ಪಶ್ಚಿಮ ಬಂಗಾಳ ಪೊಲೀಸ್ ಪ್ರಧಾನ ಕಚೇರಿ ಮುಂದೆ ಸಂತ್ರಸ್ತರ ಪ್ರತಿಭಟನೆ
– ಪಿಟಿಐ ಚಿತ್ರ
ಕೋಲ್ಕತ್ತ: ಮುರ್ಶಿದಾಬಾದ್ ಗಲಭೆಯ ತನಿಖೆಗೆ ಪಶ್ಚಿಮ ಬಂಗಾಳ ಪೊಲೀಸರು 9 ಮಂದಿಯ ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸಿದ್ದಾರೆ.
ಸಮ್ಸೇರ್‌ಗಂಜ್ ಸೇರಿದಂತೆ ಜಗ್ನಿಪುರ ಪೊಲೀಸ್ ಜಿಲ್ಲೆಯಲ್ಲಿ ನಡೆದ ಹಿಂಸಾಚಾರದ ಬಗ್ಗೆ ಈ ತಂಡ ತನಿಖೆ ನಡೆಸಲಿದೆ.
ಅಧಿಕಾರಿಗಳು ಇಂದು (ಏಪ್ರಿಲ್ 17) ಅಪರಾಹ್ನ 12 ಗಂಟೆಗೆ ಕೆಲಸಕ್ಕೆ ವರದಿ ಮಾಡಬೇಕು ಎಂದು ಅಧಿಕೃತ ಸುತ್ತೋಲೆಯಲ್ಲಿ ಹೇಳಲಾಗಿದೆ.
ಮುರ್ಶಿದಾಬಾದ್‌ನಲ್ಲಿ ನಡೆದ ಕೋಮುಗಲಭೆ ಪೂರ್ವಯೋಜಿತವಾಗಿದ್ದು, ಕಿಡಿಗೇಡಿಗಳು ಬಾಂಗ್ಲಾದೇಶದದಿಂದ ನುಸುಳಲು ಬಿಎಸ್ಎಫ್, ಕೇಂದ್ರದ ಸಂಸ್ಥೆಗಳು ಮತ್ತು ಬಿಜೆಪಿಯ ಕೆಲವರು ನೆರವಾಗಿದ್ದು, ಉದ್ವಿಗ್ನ ಪರಿಸ್ಥಿತಿ ಉಂಟಾಗಲು ಕಾರಣರಾಗಿದ್ದಾರೆ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಆರೋಪಿಸಿದ ಬೆನ್ನಲ್ಲೇ ಎಸ್‌ಐಟಿ ರಚನೆಯಾಗಿದೆ.
ಏಪ್ರಿಲ್ 11 ಮತ್ತು 12 ರಂದು ಮುರ್ಶಿದಾಬಾದ್‌ನ ಸುತಿ, ಧುಲಿಯನ್ ಮತ್ತು ಜಂಗೀಪುರ ಸೇರಿದಂತೆ ಕೆಲವು ಪ್ರದೇಶಗಳಲ್ಲಿ ತಿದ್ದುಪಡಿ ಮಾಡಿದ ವಕ್ಫ್ ಕಾಯ್ದೆಯ ವಿರುದ್ಧದ ಪ್ರತಿಭಟನೆಗಳ ಸಂದರ್ಭದಲ್ಲಿ ಹಿಂಸಾಚಾರ ಭುಗಿಲೆದ್ದಿತ್ತು. ಹಿಂಸಾಚಾರದಲ್ಲಿ ಕನಿಷ್ಠ ಮೂವರು ಸಾವನ್ನಪ್ಪಿದ್ದು, ಹಲವು ಮಂದಿ ಗಾಯಗೊಂಡಿದ್ದಾರೆ.
ನೂರಾರು ಜನರು ನಿರಾಶ್ರಿತರಾಗಿದ್ದು, ಭಯಭೀತ ಗ್ರಾಮಸ್ಥರು ಊರು ತೊರೆದಿದ್ದರು. ಪರಿಸ್ಥಿತಿ ನಿಯಂತ್ರಣಕ್ಕೆ ಸ್ಥಳದಲ್ಲಿ ಕೇಂದ್ರ ಭದ್ರತಾ ಪಡೆಗಳನ್ನು ನಿಯೋಜಿಸಲಾಗಿದೆ. ಇಂಟರ್‌ನೆಟ್ ಸ್ಥಗಿತಗೊಳಿಸಲಾಗಿತ್ತು. ಘಟನೆ ಸಂಬಂಧ ಈವರೆಗೂ 200ಕ್ಕೂ ಅಧಿಕ ಮಂದಿಯನ್ನು ಬಂಧಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.