ADVERTISEMENT

ಮುಂಬೈ ಅಗ್ನಿ ದುರಂತದಲ್ಲಿ ಸಾವು ನೋವು ತಪ್ಪಿಸಿದ ‘ರೋಬೋಟ್‌’

ಒಳ್ಳೆ ಸುದ್ದಿ

ಏಜೆನ್ಸೀಸ್
Published 23 ಜುಲೈ 2019, 8:44 IST
Last Updated 23 ಜುಲೈ 2019, 8:44 IST
   

ಮಹಾರಾಷ್ಟ್ರ: ಮುಂಬೈನ ಪಶ್ಚಿಮ ಬಾಂದ್ರಾದಲ್ಲಿ ಇತ್ತೀಚೆಗೆ ನಡೆದ ಅಗ್ನಿ ದುರಂತದಲ್ಲಿ ಬೆಂಕಿಯನ್ನು ನಿಯಂತ್ರಿಸಿ ಪ್ರಾಣಹಾನಿಯಾಗದಂತೆ ಯಶಸ್ವಿ ಕಾರ್ಯಾಚರಣೆ ನಡೆಸಲು ‘ರೋಬೋಟ್‌’ ಪ್ರಮುಖ ಪಾತ್ರವಹಿಸಿದೆ.

ಹೌದು, ಈ ರೋಬೋಟ್‌ ರಿಮೋಟ್ ಕಂಟ್ರೋಲ್‌ ಮೂಲಕ ಕೆಲಸ ಮಾಡಿದೆ. ದಟ್ಟ ಹೊಗೆ ಆವರಿಸಿದ ಕಟ್ಟಡದೊಳಗೆ ನುಗ್ಗಿ ಸಂಕಷ್ಟಕ್ಕೆ ಸಿಲುಕಿರುವವರ ಚಿತ್ರಗಳನ್ನು ಕ್ಯಾಮೆರಾದಲ್ಲಿ ದಾಖಲಿಸಿಕೊಂಡು ಕೂಡಲೇ ಅಧಿಕಾರಿಗಳಿಗೆ ರವಾನಿಸಿತು. ಇಂತಹ ಚಿತ್ರಗಳನ್ನು ಆಧರಿಸಿ ಅಗ್ನಿಶಾಮಕ ದಳದ ಸಿಬ್ಬಂದಿ ರಕ್ಷಣಾ ಕಾರ್ಯಾಚರಣೆ ನಡೆಸಿದ್ದರು.

ಇದರ ಬೆಲೆ ₹88 ಲಕ್ಷ. ಬೃಹತ್‌ ಕಟ್ಟಡ, ಗೋದಾಮುಗಳಲ್ಲಿ ಅಗ್ನಿ ಅವಘಡ ಸಂಭವಿಸಿದಾಗ ಧೂಳು, ದಟ್ಟ ಹೊಗೆ ಆವರಿಸಿದ ಸಂದರ್ಭದಲ್ಲಿ ಅವಶೇಷಗಳಡಿಯಲ್ಲಿ ಸಿಲುಕಿರುವವರನ್ನು ಪತ್ತೆ ಹಚ್ಚಲು ಹಾಗೂ ತುರ್ತಾಗಿ ಬೆಂಕಿ ನಂದಿಸಲು ಅಗ್ನಿಶಾಮಕ ದಳದ ಸಿಬ್ಬಂದಿಗೆ ಸಹಾಯ ಮಾಡುತ್ತದೆ.

ADVERTISEMENT

ಕಾರ್ಯಾಚರಣೆ ಹೇಗೆ?
ಅಧುನಿಕ ತಂತ್ರಜ್ಞಾನ ಹೊಂದಿರುವ ಈ ರೋಬೋಟ್‌ನ ಬ್ಯಾಟರಿಯನ್ನು ಒಮ್ಮೆ ಚಾರ್ಜ್‌ ಮಾಡಿದರೆ ಎಂಟು ಗಂಟೆಗಳ ಕಾಲ ಕಾರ್ಯಾಚರಣೆ ನಡೆಸುತ್ತದೆ. ಜತೆಗೆ, ಪ್ರತಿ ನಿಮಿಷಕ್ಕೆ 3000 ಲೀಟರ್‌ ನೀರನ್ನು ಚಿಮ್ಮುವ ಸಾಮರ್ಥ್ಯ ಹೊಂದಿದೆ.

ಬೃಹತ್‌ ಅಗ್ನಿಶಾಮಕ ವಾಹನಗಳು ತಲುಪಲು ಅಡೆತಡೆಗಳು ಇರುವ ಪ್ರದೇಶಗಳು ಹಾಗೂ ಎತ್ತರದ ಬಹುಮಡಿ ಕಟ್ಟಡಗಳಲ್ಲಿ ಸಂಭವಿಸುವ ಅಗ್ನಿ ಅವಘಡಗಳನ್ನು ನಿಯಂತ್ರಿಸಲು ಈ ಯಂತ್ರಗಳನ್ನು ಹೆಚ್ಚಾಗಿ ಬಳಸಲಾಗುತ್ತದೆ.

ಅಗ್ನಿಶಾಮಕ ದಳದ ಹಿರಿಯ ಅಧಿಕಾರಿ ಪ್ರಭಾತ್‌ ರಹಂಗ್‌ಡೇಲ್‌ ಮಾತನಾಡಿ, ‘ದುರಂತ ಸಂಭವಿಸಿದ ಕೆಲವು ಸಂದರ್ಭಗಳಲ್ಲಿ ದಟ್ಟ ಹೊಗೆ, ಗಾಳಿಯ(ಆಮ್ಲಜನಕ) ಕೊರತೆಯಿಂದ ಸಿಬಂದಿಯ ಕಣ್ಣಿಗೆ ಏನೂ ಕಾಣಿಸದೆ ಜೀವಕ್ಕೆ ಆಪತ್ತು ಎದುರಾಗುತ್ತದೆ. ಅಂತಹ ಪರಿಸ್ಥಿತಿಗಳಲ್ಲಿ ರೋಬೋಟ್‌ ಸಿಬ್ಬಂದಿಗೆ ನೆರವಾಗುತ್ತದೆ. ಸದ್ಯ ನಮ್ಮಲ್ಲಿ ಒಂದೇ ಒಂದು ರೋಬೋಟ್‌ ಲಭ್ಯವಿದೆ’ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.