ADVERTISEMENT

₹400 ಕೋಟಿ ಮೌಲ್ಯದ ನೋಟುಗಳಿದ್ದ 2 ಕಂಟೇನರ್‌ಗಳ ನಾಪತ್ತೆ ಪ್ರಕರಣ: ಆರು ಮಂದಿ ಬಂಧನ

ಪಿಟಿಐ
Published 25 ಜನವರಿ 2026, 16:01 IST
Last Updated 25 ಜನವರಿ 2026, 16:01 IST
<div class="paragraphs"><p>ಬಂಧನ </p></div>

ಬಂಧನ

   

(ಸಾಂದರ್ಭಿಕ ಚಿತ್ರ)

ಮುಂಬೈ: ಸುಮಾರು ₹400 ಕೋಟಿ ಮೌಲ್ಯದ ₹2 ಸಾವಿರ ಮುಖಬೆಲೆಯ ನೋಟುಗಳ ಸಾಗಣೆ ಹಾಗೂ ವ್ಯಕ್ತಿಯ ಅಪಹರಣ ಆರೋಪಕ್ಕೆ ಸಂಬಂಧಿಸಿದ ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡವು (ಎಸ್‌ಐಟಿ) ಈವರೆಗೆ ಆರು ಮಂದಿಯನ್ನು ಬಂಧಿಸಿದೆ. 

ADVERTISEMENT

ಜಯೇಶ್‌ ಕದಂ, ವಿಶಾಲ್‌ ನಾಯ್ಡು, ಸುನಿಲ್‌ ಧುಮಾಲ್‌, ವಿರಾಟ್‌ ಗಾಂಧಿ, ಜನಾರ್ದನ್‌ ದೈಗುಡೆ ಮತ್ತು ಸಯ್ಯದ್‌ ಅಜರ್‌ ಬಂಧಿತರು.

ಮಹಾರಾಷ್ಟ್ರ–ಕರ್ನಾಟಕ ಗಡಿಯ ಬೆಳಗಾವಿ ಜಿಲ್ಲೆಯ ಖಾನಾಪುರ ವ್ಯಾಪ್ತಿಯ ಅರಣ್ಯ ಮತ್ತು ಅಪಘಾತ ವಲಯವಾದ ಚೋರ್ಲಾ ಘಾಟ್‌ ಪ್ರದೇಶದಲ್ಲಿ ಅಪಾರ ಪ್ರಮಾಣದ ಹಣವನ್ನು ಸಾಗಿಸುತ್ತಿದ್ದ ಎರಡು ಕಂಟೇನರ್‌ಗಳು 2025ರ ಅಕ್ಟೋಬರ್‌ 16ರಂದು ನಾಪತ್ತೆಯಾಗಿದ್ದವು.

ವರದಿಗಳ ಪ್ರಕಾರ, ಈ ಹಣವನ್ನು ಕರ್ನಾಟಕದಿಂದ ಗುಜರಾತ್‌ಗೆ ಸಾಗಿಸಿ, ನಂತರ ಬೇರೆ ಬೇರೆ ಮುಖಬೆಲೆಯ ನೋಟುಗಳಾಗಿ ಪರಿವರ್ತಿಸಿ ಮಹಾರಾಷ್ಟ್ರಕ್ಕೆ ಸಾಗಿಸಲು ಉದ್ದೇಶಿಸಲಾಗಿತ್ತು.

‘ಕಂಟೇನರ್‌ ದರೋಡೆಗೆ ಕಿಶೋರ್‌ ಶೇಠ್‌ ಯೋಜನೆ ರೂಪಿಸಿದ್ದರು. ಅವರ ಸಹಚರರು ನನಗೆ ಬಂದೂಕು ತೋರಿಸಿ ಅಪಹರಿಸಿದ್ದರು. ಒಂದು ತಿಂಗಳಿಗೂ ಹೆಚ್ಚು ಕಾಲ ವಶದಲ್ಲಿಟ್ಟುಕೊಂಡು ₹400 ಕೋಟಿ ನೀಡುವಂತೆ ಒತ್ತಾಯಿಸಿ ದೈಹಿಕ ಮತ್ತು ಮಾನಸಿಕವಾಗಿ ಹಿಂಸೆ ನೀಡಿದ್ದರು. ಕೊನೆಗೂ ಅಲ್ಲಿಂದ ತಪ್ಪಿಸಿಕೊಂಡು ಬಂದೆ’ ಎಂದು ಇಗತಪುರಿ ನಿವಾಸಿ ಸಂದೀಪ್‌ ಪಾಟೀಲ್‌ ಅವರು ನಾಸಿಕ್‌ ಗ್ರಾಮೀಣ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.

‘ಕರ್ನಾಟಕ ಮತ್ತು ಗೋವಾ ಪೊಲೀಸರ ಸಮನ್ವಯದೊಂದಿಗೆ ತನಿಖೆ ನಡೆಸಲಾಗುತ್ತಿದೆ. ಠಾಣೆಯ ಬಿಲ್ಡರ್ ಆಗಿರುವ ವಿರಾಟ್‌ ಗಾಂಧಿ ಅಹಮದಾಬಾದ್‌ ಮೂಲದ ಹವಾಲಾ ಆಪರೇಟರ್‌ ಆಗಿದ್ದಾರೆ’ ಎಂದು ನಾಸಿಕ್‌ ಗ್ರಾಮೀಣ ಪೊಲೀಸ್ ವರಿಷ್ಠಾಧಿಕಾರಿ ಬಾಳಾಸಾಹೇಬ್‌ ಪಾಟೀಲ್‌ ತಿಳಿಸಿದ್ದಾರೆ.

ಎಫ್‌ಐಆರ್‌ನಲ್ಲಿ ಠಾಣೆಯ ಬಿಲ್ಡರ್‌ ಒಬ್ಬರ ಹೆಸರಿದ್ದು, ಕಂಟೇನರ್‌ಗಳು ಉದ್ದೇಶಿತ ಸ್ಥಳಗಳಿಗೆ ತಲುಪಿದ್ದರೆ ಆ ಬಿಲ್ಡರ್‌ ಪ್ರಮುಖ ಫಲಾನುಭವಿಯಾಗುತ್ತಿದ್ದರು ಎನ್ನಲಾಗಿದೆ.

₹2 ಸಾವಿರ ಮುಖಬೆಲೆಯ ನೋಟುಗಳನ್ನು 2023ರ ಮೇ ತಿಂಗಳಿನಲ್ಲಿ ಚಲಾವಣೆಯಿಂದ ಹಿಂಪಡೆಯಲಾಗಿತ್ತು. ಆದರೂ, ಅವು ಕಾನೂನುಬದ್ಧ ಚಲಾವಣೆಯ ಸ್ಥಾನಮಾನ ಹೊಂದಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.