ADVERTISEMENT

ನಾಗ್ಪುರ ಹಿಂಸಾಚಾರ: ಪರಿಸ್ಥಿತಿ ನಿಯಂತ್ರಣಕ್ಕೆ ಕರ್ಫ್ಯೂ ಜಾರಿ

33 ಪೊಲೀಸರು, ಐವರು ನಾಗರಿಕರಿಗೆ ಗಾಯ l 80ಕ್ಕೂ ಹೆಚ್ಚು ಜನರು ವಶಕ್ಕೆ

ಪಿಟಿಐ
Published 18 ಮಾರ್ಚ್ 2025, 14:01 IST
Last Updated 18 ಮಾರ್ಚ್ 2025, 14:01 IST
ಗಲಭೆಕೋರರು ವಾಹನಗಳಿಗೆ ಸೋಮವಾರ ರಾತ್ರಿ ಬೆಂಕಿ ಹಚ್ಚಿದ್ದರು –ಪಿಟಿಐ ಚಿತ್ರ
ಗಲಭೆಕೋರರು ವಾಹನಗಳಿಗೆ ಸೋಮವಾರ ರಾತ್ರಿ ಬೆಂಕಿ ಹಚ್ಚಿದ್ದರು –ಪಿಟಿಐ ಚಿತ್ರ   

ನಾಗ್ಪುರ: ಮೊಘಲ್‌ ದೊರೆ ಔರಂಗಜೇಬನ ಸಮಾಧಿ ತೆರವಿಗೆ ಆಗ್ರಹಿಸಿ ಪ್ರತಿಭಟನೆ ನಡೆದ ಮರುದಿನವೇ ನಾಗ್ಪುರದಲ್ಲಿ ಹಿಂಸಾಚಾರ ಭುಗಿಲೆದ್ದಿದ್ದು, ನಗರದ ಕೆಲವು ಭಾಗಗಳಲ್ಲಿ ಕರ್ಪ್ಯೂ ಜಾರಿ ಮಾಡಲಾಗಿದೆ. ಗಲಭೆಗೆ ಸಂಬಂಧಿಸಿದಂತೆ 80ಕ್ಕೂ ಹೆಚ್ಚು ಜನರನ್ನು ವಶಕ್ಕೆ ಪಡೆಯಲಾಗಿದೆ.

ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಐದು ಎಫ್‌ಐಆರ್‌ ದಾಖಲಿಸಲಾಗಿದೆ ಎಂದು ನಾಗ್ಪುರ ಪೊಲೀಸ್‌ ಆಯುಕ್ತ ರವೀಂದ್ರ ಕುಮಾರ್‌ ಸಿಂಗಾಲ್‌ ತಿಳಿಸಿದರು.

ಛತ್ರಪತಿ ಸಂಭಾಜಿನಗರ ಜಿಲ್ಲೆಯಲ್ಲಿರುವ ಔರಂಗಜೇಬನ ಸಮಾಧಿಯನ್ನು ತೆರವುಗೊಳಿಸುವಂತೆ ಆಗ್ರಹಿಸಿ ಬಲಪಂಥೀಯ ಸಂಘಟನೆಗಳು (ವಿಶ್ವ ಹಿಂದೂ ಪರಿಷತ್‌ ಮತ್ತು ಬಜರಂಗ ದಳ) ಪ್ರತಿಭಟನೆ ನಡೆಸಿದ್ದವು. ಈ ಸಂದರ್ಭದಲ್ಲಿ ಸಮಾಧಿ ಪ್ರತಿಕೃತಿಗೆ ಬೆಂಕಿ ಹಚ್ಚಲಾಗಿತ್ತು. ಆದರೆ ಪ್ರತಿಭಟನೆಯಲ್ಲಿ ಸಮುದಾಯವೊಂದರ ಪವಿತ್ರ ಪುಸ್ತಕಕ್ಕೆ ಬೆಂಕಿ ಹಾಕಲಾಗಿದೆ ಎಂಬ ವದಂತಿ ಹರಡಿದ ನಂತರ ನಾಗ್ಪುರದ ಮಹಲ್‌ ಪ್ರದೇಶದ ಚಿಟನಿಸ್‌ ಪಾರ್ಕ್‌ನಲ್ಲಿ ಸೋಮವಾರ ಸಂಜೆ 7.30ರ ಸುಮಾರಿಗೆ ಹಿಂಸಾಚಾರ ಆರಂಭವಾಗಿತ್ತು. ನೂರಾರು ಜನರ ಗುಂಪು ಪೊಲೀಸರತ್ತ ಕಲ್ಲು ತೂರಾಟ ನಡೆಸಿತು, ಕೆಲವೆಡೆ ಪೊಟ್ರೋಲ್‌ ಬಾಂಬ್‌ ಎಸೆಯಿತು ಎಂದು ಅಧಿಕಾರಿಗಳು ತಿಳಿಸಿದರು.

ADVERTISEMENT

ಇನ್ನೊಂದೆಡೆ, ಹಂಸಪುರಿ ಪ್ರದೇಶದಲ್ಲಿ ರಾತ್ರಿ 10.30ರಿಂದ 11.30ರವರೆಗೆ ಹಿಂಸಾಚಾರ ಭುಗಿಲೆದ್ದಿತ್ತು. ಉದ್ರಿಕ್ರ ಗುಂಪು ಹಲವು ವಾಹನಗಳಿಗೆ ಬೆಂಕಿ ಇಟ್ಟಿತ್ತು. ಆ ಪ್ರದೇಶದ ಮನೆಗಳು ಮತ್ತು ಕ್ಲಿನಿಕ್‌ಗಳಿಗೆ ಬೆಂಕಿ ಇಟ್ಟು, ಧ್ವಂಸಗೊಳಿಸಿತು ಎಂದು ತಿಳಿಸಿದರು.

ಹಿಂಸಾಚಾರದಲ್ಲಿ ಮೂವರು ಉಪ ಪೊಲೀಸ್‌ ಆಯುಕ್ತರು ಸೇರಿ 33 ಪೊಲೀಸ್‌ ಸಿಬ್ಬಂದಿ ಹಾಗೂ ಐವರು ನಾಗರಿಕರು ಗಾಯಗೊಂಡಿದ್ದಾರೆ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ, ನಾಗ್ಪುರ ಉಸ್ತುವಾರಿ ಸಚಿವ ಚಂದ್ರಶೇಖರ್‌ ಬಾವಂಕುಲೆ ತಿಳಿಸಿದರು.

ಪರಿಸ್ಥಿತಿಯನ್ನು ಮತ್ತಷ್ಟು ಹದಗೆಡಿಸಲು ಸಾಮಾಜಿಕ ಮಾಧ್ಯಮವನ್ನು ಬಳಸಲಾಗುತ್ತಿದೆ. ಗೃಹ ಇಲಾಖೆಯಿಂದ ಯಾವುದೇ ಕರ್ತವ್ಯಲೋಪವಾಗಿಲ್ಲ. ಹಿಂದೂ ಮತ್ತು ಮುಸ್ಲಿಂ ಸಮುದಾಯಗಳ ಮಧ್ಯೆ ಪೊಲೀಸರು ರಕ್ಷಕರಾಗಿ ಕೆಲಸ ಮಾಡಿದರು. ಸದ್ಯ ನಗರವು ಶಾಂತಿಯುತವಾಗಿದೆ. ಸ್ಥಳದಲ್ಲಿ ಪೊಲೀಸ್‌ ಪಡೆಗಳನ್ನು ನಿಯೋಜಿಸಲಾಗಿದೆ ಎಂದರು.

ಗಲಭೆಯಲ್ಲಿ ಬೆಂಕಿಗೆ ಆಹುತಿಯಾದ ವಾಹನಗಳು ಪಿಟಿಐ ಚಿತ್ರ
ಎಲ್ಲೆಲ್ಲಿ ಕರ್ಪ್ಯೂ ಜಾರಿ?
ಕೊತ್ವಾಲಿ, ಗಣೇಶ್‌ಪೇಠ್‌, ತೆಹ್ಸಿಲ್‌, ಲಕಡ್‌ಗಂಜ್‌, ಪಾಚ್‌ಪಾವಲಿ, ಶಾಂತಿನಗರ, ಸಕ್ಕರ್‌ದರ, ನಂದನವನ, ಇಮಾಮ್‌ಬದಾ, ಯಶೋಧರಾ ನಗರ, ಕಪಿಲ
ಕೋಮುಗಲಭೆ ಸೃಷ್ಟಿಸುವ ಉದ್ದೇಶದಿಂದ ನಡೆದ ಪೂರ್ವಯೋಜಿತ ದಾಳಿ ಇದಾಗಿದೆ. ಜನಸಾಮಾನ್ಯರು ಮತ್ತು ಪೊಲೀಸರ ಮೇಲೂ ದಾಳಿ ನಡೆದಿದೆ
ಏಕನಾಥ ಶಿಂದೆ ಮಹಾರಾಷ್ಟ್ರ ಉಪ ಮುಖ್ಯಮಂತ್ರಿ
ಹಿಂಸಾಚಾರಕ್ಕೆ ಪ್ರಚೋದನೆ ನೀಡಿದ್ದು ಸರ್ಕಾರವೇ. ದೊರೆಯೊಬ್ಬರ ಫೋಟೊವನ್ನು ಸುಟ್ಟು ಹಾಕಲಾಯಿತು. ಈ ಬಗ್ಗೆ ದೂರು ನೀಡಿದರೂ ಕ್ರಮ ಕೈಗೊಂಡಿಲ್ಲ
ಅಸಾದುದ್ದೀನ್‌ ಓವೈಸಿ ಎಐಎಂಐಎಂ ಮುಖ್ಯಸ್ಥ
ನಾಗ್ಪುರ ಹಿಂಸಾಚಾರವು ಪಿತೂರಿಯ ಭಾಗ. ಇದರಲ್ಲಿ ಭಾಗಿಯಾದವರ ವಿರುದ್ಧ ಮಹಾರಾಷ್ಟ್ರ ಸರ್ಕಾರ ಕಠಿಣ ಕ್ರಮ ಕೈಗೊಳ್ಳಲಿದೆ ಎಂಬ ಭರವಸೆ ಇದೆ
ವಿನೋದ್‌ ಬನ್ಸಾಲ್‌ ವಿಎಚ್‌ಪಿ ನಾಯಕ
ರಾಜ್ಯದ ಆರ್ಥಿಕ ಸ್ಥಿತಿಗತಿ ಹೆಚ್ಚುತ್ತಿರುವ ಸಾಲ ನಿರುದ್ಯೋಗದ ಕುರಿತ ಪ್ರಶ್ನೆಗಳಿಂದ ತಪ್ಪಿಸಿಕೊಳ್ಳಲು ಹಿಂಸಾಚಾರಕ್ಕೆ ಪ್ರಚೋದನೆ ನೀಡಿ ರಾಜ್ಯದಲ್ಲಿ ಅಸ್ಥಿರತೆ ಸೃಷ್ಟಿಸಲಾಗುತ್ತಿದೆ
ಪ್ರಿಯಾಂಕಾ ಚತುರ್ವೇದಿ ಶಿವಸೇನಾ (ಉದ್ಧವ್‌ ಬಣ) ಸಂಸದೆ
ಯಾರೊಬ್ಬರ ಸಮಾಧಿಯನ್ನು ಒಡೆಯುವುದು ಅಥವಾ ಅದಕ್ಕೆ ಹಾನಿ ಮಾಡುವುದು ತಪ್ಪು. ಇದು ಸಹೋದರತ್ವ ಶಾಂತಿ ಸಹಬಾಳ್ವೆಯನ್ನು ನಾಶ ಮಾಡುತ್ತದೆ 
ಮಾಯಾವತಿ ಬಿಎಸ್‌ಪಿ ಮುಖ್ಯಸ್ಥೆ
ಮಹಾರಾಷ್ಟ್ರ ಸಂಭಾಜಿ ಮಹಾರಾಜ ಅವರಿಗೆ ಸೇರಿದ್ದು. ಇಲ್ಲಿ ಔರಂಗಜೇಬನ ಗುರುತು ಬೇಡ. ಕೆಲವರು ಔರಂಗಜೇಬನನ್ನು ವೈಭವೀಕರಿಸುತ್ತಿದ್ದಾರೆ. ಇದನ್ನು ನಾವು ಸಹಿಸಲ್ಲ
ದೇವೇಶ್‌ ಮಿಶ್ರಾ ವಿಎಚ್‌ಪಿ ನಾಯಕ

ಪೂರ್ವಯೋಜಿತ ದಾಳಿ: ಫಡಣವೀಸ್‌

‘ಹಿಂಸಾಚಾರವು ಪೂರ್ವಯೋಜಿತ’ ಎಂದು ಮುಖ್ಯಮಂತ್ರಿ ದೇವೆಂದ್ರ ಫಡಣವೀಸ್ ಅವರು ಹೇಳಿದರು.  ‘ಛಾವಾ’ ಸಿನಿಮಾ ಬಳಿಕ ಮೊಘಲ್‌ ರಾಜ ಔರಂಗಜೇಬನ ವಿರುದ್ಧ ಜನರು ಕೆರಳಿದ್ದಾರೆ’ ಎಂದು ವಿಧಾನಸಭೆಯಲ್ಲಿ ಹೇಳಿದರು. ನಿರ್ದಿಷ್ಟ ಮನೆಗಳು ಮತ್ತು ಕಟ್ಟಡಗಳ ಮೇಲೆ ದಾಳಿ ನಡೆದಿದೆ. ಪೊಲೀಸರು ಟೆಂಪೊ ತುಂಬ ತುಂಬಿದ್ದ ಕಲ್ಲುಗಳು ಮತ್ತು ಶಸ್ತ್ರಗಳನ್ನು ವಶಕ್ಕೆ ಪಡೆದಿದ್ದಾರೆ. ಸೋಮವಾರ ಬೆಳಿಗ್ಗೆ ಪರಿಸ್ಥಿತಿ ನಿಯಂತ್ರಣದಲ್ಲಿತ್ತು ಸಂಜೆ ವೇಳೆಗೆ ಪರಿಸ್ಥಿತಿ ಕೈಮೀರಿತ್ತು ಎಂದು ಫಡಣವೀಸ್ ತಿಳಿಸಿದರು. ದಾಳಿಯಲ್ಲಿ ಭಾಗಿಯಾದವರ ವಿರುದ್ಧ ಸರ್ಕಾರ ಕ್ರಮ ಕೈಗೊಳ್ಳಲಿದೆ. ಹಿಂದೂ– ಮುಸ್ಲಿಂ ಸಮುದಾಯಗಳ ಮಧ್ಯೆ ಮಧ್ಯವರ್ತಿಗಳಾಗಿ ಪೊಲೀಸರು ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದು ಶ್ಲಾಘಿಸಿದರು.

ಗಲಭೆ ಸರ್ಕಾರಿ ಪ್ರಾಯೋಜಿತ: ಜರಾಂಗೆ

ನಾಗ್ಪುರ ಗಲಭೆಯು ‘ಮಹಾಯುತಿ’ ಸರ್ಕಾರಿ ಪ್ರಾಯೋಜಿತ ಹಿಂಸಾಚಾರ. ಈ ಗಲಭೆಗೆ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್‌ ಅವರೇ ಕಾರಣ ಎಂದು ಮರಾಠ ಮೀಸಲಾತಿ ಹೋರಾಟಗಾರ ಮನೋಜ್‌ ಜರಾಂಗೆ ಆರೋಪಿಸಿದರು. ಮೊಘಲ್‌ ದೊರೆ ಔರಂಗಜೇಬನ ಸಮಾಧಿಗೆ ಸರ್ಕಾರವೇ ರಕ್ಷಣೆ ನೀಡುತ್ತಿದೆ. ಇದೇ ಸಮಯದಲ್ಲಿ ಸಮಾಧಿ ತೆರವಿಗೆ ಬಲಪಂಥೀಯ ಸಂಘಟನೆಗಳಿಂದ ಆಗ್ರಹ ವ್ಯಕ್ತವಾಗುತ್ತಿದೆ ಎಂದು ಹೇಳಿದರು. ಬಡಜನರು ತಮ್ಮ ನಡುವೆ ಬಡಿದಾಡಿಕೊಳ್ಳಲಿ ಎಂಬುದು ಈ ಗಲಭೆಯ ಉದ್ದೇಶ. ಜನರು ಇದನ್ನು ಅರ್ಥ ಮಾಡಿಕೊಳ್ಳಬೇಕು ಎಂದು ಹೇಳಿದರು. ಸಮಾಧಿಯನ್ನು ತೆರವುಗೊಳಿಸಬೇಕೆಂದರೆ ಕೇಂದ್ರ ಮತ್ತು ರಾಜ್ಯದಲ್ಲಿ ಅವರದ್ದೇ ಸರ್ಕಾರವಿದೆ ತೆರವುಗೊಳಿಸಲಿ. ಆದರೆ ಅದಕ್ಕೆ ಪೊಲೀಸ್‌ ರಕ್ಷಣೆ ನೀಡಲಾಗಿದೆ. ಇದನ್ನು ಜನರು ಅರ್ಥ ಮಾಡಿಕೊಳ್ಳಬೇಕು. ಸ್ಥಳೀಯ ಸಂಸ್ಥೆಗಳ ಚುನಾವಣೆ ಸಮೀಪದಲ್ಲಿದೆ. ಅವರು (ಆಡಳಿತಾರೂಢ ಪಕ್ಷಗಳು) ಗೆಲ್ಲಬೇಕಿದೆ ಎಂದು ಹೇಳಿದರು.

‘ಮಹಾ’ ಸರ್ಕಾರವೇ ಕಾರಣ: ವಿಪಕ್ಷ ಸಂಸದರು

ಹಿಂಸಾಚಾರಕ್ಕೆ ಬಿಜೆಪಿ ನೇತೃತ್ವದ ಮಹಾರಾಷ್ಟ್ರ ಸರ್ಕಾರವೇ ಕಾರಣ ಎಂದು ವಿರೋಧ ಪಕ್ಷಗಳ ಸಂಸದರು ದೂರಿದರು.

ಎಎಪಿ ಸಂಸದ ಸಂಜಯ್‌ ಸಿಂಗ್‌, ‘ನಾಗ್ಪುರದಲ್ಲಿ ದ್ವೇಷ ಹರಡಲು ಬಿಜೆಪಿ ಯತ್ನಿಸುತ್ತಿದೆ. ಬಿಜೆಪಿ ಇರುವವರೆಗೂ ದೇಶದಲ್ಲಿ ಶಾಂತಿ ನೆಲಸಲ್ಲ’ ಎಂದು ಆರೋಪಿಸಿದರು.

ಕಾಂಗ್ರೆಸ್‌ ನಾಯಕ ಕಾರ್ತಿ ಚಿದಂಬರಂ ಅವರು, ‘21ನೇ ಶತಮಾನದಲ್ಲಿದ್ದರೂ, ಜನರು 17 ಮತ್ತು 18ನೇ ಶತಮಾನದ ಇತಿಹಾಸದ ವಿಷಯವಾಗಿ ಪ್ರತಿಭಟನೆ ನಡೆಸುತ್ತಿರುವುದು ದುರದೃಷ್ಟಕರ’ ಎಂದು ಬೇಸರ ವ್ಯಕ್ತಪಡಿಸಿದರು.

‘ಛಾವಾ’ ಜನರ ಭಾವನೆ ಕೆರಳಿಸಿದೆ–ಅಠಾವಳೆ:

ಕೇಂದ್ರ ಸಚಿವ ರಾಮದಾಸ್‌ ಅಠಾವಳೆ ಅವರು, ‘ಛಾವಾ’ ಸಿನಿಮಾವು 17ನೇ ಶತಮಾನದ ಮೊಘಲ್‌ ದೊರೆ ಔರಂಗಜೇಬನ ವಿರುದ್ಧ ಜನರ ಭಾವನೆಯನ್ನು ಕೆರಳಿಸಿದೆ. ಸಮಾಧಿಯು 500 ವರ್ಷ ಹಳೆಯದು. ಆದರೆ ಛಾವ ಸಿನಿಮಾದಲ್ಲಿ ಸಂಭಾಜಿ ಮಹಾರಾಜನನ್ನು ಹತ್ಯೆಗೈದ ದೃಶ್ಯ ನೋಡಿದ ನಂತರ ಜನರು ಸಿಟ್ಟಾಗಿದ್ದಾರೆ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.