
ನವದೆಹಲಿ: ಕರ್ನಾಟಕದ ಮೈಸೂರಿನಲ್ಲಿರುವ ಮಾದಕ ವಸ್ತುಗಳ ರಹಸ್ಯ ಉತ್ಪಾದನಾ ಪ್ರಯೋಗಾಲಯವೊಂದರ ಮೇಲೆ ದಾಳಿ ನಡೆಸಿದ ಮಾದಕವಸ್ತು ನಿಯಂತ್ರಣ ದಳವು ರಾಜಸ್ಥಾನದ ನಾಲ್ವರನ್ನು ಬಂಧಿಸಿ, ₹10 ಕೋಟಿ ಮೌಲ್ಯದ ಮಾದಕವಸ್ತುಗಳನ್ನು ಜಪ್ತಿ ಮಾಡಿದೆ.
35 ಕೆ.ಜಿ ಮೆಫೆಡ್ರೋನ್ ಇದ್ದ ವಾಹನವೊಂದನ್ನು ಅಧಿಕಾರಿಗಳು ಜನವರಿ 28ರಂದು ಗುಜರಾತ್‌ನಲ್ಲಿ ಪತ್ತೆಹಚ್ಚಿದ ಬಳಿಕ ಈ ಬಗ್ಗೆ ತನಿಖೆ ಆರಂಭಗೊಂಡಿತ್ತು. ಮೈಸೂರಿನಲ್ಲಿ ಅವರು ಪ್ರಯೋಗಾಲಯ ನಡೆಸುತ್ತಿರುವುದು ತನಿಖೆಯ ವೇಳೆ ಪತ್ತೆಯಾಗಿತ್ತು.
ಈ ಮಾದಕ ವಸ್ತು ಸಾಗಣೆ ಜಾಲದ ಮಾಸ್ಟರ್‌ಮೈಂಡ್ ಎನ್ನಲಾದ ಮಹೀಂದ್ರ ಕುಮಾರ್ ವಿಷ್ಣೋಯಿ ಮತ್ತು ಇತರ ಮೂವರನ್ನು ಬಂಧಿಸಲಾಗಿದೆ.
ಸ್ವಚ್ಛತೆಗೆ ಬಳಸುವ ರಾಸಾಯನಿಕ ವಸ್ತುಗಳ ತಯಾರಿಕಾ ಘಟಕದ ಹೆಸರಿನಲ್ಲಿ ಆರೋಪಿಗಳು 2024ರಲ್ಲಿ ಪ್ರಯೋಗಾಲಯವನ್ನು ನಿರ್ಮಿಸಿದ್ದರು. ಆರೋಪಿಗಳಲ್ಲಿ ಒಬ್ಬರಾದ ವಿಷ್ಣೋಯಿ ಸಂಬಂಧಿಯು ಕಟ್ಟಡವನ್ನು ಬಾಡಿಗೆಗೆ ನೀಡಿದ್ದರು ಎಂದು ಎನ್‌ಸಿಬಿ ಪ್ರಕಟಣೆ ತಿಳಿಸಿದೆ.
‘₹10 ಕೋಟಿ ಮೌಲ್ಯದ ಮಾದಕವಸ್ತು, ₹25.6 ಲಕ್ಷ ನಗದು, ಒಂದು ಎಸ್‌ಯುವಿ ಮತ್ತು 500 ಕೆ.ಜಿ ರಾಸಾಯನಿಕ ವಸ್ತುಗಳನ್ನು ಜಪ್ತಿ ಮಾಡಲಾಗಿದೆ
ಹಲವು ಪ್ರಕರಣಗಳಲ್ಲಿ ಅಪರಾಧಿಯಾಗಿರುವ ವಿಷ್ಣೋಯಿ, ರಹಸ್ಯ ಪ್ರಯೋಗಾಲಯಗಳಲ್ಲಿ ಮಾದಕ ವಸ್ತುಗಳನ್ನು ತಯಾರಿಸುವ ಯೋಜನೆಯನ್ನು ಜೈಲಿನಲ್ಲಿ ಇದ್ದಾಗ ರೂಪಿಸಿದ್ದ. ಆತನ ವಿರುದ್ಧ ರಾಜಸ್ಥಾನದಲ್ಲಿ ಮೂರು ಮತ್ತು ಗುಜರಾತ್ ಒಂದು ಪ್ರಕರಣ ದಾಖಲಾಗಿದೆ ಎಂದು ಎನ್‌ಸಿಬಿ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.