ADVERTISEMENT

ಉತ್ತರ ಪ್ರದೇಶದಲ್ಲಿ ‘ಜಾತ್ಯತೀತ’ ಪಕ್ಷಗಳಿಗೆ ಕಳವಳ ಮೂಡಿಸಿದ ಒವೈಸಿ

ಪಿಟಿಐ
Published 26 ಸೆಪ್ಟೆಂಬರ್ 2021, 17:33 IST
Last Updated 26 ಸೆಪ್ಟೆಂಬರ್ 2021, 17:33 IST
ಅಸಾದುದ್ದೀನ್‌ ಒವೈಸಿ
ಅಸಾದುದ್ದೀನ್‌ ಒವೈಸಿ    

ಲಖನೌ: ಮುಂದಿನ ವರ್ಷ ನಡೆಯಲಿರುವ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಅಸದುದ್ದೀನ್‌ ಒವೈಸಿ ನೇತೃತ್ವದ ಆಲ್‌ ಇಂಡಿಯಾ ಮಜ್ಲಿಸ್‌–ಇ–ಇತ್ತೆಹಾದುಲ್ ಮುಸ್ಲಿಮೀನ್ ಪಕ್ಷ (ಎಐಎಂಐಎಂ) ಸ್ಪರ್ಧಿಸಲಿದೆ.ಅಲ್ಪಸಂಖ್ಯಾತರ ಮತಗಳ ಮೇಲೆ ಪ್ರಮುಖವಾಗಿ ಅವಲಂಬನೆ ಆಗಿರುವ ರಾಜಕೀಯ ಪಕ್ಷಗಳು ಇದರಿಂದಾಗಿ ಕಳವಳಕ್ಕೀಡಾಗಿವೆ ಎನ್ನಲಾಗಿದೆ.

ಉತ್ತರ ಪ್ರದೇಶದ 403 ವಿಧಾನಸಭಾ ಕ್ಷೇತ್ರಗಳ ಪೈಕಿ 100 ಕ್ಷೇತ್ರಗಳಲ್ಲಿಅಭ್ಯರ್ಥಿಗಳನ್ನು ಕಣಕ್ಕಿಳಿಸುವುದಾಗಿ ಎಐಎಂಐಎಂ ಈಗಾಗಲೇ ಘೋಷಿಸಿದೆ.

ಉತ್ತರ ಪ್ರದೇಶದ ಜಾಟವ, ಯಾದವ, ರಾಜ್‌ಭರ್‌, ನಿಶಾದ್‌ ಮುಂತಾದ ಸಣ್ಣ ಸಣ್ಣ ಸಮುದಾಯಗಳಿಗೆ ಅವೇ ಸಮುದಾಯಗಳ ನಾಯಕರು ಇದ್ದಾರೆ. ಆದರೆ ರಾಜ್ಯದಲ್ಲಿ ಶೇ 19ರಷ್ಟು ಜನಸಂಖ್ಯೆ ಇರುವ ಮುಸ್ಲಿಮರಲ್ಲಿ ಏಕೀಕೃತ ನಾಯಕತ್ವ ಇಲ್ಲ. ಸಮಾಜ
ವಾದಿ ಪಕ್ಷ, ಬಹುಜನ ಸಮಾಜವಾದಿ ಪಕ್ಷ ಮತ್ತು ಕಾಂಗ್ರೆಸ್‌ ಪಕ್ಷ ಕೈ ಕೆಳಗೆ ಮುಸ್ಲಿಮರು ಗುಲಾಮಗಿರಿ ಮಾಡಿದ್ದು ಸಾಕು. ಆ ಪಕ್ಷಗಳು ಮುಸ್ಲಿಮರನ್ನು ಕೇವಲ ಮತ ಬ್ಯಾಂಕ್‌ಗಳನ್ನಾಗಿ ಬಳಸಿಕೊಂಡಿವೆ ಎಂದು ಎಐಎಂಐಎಂ ನಾಯಕರು ಅಭಿಪ್ರಾಯ ಪಟ್ಟಿದ್ದಾರೆ.

ADVERTISEMENT

ಸುಮಾರು 82 ವಿಧಾನಸಭೆ ಕ್ಷೇತ್ರಗಳಲ್ಲಿ ಮುಸ್ಲಿಮರ ಮತಗಳು ನಿರ್ಣಾಯಕ ಪಾತ್ರ ವಹಿಸುತ್ತವೆ.

ಒವೈಸಿ ಅವರು ಉತ್ತರ ಪ್ರದೇಶದ ಅಯೋಧ್ಯೆಯಿಂದ ಕಳೆದ ತಿಂಗಳು ಪ್ರಚಾರ ಕಾರ್ಯ ಆರಂಭಿಸಿದ್ದಾರೆ.

ಮುಸ್ಲಿಂ ಸಮುದಾಯದ ಉನ್ನತಿಗಾಗಿ ಮುಸ್ಲಿಮರಲ್ಲಿ ನಾಯಕತ್ವ ಹುಟ್ಟುಹಾಕುವ ಗುರಿಯನ್ನು ಎಐಎಂಐಎಂ ಹೊಂದಿದೆ. ಜಾತ್ಯತೀತ ಎಂದು ಹೇಳಿಕೊಳ್ಳುವ ಪಕ್ಷಗಳು ಕೂಡ ಒಬ್ಬ ಮುಸ್ಲಿಂ ನಾಯಕ ರೂಪುಗೊಳ್ಳಲು ಬಿಡು ವುದಿಲ್ಲ ಎಂದು ಪಕ್ಷದ ವಕ್ತಾರ ಸಯ್ಯದ್‌ ಆಸಿಂ ವಾಖರ್‌ ಹೇಳಿದ್ದಾರೆ.

ಆದರೆ, ಎಐಎಂಐಎಂ ಕ್ರಮವನ್ನು ಎಸ್‌ಪಿ, ಬಿಎಸ್‌ಪಿ ಖಂಡಿಸಿವೆ. ಮುಸ್ಲಿಂ ಮತಗಳನ್ನು ವಿಭಜಿಸಿ ಬಿಜೆಪಿಗೆ ನೆರವಾಗಲು ಒವೈಸಿ ನಡೆಸಿರುವ ಹುನ್ನಾರ ಇದಾಗಿದೆ ಎಂದಿವೆ.

‘ಬಿಜೆಪಿ ಪರವಾಗಿ ಎಸ್‌ಪಿಯ ಮತಗಳನ್ನು ವಿಭಜಿಸಲು ಒವೈಸಿ ಪ್ರಯತ್ನಿಸುತ್ತಿದ್ದಾರೆ. ಅವರೊಬ್ಬ ಮತ ವಿಭಜಕ’ ಎಂದು ಎಸ್‌ಪಿ ನಾಯಕ ಅಬು ಆಜ್ಮಿ ಹೇಳಿದ್ದಾರೆ.

‘ಹಿಂದುತ್ವ ರಾಜಕೀಯ ಗಟ್ಟಿಯಾಗುತ್ತಿರುವ ಹಿನ್ನೆಲೆಯಲ್ಲಿ ಮುಸ್ಲಿಮರು ತಮಗೆ ಪ್ರತ್ಯೇಕ ನಾಯಕತ್ವದ ಅಗತ್ಯವಿದೆ ಎಂದು ತಿಳಿದಿದ್ದಾರೆ. ಆದ್ದರಿಂದ ಈ ಬಾರಿ ಒವೈಸಿ ಅವರ ಲೆಕ್ಕಾಚಾರ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಕೆಲಸ ಮಾಡುವುದು ಖಚಿತ’ ಎಂದು ರಾಜಕೀಯ ವಿಶ್ಲೇಷಕ ಪರ್ವೇಜ್‌ ಅಹ್ಮದ್‌ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.