ADVERTISEMENT

ಲಾಕ್‌ಡೌನ್ ವೇಳೆ ಊರಿಗೆ ತೆರಳಲು 25 ಟನ್ ಈರುಳ್ಳಿ ಖರೀದಿಸಿದ ಮುಂಬೈ ವ್ಯಕ್ತಿ!

ಪಿಟಿಐ
Published 26 ಏಪ್ರಿಲ್ 2020, 7:47 IST
Last Updated 26 ಏಪ್ರಿಲ್ 2020, 7:47 IST
   

ಮುಂಬೈ: ಈ ಲಾಕ್‌ಡೌನ್ ವೇಳೆ ಮುಂಬೈನಿಂದ ಅಲಹಾಬಾದ್‌ಗೆ (ಪ್ರಯಾಗ್‌ರಾಜ್) ಪ್ರಯಾಣಿಸಲು ಏನು ಮಾಡಬೇಕು? 25 ಟನ್ ಈರುಳ್ಳಿ ಖರೀದಿಸಿ ಅದನ್ನು ಟ್ರಕ್‌ಗೆ ಲೋಡ್ ಮಾಡಿ ರಸ್ತೆಗಿಳಿಯಬೇಕು! ಇದು ಸಾಧ್ಯವೇ?

ಇದು ಸಾಧ್ಯವೆಂದು ತೋರಿಸಿಕೊಟ್ಟಿದ್ದಾರೆ ಮುಂಬೈನಲ್ಲಿರುವ ಅಲಹಾಬಾದ್‌ನ ವ್ಯಕ್ತಿ ಪ್ರೇಮ್ ಮೂರ್ತಿ ಪಾಂಡೆ. ಮುಂಬೈ ವಿಮಾನ ನಿಲ್ದಾಣದಲ್ಲಿ ಕೆಲಸ ಮಾಡುತ್ತಿರುವ ಇವರು ಲಾಕ್‌ಡೌನ್ ಮೊದಲ ಅವಧಿಯಲ್ಲಿ ತಾವು ವಾಸವಿರುವ ಪೂರ್ವ ಅಂಧೇರಿಯ ಆಜಾದ್ ನಗರದಲ್ಲೇ ಇದ್ದರು. ಆದರೆ, ಲಾಕ್‌ಡೌನ್ ವಿಸ್ತರಣೆಯಾದ ಬಳಿಕ ಇನ್ನು ಕಾದರಾಗದು ಎಂದು,ಊರಿಗೆ ಮರಳಲು ತರಕಾರಿ ವ್ಯಾಪಾರಿಯಾಗುವ ಯೋಜನೆ ಮಾಡಿದ್ದಾರೆ. ಅದನ್ನು ಕಾರ್ಯರೂಪಕ್ಕಿಳಿಸಿ ಯಶಸ್ಸನ್ನೂ ಗಳಿಸಿದ್ದಾರೆ.

‘ವಾಸ್ತವದಲ್ಲಿ ಆಜಾದ್‌ ನಗರ ತುಂಬಾ ಇಕ್ಕಟ್ಟಿನ ಪ್ರದೇಶ. ಕೊರೊನಾ ವೈರಸ್ ಹರಡುವ ಅಪಾಯ ಅಲ್ಲಿ ಹೆಚ್ಚಿದೆ’ ಎಂದು ಹೇಳಿದ್ದಾರೆ ಪ್ರೇಮ್ ಮೂರ್ತಿ. ಹೀಗಾಗಿಯೇ ಅವರು ಅಲ್ಲಿಂದ ಊರಿಗೆ ತೆರಳಲು ಬಯಸಿದ್ದಾರೆ. ಆದರೆ, ಬಸ್, ರೈಲು ಸೇವೆ ಸ್ಥಗಿತವಾದ್ದರಿಂದ ಹೇಗೆ ಊರಿಗೆ ತೆರಳುವುದು ಎಂದು ಯೋಚಿಸಿದ್ದಾರೆ.

ADVERTISEMENT

ಈ ವೇಳೆ, ಹಣ್ಣು ಹಾಗೂ ತರಕಾರಿಯಂತಹ ಅಗತ್ಯ ಸರಕುಗಳ ಸಾಗಾಟಕ್ಕೆ ಸರ್ಕಾರ ಅನುಮತಿ ನೀಡಿರುವುದು ತಿಳಿಯಿತು. ಇದೊಂದೇ ದಾರಿ ಉಳಿದಿರುವುದು ಎಂದು ಯೋಚಿಸಿದ ಅವರು 1,300 ಕೆ.ಜಿ ಕಲ್ಲಂಗಡಿ ಖರೀದಿಸಲು ನಿರ್ಧರಿಸಿದ್ದಾರೆ.

ಏಪ್ರಿಲ್ 17ರಂದು ನಾಶಿಕ್ ಸಮೀಪದ ಪಿಂಪಾಲ್‌ ಗಾಂವ್‌ನಿಂದ ಟ್ರಕ್ಕೊಂದನ್ನು ಬಾಡಡಿಗೆಗೆ ಪಡೆದ ಅವರು ₹ 10 ಸಾವಿರ ಮೊತ್ತದ ಕಲ್ಲಂಗಡಿ ಖರೀದಿಸಿದ್ದಾರೆ. ಬಳಿಕ ಅದನ್ನು ಮುಂಬೈಗೆ ಕಳುಹಿಸಿದ್ದಾರೆ. ಈ ಕಲ್ಲಂಗಡಿ ಹಣ್ಣುಗಳ ಮಾರಾಟಕ್ಕೆ ಮುಂಬೈಯಲ್ಲಿ ಮೊದಲೇ ಖರೀದಿದಾರರೊಬ್ಬರ ಜತೆ ವ್ಯವಹಾರ ಕುದುರಿಸಿಕೊಂಡಿದ್ದರು. ಈ ವೇಳೆ, ಪಿಂಪಾಲ್‌ ಗಾಂವ್‌ ಈರುಳ್ಳಿ ವ್ಯಾಪಾರಕ್ಕೆ ಒಳ್ಳೆಯ ಪ್ರದೇಶ ಎಂಬುದು ಅವರಿಗೆ ತಿಳಿಯಿತು.

ಬಳಿಕ ಅವರು, ಕಿಲೋ ಒಂದಕ್ಕೆ ₹9.10ರಂತೆ ಒಟ್ಟು ₹2.32 ಲಕ್ಷ ಮೊತ್ತದಲ್ಲಿ 25,520 ಕೆ.ಜಿ ಈರುಳ್ಳಿ ಖರೀದಿಸಿದ್ದಾರೆ. ₹77,500ಕ್ಕೆ ಟ್ರಕ್ಕೊಂದನ್ನು ಬಾಡಿಗೆ ಪಡೆದು ಏಪ್ರಿಲ್ 20ರಂದು 1,200 ಕಿ.ಮೀ ದೂರದ ಅಲಹಾಬಾದ್‌ಗೆ ಪ್ರಯಾಣ ಆರಂಭಿಸಿದ್ದಾರೆ.

ಏಪ್ರಿಲ್ 23ರಂದು ಅವರು ಅಲಹಾಬಾದ್‌ನ ಹೊರವಲಯದಲ್ಲಿರುವ ಮುಂದೇರಾ ಸಗಟು ಮಾರುಕಟ್ಟೆ ತಲುಪಿದ್ದಾರೆ. ದುರದೃಷ್ಟವಶಾತ್, ಅಷ್ಟೊಂದು ಈರುಳ್ಳಿ ಖರೀದಿಸುವವರು ಯಾರೂ ಪ್ರೇಮ್ ಮೂರ್ತಿಗೆ ಅಲ್ಲಿ ಸಿಗಲಿಲ್ಲ. ಹೀಗಾಗಿ ಅವರು ಟ್ರಕ್ಕನ್ನು ಅಲ್ಲಿಂದ ಕೆಲವೇ ಕಿ.ಮೀ ದೂರದಲ್ಲಿರುವ ಕೊತ್ವಾ ಮುಬಾರಕ್‌ಪುರ ಗ್ರಾಮಕ್ಕೆ ಒಯ್ದಿದ್ದಾರೆ. ಅಲ್ಲಿ ಈರುಳ್ಳಿಯನ್ನು ಅನ್‌ಲೋಡ್ ಮಾಡಿಸಿದ್ದಾರೆ.

‘ಪ್ರೇಮ್ ಮೂರ್ತಿ ಪಾಂಡೆ ಅವರು ಧೂಮನ್‌ಗಂಜ್ ಪೊಲೀಸ್ ಠಾಣೆಗೆ ಹಾಜರಾಗಿ ವಿಷಯ ತಿಳಿಸಿದ್ದಾರೆ. ಅವರನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದೆ. ಸದ್ಯ ಅವರನ್ನು ಮನೆಯಲ್ಲೇ ಕ್ವಾರಂಟೈನ್‌ನಲ್ಲಿರುವಂತೆ ಸೂಚಿಸಲಾಗಿದೆ’ ಎಂದು ಟಿಪಿ ನಗರ ಪೊಲೀಸ್ ಪೋಸ್ಟ್‌ನ ಉಸ್ತುವಾರಿ ಅರವಿಂದ್ ಕುಮಾರ್ ಸಿಂಗ್ ತಿಳಿಸಿದ್ದಾರೆ.

ಈಗಲೂ, ಈರುಳ್ಳಿ ಉತ್ತಮ ಕ್ರಯಕ್ಕೆ ಮಾರಾಟವಾಗಬಹುದು ಎಂಬ ಆಶಾವಾದದಲ್ಲಿದ್ದಾರೆ ಪಾಂಡೆ.

ಸದ್ಯ ಮಾರುಕಟ್ಟೆಯಲ್ಲಿ ಮಧ್ಯ ಪ್ರದೇಶದ ಸಾಗರ್‌ ಎಂಬಲ್ಲಿಂದ ಬಂದ ಈರುಳ್ಳಿ ಭರ್ತಿಯಾಗಿದೆ. ಅದು ಮಾರಾಟವಾದ ಬಳಿಕ ನಾಶಿಕ್‌ನಿಂದ ತಂದಿರುವ ಈರುಳ್ಳಿಗೆ ಮಾರುಕಟ್ಟೆ ದೊರೆಯಬಹುದು ಎಂದು ಪಾಂಡೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.