ಲಖನೌ: ಬಹುಪತ್ನಿತ್ವಕ್ಕೆ ಸಕಾರಣವಿದ್ದಲ್ಲಿ ಮತ್ತು ಎಲ್ಲಾ ಪತ್ನಿಯರನ್ನೂ ಸಮಾನವಾಗಿ ನೋಡಿಕೊಂಡಲ್ಲಿ ಮುಸ್ಲಿಮರು ಒಬ್ಬರಿಗಿಂತ ಹೆಚ್ಚು ಪತ್ನಿಯರನ್ನು ಹೊಂದಬಹುದು ಎಂದು ಅಲಹಾಬಾದ್ ಹೈಕೋರ್ಟ್ ಗುರುವಾರ ಹೇಳಿದೆ.
ಮೊದಲ ಮದುವೆಯನ್ನು ಗೋಪ್ಯವಾಗಿಟ್ಟು ತನ್ನನ್ನೂ ಮದುವೆಯಾಗಿ ವಂಚಿಸಲಾಗಿದೆ ಎಂದು ಮಹಿಳೆಯೊಬ್ಬರು ನೀಡಿದ ದೂರನ್ನು ಪರಿಗಣಿಸಿ ಉತ್ತರ ಪ್ರದೇಶದ ಮೊರಾದಾಬಾದ್‌ನ ಜಿಲ್ಲಾ ನ್ಯಾಯಾಲಯ ಸಮನ್ಸ್ ಜಾರಿಗೊಳಿಸಿದ್ದನ್ನು ಮತ್ತು ಆರೋಪಪಟ್ಟಿಯನ್ನು ರದ್ದುಪಡಿಸುವಂತೆ ಕೋರಿ ವ್ಯಕ್ತಿಯೊಬ್ಬರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾ. ಅರುಣ್ ಕುಮಾರ್ ಸಿಂಗ್ ದೇಶವಾಲ್ ಅವರಿದ್ದ ಪೀಠವು ಈ ಅಭಿಪ್ರಾಯ ಹೇಳಿದೆ.
‘ಮುಸ್ಲಿಂ ವೈಯಕ್ತಿಕ ಕಾನೂನಿಯಲ್ಲಿ ಕೆಲ ನಿರ್ದಿಷ್ಟ ಸಂದರ್ಭಗಳಲ್ಲಿ ಹಲವು ಪತ್ನಿಯರನ್ನು ಹೊಂದಲು ಇಸ್ಲಾಂ ಅನುವು ಮಾಡಿಕೊಟ್ಟಿದೆ. ಆದರೆ ಈ ಅವಕಾಶವನ್ನು ಹಲವರು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ. ಕುರಾನ್‌ಗೆ ವಿರುದ್ಧವಾಗಿ ನಡೆದುಕೊಳ್ಳುತ್ತಿದ್ದಾರೆ’ ಎಂದು ಪೀಠ ಕಳವಳ ವ್ಯಕ್ತಪಡಿಸಿದೆ.
‘ಸೂಕ್ತ ಕಾರಣಗಳಿಗಾಗಿ ಬಹುಪತ್ನಿತ್ವವನ್ನು ಕುರಾನ್ ಮಾನ್ಯ ಮಾಡಿದೆ. ಆದರೆ ಇಂದಿನ ಪುರುಷರು ತಮ್ಮ ಸ್ವಾರ್ಥಕ್ಕಾಗಿ ಅದನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಬಹುಪತ್ನಿತ್ವಕ್ಕೆ ಕುರಾನ್ ಅನುವು ಮಾಡಿಕೊಟ್ಟಿದ್ದಕ್ಕೂ ಇತಿಹಾಸವಿದೆ. ನೂರಾರು ವರ್ಷಗಳ ಹಿಂದೆ ಮದಿನಾದಲ್ಲಿ ಅರಬ್‌ನ ಬುಡಕಟ್ಟು ಸಮುದಾಯಗಳ ನಡುವೆ ನಡೆಯುತ್ತಿದ್ದ ಕಾಳಗದಲ್ಲಿ ಬಹಳಷ್ಟು ಪುರುಷರು ಮೃತಪಟ್ಟು ಬಹಳಷ್ಟು ಮಹಿಳೆಯರು ವಿಧವೆಯರಾಗುತ್ತಿದ್ದರು. ಇಂಥ ಸಂದರ್ಭದಲ್ಲಿ ಅನಾಥರಾದ ಮಕ್ಕಳು ಮತ್ತು ಅವರ ತಾಯಂದಿರಿಗೆ ಆಶ್ರಯ ಕಲ್ಪಿಸುವ ನಿಟ್ಟಿನಲ್ಲಿ ಕುರಾನ್ ಷರತ್ತುಬದ್ಧ ಅನುಮತಿ ನೀಡಿತ್ತು. ಜತೆಗೆ ಹೊಸ ಕುಟುಂಬ ಹಾಗೂ ಹಿಂದಿನ ಕುಟುಂಬವನ್ನು ಸಮಾನವಾಗಿ ನೋಡುವ ಷರತ್ತು ವಿಧಿಸಲಾಗಿತ್ತು’ ಎಂದು ವಿವರಿಸಿದೆ.
‘ಮುಸ್ಲಿಂ ವೈಯಕ್ತಿಕ ಕಾನೂನಿನಲ್ಲಿ ಪುರುಷರಿಗೆ ಎರಡನೇ ಮದುವೆಯಾಗಲು ವಿಶೇಷ ಹಕ್ಕುಗಳಿಲ್ಲ. ಬದಲಿಗೆ ಬಹುಪತ್ನಿಯರನ್ನು ಸಮಾನವಾಗಿ ಕಾಣುವಂತೆ ಷರತ್ತು ಇದೆ’ ಎಂದು ನ್ಯಾ. ಅರುಣ್ ಕುಮಾರ್ ಸಿಂಗ್ ದೇಶವಾಲ್ ಹೇಳಿದ್ದಾರೆ.
‘ಈ ಪ್ರಕರಣದಲ್ಲಿ ಎರಡನೇ ಪತ್ನಿಯ ಅರ್ಜಿಯಲ್ಲಿ ದೂರಿರುವಂತೆ, ಒಪ್ಪಂದದ ಮೇರೆಗೆ ವ್ಯಕ್ತಿ ಎರಡನೇ ಮದುವೆಯಾಗಿದ್ದಾರೆ. ಜತೆಗೆ ಇಬ್ಬರೂ ಮುಸಲ್ಮಾನರು. ಹೀಗಾಗಿ ಈ ವಿವಾಹವು ಕಾನೂನು ಬದ್ಧ’ ಎಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.