ADVERTISEMENT

ತಾಲಿಬಾನ್‌ ಕುರಿತ ಹೇಳಿಕೆಯನ್ನು ಉದ್ದೇಶಪೂರ್ವಕವಾಗಿ ತಿರುಚಲಾಗುತ್ತಿದೆ: ಮೆಹಬೂಬಾ 

ಐಎಎನ್ಎಸ್
Published 9 ಸೆಪ್ಟೆಂಬರ್ 2021, 14:42 IST
Last Updated 9 ಸೆಪ್ಟೆಂಬರ್ 2021, 14:42 IST
ಮೆಹಬೂಬಾ ಮುಫ್ತಿ
ಮೆಹಬೂಬಾ ಮುಫ್ತಿ   

ಶ್ರೀನಗರ: ತಾಲಿಬಾನ್‌ ಕುರಿತ ತಮ್ಮ ಹೇಳಿಕೆಯನ್ನ ಉದ್ದೇಶಪೂರ್ಕವಾಗಿಯೇ ತಿರುಚಲಾಗಿದೆ ಎಂದು ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಗುರುವಾರ ಸ್ಪಷ್ಟನೆ ನೀಡಿದ್ದಾರೆ.

ಬುಧವಾರ ಮಾಧ್ಯಮಗಳೊಂದಿಗೆ ಮಾತನಾಡಿದ್ದ ಅವರು, 'ನಿಜವಾದ ಇಸ್ಲಾಮಿಕ್ ಷರಿಯಾವನ್ನು ಜಾರಿಗೆ ತಂದರೆ, ಜಗತ್ತಿಗೆ ತಾಲಿಬಾನ್‌ ಮಾದರಿಯಾಗಲಿದೆ ಎಂದು ಹೇಳಿದ್ದರು. ತಮ್ಮ ಈ ಹೇಳಿಕೆಯನ್ನು ತಿರುಚಲಾಗಿದೆ ಎಂದು ಅವರು ಹೇಳಿದ್ದಾರೆ.

ಈ ಬಗ್ಗೆ ಗುರುವಾರ ಟ್ವಿಟರ್‌ನಲ್ಲಿ ಬರೆದುಕೊಂಡಿರುವ ಮೆಹಬೂಬಾ ‘ಷರಿಯಾ ಕುರಿತ ನನ್ನ ಹೇಳಿಕೆಯನ್ನು ಉದ್ದೇಶಪೂರ್ವಕವಾಗಿ ತಿರುಚಿದ್ದರ ಬಗ್ಗೆ ನನಗೆ ಆಶ್ಚರ್ಯವಿಲ್ಲ. ಷರಿಯಾವನ್ನು ಎತ್ತಿಹಿಡಿಯುವುದಾಗಿ ಹೇಳಿಕೊಳ್ಳುವ ಹೆಚ್ಚಿನ ದೇಶಗಳು ಅದರ ನೈಜ ಮೌಲ್ಯಗಳನ್ನು ಗ್ರಹಿಸುವಲ್ಲಿ ವಿಫಲವಾಗಿವೆ. ಮಹಿಳೆಯರ ಮೇಲೆ ನಿರ್ಬಂಧ ಹೇರಲಷ್ಟೇ ಅದನ್ನು ಅಡ್ಡ ತರಲಾಗುತ್ತಿದೆ,‘ ಎಂದು ಅವರು ಹೇಳಿದ್ದಾರೆ.

ADVERTISEMENT

‘ನಿಜವಾದ ಮದೀನಾ ಕಾನೂನು ಪುರುಷರು, ಮಹಿಳೆಯರು ಮತ್ತು ಅಲ್ಪಸಂಖ್ಯಾತರಿಗೆ ಸಮಾನ ಹಕ್ಕುಗಳನ್ನು ನೀಡುತ್ತದೆ. ಮಹಿಳೆಯರಿಗೆ ಆಸ್ತಿ, ಸಾಮಾಜಿಕ, ಕಾನೂನು ಮತ್ತು ವಿವಾಹ ಹಕ್ಕುಗಳನ್ನು ನೀಡಲಾಗಿದೆ. ಮುಸ್ಲಿಮರಲ್ಲದವರಿಗೂ ಧಾರ್ಮಿಕ ಸ್ವಾತಂತ್ರ್ಯ ಮತ್ತು ಕಾನೂನಿನ ಹಕ್ಕುಗಳನ್ನು ನೀಡಲಾಗಿದೆ. ಇದು ಜಾತ್ಯತೀತತೆಯ ಮೂಲ ತತ್ವವಾಗಿದೆ,‘ ಎಂದು ಅವರು ಹೇಳಿದ್ದಾರೆ.

‘ಭಾರತ ಮತೀಯ ಧ್ರುವೀಕರಣಕ್ಕೆ ಒಳಗಾಗಿ, ಇಸ್ಲಾಂಫೋಬಿಯಾ ಆವರಿಸಿರುವ ಸಮಯದಲ್ಲಿ ಅಫ್ಗಾನಿಸ್ತಾನ ಬಿಕ್ಕಟ್ಟು ಪರಿಸ್ಥಿತಿಯನ್ನು ಮತ್ತಷ್ಟು ಹದಗೆಡಿಸಿದೆ. ಈ ಭಾವನೆಗಳನ್ನು ಮತ್ತಷ್ಟು ಉದ್ದೀಪಿಸುವ ಸಲುವಾಗಿಯೇ ನನ್ನ ಹೇಳಿಕೆಗಳನ್ನು ತಿರುಚಿ ಬರೆಯಲಾಗುತ್ತಿದೆ ಎಂಬುದರ ಅರಿವು ನನಗೆ ಇದೆ,‘ ಎಂದು ಅವರು ಹೇಳಿದರು.

ಬುಧವಾರ ಶ್ರೀನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ್ದ ಮೆಹಬೂಬಾ ಮುಫ್ತಿ, ‘ತಾಲಿಬಾನ್ ತನ್ನ ಮೊದಲ ಅವಧಿಯಲ್ಲಿ ಮಾನವೀಯತೆ ಮತ್ತು ಮಾನವ ಹಕ್ಕುಗಳ ವಿರುದ್ಧವಾಗಿತ್ತು.ಈ ಬಾರಿ ಅವರು ಅಫ್ಗಾನಿಸ್ತಾನವನ್ನು ಆಳಲು ಬಯಸಿದರೆ ಅವರು ಪವಿತ್ರ ಕುರಾನ್‌ನಲ್ಲಿ ನೀಡಿರುವ ನಿಜವಾದ ಇಸ್ಲಾಮಿಕ್ ಷರಿಯಾವನ್ನು ಅನುಸರಿಸಬೇಕು. ಮಹಿಳೆಯರು, ಮಕ್ಕಳು ವೃದ್ಧರನ್ನು ಗೌರವಿಸುವ, ಪ್ರವಾದಿಗಳು ನೀಡಿದ ಮದೀನಾ ಮಾದರಿಯಂತೆ ಆಡಳಿತ ನಡೆಸಬೇಕು ಎಂದು ಹೇಳಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.