ADVERTISEMENT

ನಾಗ್ಪುರ ಹಿಂಸೆ: 6 ಮಂದಿ ವಿರುದ್ಧ ದೇಶದ್ರೋಹ ಪ್ರಕರಣ

ಪಿಟಿಐ
Published 20 ಮಾರ್ಚ್ 2025, 13:47 IST
Last Updated 20 ಮಾರ್ಚ್ 2025, 13:47 IST
<div class="paragraphs"><p>ಹಿಂಸಾಚಾರ ಬಾಧಿತ ನಾಗ್ಪುರದಲ್ಲಿ ಬಿಗುವಿನ ಸ್ಥಿತಿ ಮುಂದುವರಿದಿದ್ದು, ಗುರುವಾರವು ವ್ಯಾಪಾರ ಚಟುವಟಿಕೆ ಬಂದ್ ಆಗಿತ್ತು</p></div>

ಹಿಂಸಾಚಾರ ಬಾಧಿತ ನಾಗ್ಪುರದಲ್ಲಿ ಬಿಗುವಿನ ಸ್ಥಿತಿ ಮುಂದುವರಿದಿದ್ದು, ಗುರುವಾರವು ವ್ಯಾಪಾರ ಚಟುವಟಿಕೆ ಬಂದ್ ಆಗಿತ್ತು

   

–ಪಿಟಿಐ ಚಿತ್ರ

ನಾಗ್ಪುರ: ನಾಗ್ಪುರದಲ್ಲಿ ಈಚೆಗೆ ನಡೆದ ಹಿಂಸಾಚಾರ ಕೃತ್ಯಗಳ ಸಂಬಂಧ ಸ್ಥಳೀಯ ಮುಖಂಡ ಫಾಹಿಂ ಖಾನ್‌ ಮತ್ತು ಇತರೆ ಐವರ ಮೇಲೆ ಪೊಲೀಸರು ದೇಶದ್ರೋಹ ಮತ್ತು ಇತರೆ ಆರೋಪಗಳಿಗೆ ಸಂಬಂಧಿಸಿದಂತೆ ಪ್ರಕರಣವನ್ನು ದಾಖಲಿಸಿದ್ದಾರೆ.

ADVERTISEMENT

ನಗರದಲ್ಲಿ ಉದ್ವಿಗ್ನ ಪರಿಸ್ಥಿತಿ ಇದ್ದಾಗ ಸಾಮಾಜಿಕ ಜಾಲತಾಣಗಳ ಮೂಲಕ ವದಂತಿ ಹಬ್ಬಿಸಿದ ಕುರಿತು ಪ್ರಕರಣವನ್ನು ದಾಖಲಿಸಲಾಗಿದೆ. ಇವರು ಸೇರಿದಂತೆ ಒಟ್ಟು 50 ಜ‌ನರ ವಿರುದ್ಧ ಸೈಬರ್ ಠಾಣೆ ಪೊಲೀಸರು ಎಫ್‌ಐಆರ್‌ ದಾಖಲಿಸಿದ್ದರು. 

ಹಿಂಸಾಚಾರದಲ್ಲಿ ತೊಡಗಿದ್ದ ಕಿಡಿಗೇಡಿಗಳನ್ನು ಬಂಧಿಸಲು 18 ತಂಡ ರಚಿಸಲಾಗಿದೆ. ಈವರೆಗೆ 69 ಜನರನ್ನು ಬಂಧಿಸಲಾಗಿದೆ. ನಗರದ ಕೆಲ ಭಾಗಗಳಲ್ಲಿ ಮೂರನೇ ದಿನವಾದ ಗುರುವಾರ ಕರ್ಫ್ಯೂ ಸಡಿಲಿಸಲಾಯಿತು ಎಂದು ಪೊಲೀಸರು ತಿಳಿಸಿದರು.  

ಅಲ್ಲದೆ ಫೇಸ್‌ಬುಕ್, ಎಕ್ಸ್‌, ಇನ್‌ಸ್ಟಾಗ್ರಾಂ, ಯೂಟ್ಯೂಬ್‌ ಜಾಲತಾಣಗಳ ಸುಮಾರು 230 ಖಾತೆಗಳ ಮಾಹಿತಿ ಒದಗಿಸಲು, ಈ ಖಾತೆಗಳನ್ನು ಬ್ಲಾಕ್‌ ಮಾಡಲು ಕೋರಲಾಗಿದೆ ಎಂದು ಡಿಸಿಪಿ (ಸೈಬರ್ ಅಪರಾಧ) ಲೋಹಿತ್‌ ಮಠಾನಿ ಗುರುವಾರ ಸುದ್ದಿಗಾರರಿಗೆ ತಿಳಿಸಿದರು.

ಬಂಧಿತ ಆರು ಜನರಲ್ಲಿ ಅಲ್ಪಸಂಖ್ಯಾತ ಡೆಮಾಕ್ರಾಟಿಕ್ ಪಾರ್ಟಿ (ಎಂಡಿಪಿ) ನಗರ ಘಟಕದ ಮುಖಂಡ ಫಾಹಿಂ ಖಾನ್ ಸೇರಿದ್ದಾರೆ. ಧಾರ್ಮಿಕ ಲಿಪಿ ಒಳಗೊಂಡಿದ್ದ ಚಾದರ (ಹೊದಿಕೆ) ಅನ್ನು ಸುಟ್ಟುಹಾಕಲಾಗಿದೆ ಎಂದು ಪ್ರತಿಭಟನೆ ವೇಳೆ ವದಂತಿ ಹಬ್ಬಿಸಲಾಗಿತ್ತು ಎಂದರು.

140 ಆಕ್ಷೇಪಾರ್ಹ ಪೋಸ್ಟ್: ಜಾಲತಾಣಗಳಲ್ಲಿ ಪ್ರಸಾರ ಮಾಡಲಾಗಿದ್ದ ಒಟ್ಟು 140 ಪೋಸ್ಟ್‌ಗಳು ಆಕ್ಷೇಪಾರ್ಹ ಅಡಕ ಹೊಂದಿದ್ದವು ಎಂದು ಸೈಬರ್ ಸೆಲ್‌ ಘಟಕ ಗುರುತಿಸಿದೆ. ಈ ಖಾತೆಗಳಿಗೆ ಸಂಬಂಧಿಸಿ ಐ.ಟಿ ಕಾಯ್ದೆಯಡಿ ಪ್ರಕರಣ ದಾಖಲಿಸಿದೆ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.