ADVERTISEMENT

ಗಲಭೆಯ ನೆಲದಲ್ಲಿ ಸೌಹಾರ್ದದ ಹೊಳಹು: ಹಿಂದೂ ದೇಗುಲಕ್ಕೆ ಮುಸ್ಲಿಂ ವ್ಯಕ್ತಿ ಅಧ್ಯಕ್ಷ

* ಮುಸ್ಲಿಂ ಮಹಿಳೆಯರ ಭೇಟಿ

ಪಿಟಿಐ
Published 23 ಜನವರಿ 2025, 13:18 IST
Last Updated 23 ಜನವರಿ 2025, 13:18 IST
<div class="paragraphs"><p>ದೇಗುಲ</p></div>

ದೇಗುಲ

   

(ಐಸ್ಟೋಕ್ - ಸಾಂಕೇತಿಕ ಚಿತ್ರ)

ಬಹರಾಇಚ್: ಕೋಮುಗಲಭೆ, ಸಂಘರ್ಷ, ದಾಳಿ ಘಟನೆಗಳಿಂದಲೇ ಸುದ್ದಿಗೆ ಗ್ರಾಸವಾಗುತ್ತಿದ್ದ ಉತ್ತರ ಪ್ರದೇಶದ ನೆಲದಿಂದ ಈಗ ಕೋಮುಸೌಹಾರ್ದದ ಸುದ್ದಿ ಹೊರಬಿದ್ದಿದೆ.

ADVERTISEMENT

ಅವರು ಮುಸ್ಲಿಂ. 18 ವರ್ಷಗಳಿಂದ ಹಿಂದೂ ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷರಾಗಿದ್ದಾರೆ. ದೇಗುಲದ ಆಸ್ತಿ ರಕ್ಷಿಸುವ ಕಾಯಕ ಕೈಗೊಂಡಿದ್ದಾರೆ. ಸೌಹಾರ್ದಕ್ಕೆ ಉದಾಹರಣೆ ಆಗಿದ್ದಾರೆ.

ಅವರ ಹೆಸರು ಮೊಹಮ್ಮದ್ ಅಲಿ. ಜಿಲ್ಲಾ ಕೇಂದ್ರದಿಂದ 27 ಕಿ.ಮೀ. ದೂರದ ಜೈತಂಪುರ್ ಬಜಾರ್‌ನಲ್ಲಿ ಇರುವ ವೃದ್ಧಿ ಮಾತೇಶ್ವರಿಮಠ ಗುರುದೇವಿ ದೇವಸ್ಥಾನದ ಆಡಳಿತ ಮಂಡಳಿಗೆ ಇವರೇ ಅಧ್ಯಕ್ಷರು. ಇತ್ತೀಚಿನ ದಿನಗಳಲ್ಲಿ ಸ್ಥಳೀಯ ಮುಸ್ಲಿಮರೂ ದೇಗುಲವನ್ನು ಪೂಜ್ಯ ಭಾವದಿಂದ ನೋಡುತ್ತಾರೆ. 

58 ವರ್ಷದ ವಯಸ್ಸಿನ ಅಲಿ ಮಸೀದಿಯಲ್ಲಿ ಪ್ರಾರ್ಥನೆ ಸಲ್ಲಿಸುತ್ತಾರೆ. ರೋಜಾ (ರಂಜಾನ್ ಮಾಸದ ಉಪವಾಸ) ಪಾಲಿಸುತ್ತಾರೆ. ಜೊತೆಗೆ ಗುರುದೇವಿ ಮಾತೆ ಮತ್ತು ಹನುಮಂತನನ್ನೂ ಆರಾಧಿಸುತ್ತಾರೆ.

‘ನನಗಾಗ ಏಳು ವರ್ಷ. ಲ್ಯುಕೋಡರ್ಮಾ (ಚರ್ಮದ) ಕಾಯಿಲೆ ಇತ್ತು. ಕಣ್ಣುಗಳು ಬಿಳಿ ಬಣ್ಣಕ್ಕೆ ತಿರುಗಿದ್ದವು. ಚಿಕಿತ್ಸೆ ಫಲ ನೀಡಿರಲಿಲ್ಲ. ನನ್ನ ತಾಯಿ ಆಗ ನನ್ನನ್ನು ಈ ದೇವಸ್ಥಾನಕ್ಕೆ ಕರೆತಂದಿದ್ದರು’ ಎಂದು ಅಲಿ ದೇಗುಲಕ್ಕೆ ತಮ್ಮ ಮೊದಲ ಭೇಟಿಯನ್ನು ಸ್ಮರಿಸುತ್ತಾರೆ.

‘ದೇಗುಲದಲ್ಲಿ ಪಡೆದಿದ್ದ ತೀರ್ಥವನ್ನು ತಾಯಿ ಮೈಗೆ ಲೇಪಿಸಿದ್ದರು. ಆ ನಂತರದ ದಿನಗಳಲ್ಲಿ ಗುಣಮುಖ ಆಗಿದ್ದೆ. ಇದು, ದೇವಸ್ಥಾನದ ಜೊತೆಗೆ ಶಾಶ್ವತ ಸಂಬಂಧ ಬೆಳೆಸಿತು. 2007ರಿಂದಲೂ ಈ ದೇಗುಲದ ಸೇವೆಯಲ್ಲಿ ನಾನು ಸಕ್ರಿಯನಾಗಿದ್ದೇನೆ’ ಎಂದು ತಿಳಿಸಿದರು.

ಅಲಿ ನಾಯಕತ್ವದಲ್ಲಿ ದೇಗುಲ ಪ್ರಗತಿ ಕಂಡಿದೆ. ನಿಧಿ, ದೇಣಿಗೆ ಸಂಗ್ರಹ ಏರಿದೆ. ‘ದೇಗುಲದ ಅಭಿವೃದ್ಧಿಗಾಗಿ ಈ ವರ್ಷ ₹2.7 ಲಕ್ಷ ಸಂಗ್ರಹವಾಗಿದೆ. ಸರ್ಕಾರ ಮತ್ತು ಸಾರ್ವಜನಿಕರ ನೆರವಿನ ₹30.40 ಲಕ್ಷ ಬಳಸಿ ಅಭಿವೃದ್ಧಿ ಕಾರ್ಯ ಕೈಗೊಳ್ಳಲಾಗಿದೆ’ ಎಂದು ಅಲಿ ಸುದ್ದಿಸಂಸ್ಥೆಗೆ ತಿಳಿಸಿದರು. 

ಹಿಂದೂಗಳಷ್ಟೇ ಅಲ್ಲದೆ, ಅನೇಕ ಮುಸ್ಲಿಂ ಮಹಿಳೆಯರು ಇಲ್ಲಿಗೆ ಭೇಟಿ ನೀಡುತ್ತಾರೆ. ದೇಗುಲ ಸೌಹಾರ್ದದ ಸಂಕೇತವಾಗಿ ಉಳಿದಿದೆ. ‘ಈ ದೇಗುಲವು ಧಾರ್ಮಿಕ ಪ್ರವಾಸೋದ್ಯಮದ ಭಾಗವಾಗಿದೆ’ ಎಂದು ಜಿಲ್ಲಾ ಪ್ರವಾಸೋದ್ಯಮ ಅಧಿಕಾರಿ ಶ್ರೀವಾತ್ಸವ ಅವರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.