ADVERTISEMENT

ಮುರ್ಶಿದಾಬಾದ್‌ ಹಿಂಸಾಚಾರದ ವೇಳೆ ಲೈಂಗಿಕ ಕಿರುಕುಳ: ತನಿಖಾ ಸಮಿತಿ ರಚಿಸಿದ NCW

ಪಿಟಿಐ
Published 16 ಏಪ್ರಿಲ್ 2025, 10:35 IST
Last Updated 16 ಏಪ್ರಿಲ್ 2025, 10:35 IST
   

ನವದೆಹಲಿ: ಪಶ್ಚಿಮ ಬಂಗಾಳದ ಮುರ್ಶಿದಾಬಾದ್‌ ಜಿಲ್ಲೆಯಲ್ಲಿ ಇತ್ತೀಚೆಗೆ ನಡೆದ ಹಿಂಸಾಚಾರದ ವೇಳೆ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಲಾಗಿದೆ ಎಂಬ ಆರೋಪ ಕೇಳಿ ಬಂದಿದ್ದು, ಈ ಸಂಬಂಧ ತನಿಖೆ ಕೈಗೊಳ್ಳಲು ರಾಷ್ಟ್ರೀಯ ಮಹಿಳಾ ಆಯೋಗ (ಎನ್‌ಸಿಡಬ್ಲ್ಯೂ) ತನಿಖಾ ಸಮಿತಿಯನ್ನು ರಚಿಸಿದೆ.

ಎನ್‌ಸಿಡಬ್ಲ್ಯೂ ಅಧ್ಯಕ್ಷೆ ವಿಜಯಾ ಕಿಶೋರ್ ರಹತ್ಕರ್ ಈ ಘಟನೆ ಸಂಬಂಧ ಸ್ವಯಂಪ್ರೇರಿತವಾಗಿ ದೂರು ದಾಖಲಿಸಿಕೊಂಡಿದ್ದಾರೆ. ಪರಿಸ್ಥಿತಿಯನ್ನು ಅವಲೋಕಿಸಲು ಮತ್ತು ಸಂತ್ರಸ್ತರನ್ನು ಭೇಟಿ ಮಾಡಿ ಘಟನೆ ಬಗ್ಗೆ ಮಾಹಿತಿ ಪಡೆಯಲು ಪಶ್ಚಿಮ ಬಂಗಾಳಕ್ಕೆ ಭೇಟಿ ನೀಡಲಿದ್ದಾರೆ ಎಂದು ಎನ್‌ಸಿಡಬ್ಲ್ಯೂ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದೆ.

ವಕ್ಫ್ (ತಿದ್ದುಪಡಿ) ಮಸೂದೆಯನ್ನು ವಿರೋಧಿಸಿ ಮುರ್ಶಿದಾಬಾದ್‌ನ ಕೆಲವು ಪ್ರದೇಶಗಳಲ್ಲಿ ನಡೆಸಲಾದ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿತ್ತು. ಈ ವೇಳೆ ಧುಲಿಯನ್‌ನ ಮಂದಿರಪಾರ ಪ್ರದೇಶದಲ್ಲಿ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಲಾಗಿದೆ ಮತ್ತು ಮಹಿಳೆಯರು ತಮ್ಮ ಮನೆಗಳನ್ನು ತೊರೆದು ಬೇರೆಡೆ ಸ್ಥಳಾಂತರಗೊಂಡಿದ್ದಾರೆ ಎನ್ನಲಾಗಿದೆ. ಈ ನಿಟ್ಟಿನಲ್ಲಿ ಸೂಕ್ತ ತನಿಖೆ ಕೈಗೊಳ್ಳುವಂತೆ ತನಿಖಾ ಸಮಿತಿಯನ್ನು ಎನ್‌ಸಿಡಬ್ಲ್ಯೂ ರಚಿಸಿದೆ ಎಂದು ಹೇಳಿಕೆ ತಿಳಿಸಿದೆ.

ADVERTISEMENT

ಮುರ್ಶಿದಾಬಾದ್‌ನಿಂದ ವರದಿಯಾಗುತ್ತಿರುವ ಸುದ್ದಿಗಳಿಂದ ಆಯೋಗವು ವಿಚಲಿತವಾಗಿದೆ. ಮಹಿಳೆಯರು ಹಿಂಸಾಚಾರಕ್ಕೆ ಒಳಗಾಗಿದ್ದಲ್ಲದೇ, ತಮ್ಮ ಮನೆಗಳನ್ನು ಬಿಟ್ಟು ಓಡಿ ಹೋಗಿದ್ದಾರೆ ಎಂದು ರಹತ್ಕರ್ ಕಳವಳ ವ್ಯಕ್ತಪಡಿಸಿದ್ದಾರೆ.

ಸಮಿತಿಯು ಸಮಗ್ರ ತನಿಖೆಯನ್ನು ಪಡೆದುಕೊಳ್ಳಲಿದ್ದು, ಭವಿಷ್ಯದಲ್ಲಿ ಇಂತಹ ದೌರ್ಜನ್ಯಗಳನ್ನು ತಡೆಗಟ್ಟಲು ಕ್ರಮಗಳನ್ನು ಶಿಫಾರಸು ಮಾಡುತ್ತದೆ. ಘಟನಾ ಸ್ಥಳಗಳಿಗೆ ಸಮಿತಿ ಭೇಟಿ ನೀಡಲಿದ್ದು, ಸಂತ್ರಸ್ತರಿಂದ ಮಾಹಿತಿ ಪಡೆಯಲಿದೆ ಎಂದು ಆಯೋಗ ತಿಳಿಸಿದೆ.

ಪಶ್ಚಿಮ ಬಂಗಾಳಕ್ಕೆ ಏಪ್ರಿಲ್‌ 17ರಂದು ಭೇಟಿ ನೀಡಲಿರುವ ರಾಷ್ಟ್ರೀಯ ಮಹಿಳಾ ಆಯೋಗ, ಘಟನಾ ಸ್ಥಳಗಳಿಗೆ ಏಪ್ರಿಲ್‌, 18 ಮತ್ತು 19ರಂದು ತಲುಪುವ ನಿರೀಕ್ಷೆ ಇದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.