂನ್‌ 4ರಂದು ನಡೆದಿರುವ ಶಂಕೆ ಇದೆ. ದಿನಸಿ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ 32 ವರ್ಷದ ಸರಸ್ವತಿ ವೈದ್ಯ ಕೊಲೆಗೀಡಾಗಿರುವ ಮಹಿಳೆ. 56 ವರ್ಷದ ಮನೋಜ್‌ ಸಾನೆ ಎಂಬಾತನನ್ನು ಪೊಲೀಸರು ಬಂಧಿಸಿ ದ್ದಾರೆ. ಸದ್ಯಕ್ಕೆ ಕೃತ್ಯಕ್ಕೆ ಕಾರಣ ತಿಳಿದುಬಂದಿಲ್ಲ.

ADVERTISEMENT

ಬುಧವಾರದಂದು ಇವರು ವಾಸವಿದ್ದ ಫ್ಲ್ಯಾಟ್‌ನಿಂದ ದುರ್ವಾಸನೆ ಬರುತ್ತಿತ್ತು. ಮೊದಲಿಗೆ ನೆರೆಹೊರೆಯವರು ದುರ್ನಾತ ಕುರಿತಂತೆ ಪ್ರಶ್ನಿಸಿದಾಗ ಆರೋಪಿ ದಿಗಿಲುಗೊಂಡಿದ್ದು, ಕೆಲಹೊತ್ತಿನಲ್ಲಿ ಬರುವುದಾಗಿ ಹೇಳಿ ಗೋಣಿಚೀಲದೊಂದಿಗೆ ಹೊರಹೋಗಿದ್ದಾನೆ. ನಿವಾಸಿಗಳು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಫ್ಲ್ಯಾಟ್‌ನ ಬಾಗಿಲು ಒಡೆದು ಒಳಗೆ ಪ್ರವೇಶಿಸಿದಾಗ ಕೃತ್ಯ ಗೊತ್ತಾಗಿದೆ.

ಪೊಲೀಸರ ವಶಕ್ಕೆ ಆರೋಪಿ: ಆರೋಪಿ ಸಾನೆಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ನ್ಯಾಯಾಲಯವು ಈತನನ್ನು ಜೂನ್‌ 16ರವರೆಗೂ ಪೊಲೀಸರ ವಶಕ್ಕೆ ಒಪ್ಪಿಸಿದೆ.

ಈತನ ವಿರುದ್ಧ ಐಪಿಸಿ ಕಾಯ್ದೆ ಕೊಲೆ (302), ಸಾಕ್ಷ್ಯ ನಾಶ (201) ಸೆಕ್ಷನ್‌ಗಳಡಿ ಪ್ರಕರಣ ದಾಖಲಿಸಲಾಗಿದೆ. ಜೀವನಸಂಗಾತಿ ಆತ್ಮಹತ್ಯೆ ಮಾಡಿಕೊಂಡಳು ಎಂದು ಆರೋಪಿ ಒಂದು ಹಂತದಲ್ಲಿ ತಿಳಿಸಿದ್ದಾನೆ. ತನಿಖೆಯ ಹಾದಿ ತಪ್ಪಿಸುವ ಯತ್ನ ಇದಾಗಿದ್ದು,  ಸಮಗ್ರ ತನಿಖೆಯ ನಂತರವೇ ಕೃತ್ಯದ ಕಾರಣ ತಿಳಿಯಬೇಕಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮನೆ ಆವರಿಸಿದ್ದ ದುರ್ನಾತ:
ಪೊಲೀಸ್ ಅಧಿಕಾರಿಯೊಬ್ಬರ ಪ್ರಕಾರ, ಫ್ಲ್ಯಾಟ್‌ನ ಬಾಗಿಲು ಒಡೆದು ತೆರೆಯುತ್ತಿದ್ದಂತೆ ದುರ್ನಾತ ಆವರಿಸಿದೆ. ಮೊದಲಿಗೆ ಬೆಡ್‌ರೂಂ ಪ್ರವೇಶಿಸಿದ್ದು ಅಲ್ಲಿ ಪ್ಲಾಸ್ಟಿಕ್‌ ಚೀಲಗಳಿದ್ದು, ನೆಲದಲ್ಲಿ ರಕ್ತದ ಕಲೆಗಳು ಇದ್ದವು.

ಪೊಲೀಸರು ಬಳಿಕ ಅಡುಗೆ ಮನೆ ಪ್ರವೇಶಿಸಿದಾಗ ಕಂಡ ಅಲ್ಲಿನ ದೃಶ್ಯಗಳು ಕೃತ್ಯದ ಕರಾಳ ಚಿತ್ರಣವನ್ನು ತೆರೆದಿಟ್ಟವು. ಮಹಿಳೆ ದೇಹವನ್ನು ತುಂಡುಗಳಾಗಿ ಕತ್ತರಿಸಿ ಸಾಕ್ಷ್ಯ ನಾಶ ಮಾಡಲು ಆರೋಪಿ ಯತ್ನಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ನಾಯಿಗಳಿಗೂ ಮಾಂಸ ಹಾಕಿದ್ದ...
ಬಾಗಿಲು ಒಡೆದು ಫ್ಲ್ಯಾಟ್‌ನ ಅಡುಗೆ ಮನೆಗೆ ತೆರಳಿದ ಪೊಲೀಸರು ಅಲ್ಲಿನ ಚಿತ್ರಣ ಕಂಡು ಬೆಚ್ಚಿಬಿದ್ದಿದ್ದಾರೆ. ಕುಕ್ಕರ್‌ನಲ್ಲಿ ಕತ್ತರಿಸಿದ್ದ ಅಂಗಾಂಗಗಳನ್ನು ಹಾಕಿ ಬೇಯಿಸಿದ್ದರೆ, ಮಹಿಳೆಯ ಕೂದಲು ನೆಲದ ಮೇಲೆ ಚೆಲ್ಲಾಡಿತ್ತು. ಅಲ್ಲದೆ, ಕೆಲವು ಪಾತ್ರೆಗಳಲ್ಲೂ ಮಾಂಸವನ್ನು ತುಂಬಿಡಲಾಗಿತ್ತು. ಭಾಗಶಃ ಬೇಯಿಸಿದ್ದ ಮೂಳೆಗಳು ಹಾಗೂ ಮಹಿಳೆ ದೇಹದ ಮಾಂಸವನ್ನು ಪಾತ್ರೆ ತೊಳೆಯುವ ಸಿಂಕ್‌ನಲ್ಲಿ ಇಡಲಾಗಿತ್ತು. ಬಕೆಟ್‌ಗಳು, ಪ್ಲಾಸ್ಟಿಕ್‌ ಟಬ್‌ನಲ್ಲಿಯೂ ಮಾಂಸ ತುಂಬಿಡಲಾಗಿತ್ತು. ಆರೋಪಿ ಸಾನೆಯು ಒಂದೆರಡು ದಿನಗಳಿಂದ ಬೀದಿ ನಾಯಿಗಳಿಗೆ ಮಾಂಸ ತಿನ್ನಿಸುತ್ತಿದ್ದನ್ನು ತಾವು ಗಮನಿಸಿದ್ದಾಗಿ ನೆರೆಯವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಹಿಂದೆಂದೂ ಆತ ನಾಯಿಗಳಿಗೆ ಮಾಂಸ ತಿನ್ನಿಸಿದ್ದನ್ನು ನೋಡಿರಲಿಲ್ಲ ಎಂದು ತಿಳಿಸಿದ್ದಾರೆ. ಮೊದಲಿಗೆ ಮನೆಯಿಂದ ವಾಸನೆ ಬರುತ್ತಿರುವ ಗಮನೆಳೆದಾಗ ಆರೋಪಿಯು, ವಾಸನೆ ತಗ್ಗುವಂತೆ ರೂಮ್‌ ಫ್ರೆಷನರ್‌ ಸಿಂಪಡಿಸಿ ತೆರಳಿದ್ದ ಎಂದು ಸಮುಚ್ಚಯದ ನಿವಾಸಿ ವಿಕಾಸ್‌ ಶ್ರೀವಾತ್ಸವ ಹೇಳಿದರು. ಜೋಡಿಯು ಮೂರು ವರ್ಷದಿಂದ ಬಾಡಿಗೆಗೆ ಇದ್ದು, ಬಹುತೇಕ ಒಳಗೆ ಇರುತ್ತಿದ್ದರು. ಅಕ್ಕಪಕ್ಕದವರ ಜೊತೆಗೆ ಬೆರೆಯುತ್ತಿರಲಿಲ್ಲ. ಕಾರ್ಯಕ್ರಮಗಳಲ್ಲೂ ಭಾಗವಹಿಸುತ್ತಿರಲಿಲ್ಲ. ಏನು ಕೆಲಸ ಮಾಡುತ್ತಿದ್ದರು ಎಂಬ ಮಾಹಿತಿಯೂ ಇರಲಿಲ್ಲ ಎಂದು ತಿಳಿಸಿದರು. ‘ಫ್ಲ್ಯಾಟ್‌ನಿಂದ ಸಂಗ್ರಹಿಸಲಾಗಿರುವ ಅಂಗಾಂಗಗಳ ಮಾದರಿಯನ್ನು ಜೆ.ಜೆ. ಆಸ್ಪತ್ರೆಯ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ’ ಎಂದು ಡಿಸಿಪಿ ಜಯಂತ್‌ ಬಜ್‌ಬಲೆ ತಿಳಿಸಿದ್ದಾರೆ.
ವರದಿ ಕೇಳಿದ ಮಹಿಳಾ ಆಯೋಗ
32 ವರ್ಷದ ಮಹಿಳೆಯ ಭೀಕರ ಹತ್ಯೆ ಕೃತ್ಯವನ್ನು ‘ಆಘಾತಕಾರಿ’ ಎಂದು ಮಹಾರಾಷ್ಟ್ರ ರಾಜ್ಯ ಮಹಿಳಾ ಆಯೋಗ (ಎಂಎಸ್‌ಸಿಡಬ್ಲ್ಯೂ) ಪ್ರತಿಕ್ರಿಯಿಸಿದೆ. ಈ ಕುರಿತು ವರದಿ ಸಲ್ಲಿಸುವಂತೆಯೂ ಪೊಲೀಸ್ ಕಮಿಷನರೇಟ್‌ಗೆ ಸೂಚಿಸಿದೆ. ನಿಯಮಾನುಸಾರ ಪ್ರಕರಣದ ವಸ್ತುಸ್ಥಿತಿ ವರದಿಯನ್ನು ಶೀಘ್ರಗತಿಯಲ್ಲಿ ಸಲ್ಲಿಸುವಂತೆ ಆಯೋಗದ ಅಧ್ಯಕ್ಷೆ ರೂಪಾಲಿ ಚಕಂಕರ್ ಅವರು ಪೊಲೀಸ್ ಕಮಿಷನರ್ ಮಧುಕರ್ ಪಾಂಡೆ ಅವರಿಗೆ ಪತ್ರ ಬರೆದಿದ್ದಾರೆ. ಇಂತಹ ಕೃತ್ಯಗಳು ಮರುಕಳಿಸುತ್ತಿವೆ. ತಡೆಯುವ ಕುರಿತಂತೆ ಕಟ್ಟುನಿಟ್ಟಿನ ಕ್ರಮ ಜರುಗಿಸಲು ಗೃಹ ಇಲಾಖೆಯು ಮುಂದಾಗಬೇಕು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ದೆಹಲಿಯಲ್ಲಿ  ಕಳೆದ ವರ್ಷದ ಮೇ ತಿಂಗಳಲ್ಲಿ ಇಂತಹದೇ ಪ್ರಕರಣ ನಡೆದಿತ್ತು. ಆರೋಪಿ ಆಫ್ತಾಬ್ ಪೂನಾವಾಲಾ ತನ್ನ ಸಹಜೀವನ ಸಂಗಾತಿ ಶ್ರದ್ಧಾ ವಾಕರ್‌ ಅವರನ್ನು ಕೊಲೆ ಮಾಡಿ ಕತ್ತರಿಸಿದ್ದು, ಅಂಗಾಂಗಳನ್ನು ಮೂರು ವಾರ ಕಾಲ ಫ್ರಿಜ್‌ನಲ್ಲಿ ಇಟ್ಟಿದ್ದ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.