ADVERTISEMENT

ಮಲಪ್ಪುರಂ: ಆರ್‌ಎಸ್‌ಎಸ್‌ ಕಾರ್ಯಕ್ರಮದಲ್ಲಿ ಭಾಗಿ, ಖಾದರ್‌ಗೆ ಐಯುಎಂಎಲ್ ಎಚ್ಚರಿಕೆ

ಪಿಟಿಐ
Published 26 ಜೂನ್ 2022, 15:56 IST
Last Updated 26 ಜೂನ್ 2022, 15:56 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಮಲಪ್ಪುರಂ: ಕೋಯಿಕ್ಕೋಡ್‌ನಲ್ಲಿ ಇತ್ತೀಚೆಗೆ ಆರ್‌ಎಸ್‌ಎಸ್‌ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಪಕ್ಷದ ಹಿರಿಯ ಮುಖಂಡ ಹಾಗೂ ಮಾಜಿ ಶಾಸಕ ಕೆ.ಎನ್‌.ಎ.ಖಾದರ್‌ ಅವರಿಗೆ ಇಂಡಿಯನ್‌ ಯೂನಿಯನ್‌ ಮುಸ್ಲಿಂ ಲೀಗ್‌ (ಐಯುಎಂಎಲ್‌) ಭಾನುವಾರ ಎಚ್ಚರಿಕೆ ನೀಡಿದೆ.

‘ಖಾದರ್‌ ಅವರು ಆರ್‌ಎಸ್‌ಎಸ್‌ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಕ್ಕೆ ಸಂಬಂಧಿಸಿ ಅವರು ನೀಡಿದ ವಿವರಣೆ ಕುರಿತು ಪಕ್ಷದ ಸಭೆಯಲ್ಲಿ ಚರ್ಚಿಸಲಾಯಿತು. ಪಕ್ಷದ ಪರಂಪರೆಯ ವಿರುದ್ಧವಾಗಿ ನಡೆದುಕೊಂಡಿದ್ದಕ್ಕಾಗಿ ಖಾದರ್‌ ಅವರಿಗೆ ಎಚ್ಚರಿಕೆ ನೀಡುವ ನಿರ್ಧಾರವನ್ನು ಸಭೆಯಲ್ಲಿ ಕೈಗೊಳ್ಳಲಾಯಿತು’ ಎಂದು ಪಕ್ಷದ ಪ್ರಕಟಣೆ ತಿಳಿಸಿದೆ.

ಭಾಷಣ ಹಾಗೂ ಸಾರ್ವಜನಿಕವಾಗಿ ನೀಡುವ ಹೇಳಿಕೆಗಳ ಬಗ್ಗೆ ಹೆಚ್ಚು ಜಾಗರೂಕರಾಗಿರಬೇಕು. ಈ ವಿಷಯದಲ್ಲಿ ಪಕ್ಷದ ನೀತಿ–ನಿಯಮಗಳನ್ನು ಪಾಲಿಸುವಂತೆ ಅವರಿಗೆ ಸೂಚಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಕೋಯಿಕ್ಕೋಡ್‌ನಲ್ಲಿ ಇತ್ತೀಚೆಗೆ ಆರ್‌ಎಸ್‌ಎಸ್‌ ಆಯೋಜಿಸಿದ್ದ ‘ಸ್ನೇಹಬೋಧಿ’ ಎಂಬ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಖಾದರ್‌ ಅವರನ್ನು ಸನ್ಮಾನಿಸಲಾಗಿತ್ತು. ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ್ದ ಅವರು, ‘ಉತ್ತರ ಭಾರತದ ಅನೇಕ ದೇವಾಲಯಗಳಿಗೆ ನಾನು ಭೇಟಿ ನೀಡಿರುವೆ. ಆದರೆ, ಗುರುವಾಯೂರಿನ ಶ್ರೀಕೃಷ್ಣ ದೇವಸ್ಥಾನ ಪ್ರವೇಶಿಸುವುದು ಸಾಧ್ಯವಾಗಿಲ್ಲ. ಈ ದೇವಾಲಯವನ್ನು ಪ್ರವೇಶಿಸುವ ಅಪೇಕ್ಷೆ ಇದೆ’ ಎಂದು ಹೇಳಿದ್ದರು. ಇದರ ಬೆನ್ನಲ್ಲೇ, ಅವರಿಗೆ ಪಕ್ಷದಿಂದ ಎಚ್ಚರಿಕೆ ನೀಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.